More

    ಕಸದಿಂದ ಹರಿದು ಬಂತು ಕಾಸು

    ಸುಭಾಸ ಧೂಪದಹೊಂಡ ಕಾರವಾರ

    ತ್ಯಾಜ್ಯದಿಂದ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಇಲ್ಲಿನ ನಗರಸಭೆಯ ಯೋಜನೆಗೆ ಉತ್ತಮ ಸ್ಪಂದನೆ ಸಿಕ್ಕಿದೆ. ಕೇಂದ್ರ ಪ್ರಾರಂಭವಾದ 41 ದಿನಗಳಲ್ಲಿಯೇ 10.45 ಟನ್ ಸಾವಯವ ಗೊಬ್ಬರ ಮಾರಾಟವಾಗಿದೆ.

    ನಗರಸಭೆಯು ಹಸಿ ಕಸ ಹಾಗೂ ಯುಜಿಡಿ ತ್ಯಾಜ್ಯದಿಂದ ಸಾವಯವ ಗೊಬ್ಬರ ತಯಾರಿಸುತ್ತಿದೆ. ಪ್ರತಿ ಕೆಜಿ ಗೊಬ್ಬರವನ್ನು 5 ರೂ.ಗೆ ಮಾರಾಟ ಮಾಡ ಲಾಗುತ್ತಿದೆ. ನಗರಸಭೆ ನೂತನ ಕಟ್ಟಡದ ಪಕ್ಕದಲ್ಲೇ ಗೊಬ್ಬರ ಮಾರಾಟ ಕೇಂದ್ರ ತೆರೆಯಲಾಗಿದೆ. ಅಲ್ಲದೆ, ಮನೆಮನೆ ಕಸ ಸಂಗ್ರಹಕ್ಕೆ ತೆರಳುವ ವಾಹನಗಳಲ್ಲೂ ಗೊಬ್ಬರವನ್ನು ಕಳಿಸಿಕೊಡಲಾಗುತ್ತಿದೆ. ನಗರದ ಜನ ಉದ್ಯಾನವನಕ್ಕಾಗಿ ಗೊಬ್ಬರವನ್ನು ಖರೀದಿ ಮಾಡುತ್ತಿದ್ದಾರೆ.

    ಜನವರಿ 1 ರಿಂದ ಗೊಬ್ಬರ ಮಾರಾಟ ಪ್ರಾರಂಭವಾಗಿದ್ದು, ಜ.26 ರಂದು ಮಾರಾಟ ಮಳಿಗೆ ಉದ್ಘಾಟಿಸಲಾಗಿತ್ತು. ಜನವರಿಯಲ್ಲಿ 7350 ಕೆಜಿ ಗೊಬ್ಬರ ಮಾರಾಟವಾಗಿ 36750 ರೂ. ಆದಾಯ ಬಂದಿತ್ತು. ಫೆಬ್ರವರಿಯಲ್ಲಿ 10 ದಿನದಲ್ಲಿ 3100 ಕೆಜಿ ಕಸ ಸಂಗ್ರಹವಾಗಿದ್ದು, 15,500 ರೂ. ಆದಾಯ ಬಂದಿದೆ. 25 ಕೆಜಿ ಬ್ಯಾಗ್ ಮಾಡಿ ಹೊರ ಊರುಗಳಿಗೂ ಮಾರಾಟಕ್ಕೆ ನಗರಸಭೆ ನಿರ್ಧರಿಸಿದೆ.

    ಕೊಳಚೆ ನೀರೂ ಮರು ಬಳಕೆ: ಒಳಚರಂಡಿಯಿಂದ ಬರುವ ನೀರನ್ನು ಸಂಸ್ಕರಿಸಿ ನಗರಸಭೆ ಗಾರ್ಡನ್​ಗಳಿಗೆ, ಕಟ್ಟಡಗಳ ಕ್ಯೂರಿಂಗ್​ಗೆ ಬಳಕೆ ಮಾಡಲು ನಗರಸಭೆ ಯೋಜನೆ ರೂಪಿಸಿದೆ. ಇನ್ನು ಕೆಲವೇ ತಿಂಗಳಲ್ಲಿ ಯೋಜನೆ ಜಾರಿಗೆ ಬರಲಿದೆ ಎಂದು ಪೌರಾಯುಕ್ತ ಆರ್.ಪಿ.ನಾಯ್ಕ ತಿಳಿಸಿದ್ದಾರೆ.

    ತ್ಯಾಜ್ಯದಿಂದ 5 ಲಕ್ಷ ರೂಪಾಯಿ ಆದಾಯ! :ಶಿರವಾಡ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ನಗರಸಭೆಯ ತ್ಯಾಜ್ಯ 2020 ರ ಜೂನ್​ನಿಂದ ಸಂಪೂರ್ಣ ವೈಜ್ಞಾನಿಕವಾಗಿ ವಿಲೇವಾರಿ ಮಾಡಿ ಅದನ್ನು ಗೊಬ್ಬರವಾಗಿ ಮಾರಾಟ ಮಾಡಲು ನಗರಸಭೆ ಯೋಜನೆ ಪ್ರಾರಂಭಿಸಿದೆ. ತರಕಾರಿ ಸಿಪ್ಪೆ, ಮುಂತಾದ ಹಸಿಕಸಗಳನ್ನು ಒಂದೆಡೆ ಸಂಗ್ರಹಿಸಿ ಗೊಬ್ಬರ ಮಾಡಿದರೆ, ಇನ್ನೊಂದೆಡೆ ರಟ್ಟು, ಪೇಪರ್​ಗಳನ್ನು ಪ್ರತ್ಯೇಕ ಮಾಡಲಾಗುತ್ತದೆ. ಪ್ಲಾಸ್ಟಿಕ್ ಬಾಟಲಿಗಳು, ಇತರ ಪ್ಲಾಸ್ಟಿಕ್ ತೆಂಗಿನ ಚಿಪ್ಪು, ತೆಂಗಿನ ಗರಿಗಳು, ಗಾಜಿನ ಬಾಟಲ್​ಗಳು, ಟೈರ್​ಗಳು, ಕಬ್ಬಿಣದ ತಗಡುಗಳು, ಹೀಗೆ ಎಲ್ಲವನ್ನೂ ಪ್ರತ್ಯೇಕಿಸಿ ಮಾರಾಟ ಮಾಡಲಾಗುತ್ತಿದೆ. ಕಳೆದ 9 ತಿಂಗಳಲ್ಲಿ ಕೇವಲ ಬಿಯರ್ ಬಾಟಲಿಯಿಂದಲೇ 5250 ರೂ.ಗಾಜು, ಗಾಜಿನ ಪುಡಿಯಿಂದ 30215, ಪ್ಲಾಸ್ಟಿಕ್ ಬಾಟಲಿಗಳಿಂದ 5432, ತೆಂಗಿನ ಚಿಪ್ಪಿನಿಂದ 2 ಸಾವಿರ ರೂ. ಆದಾಯ ಬಂದಿದೆ. ಒಟ್ಟಾರೆ ಇದುವರೆಗೆ ತ್ಯಾಜ್ಯದಿಂದ 5,03,832 ರೂ. ಆದಾಯ ಬಂದಿದೆ.

    ತಂಡ ಭೇಟಿ: ತ್ಯಾಜ್ಯದಿಂದಲೇ ಆದಾಯ ಗಳಿಸುವ ಕಾರವಾರ ನಗರಸಭೆಯ ವ್ಯವಸ್ಥೆ ಮಾದರಿಯಾಗಿದೆ. ಇದುವರೆಗೂ ಮಡಿಕೇರಿ ಜಿಲ್ಲೆಯ ವಿರಾಜಪೇಟೆ, ಹಾವೇರಿ, ರಾಣೆಬೆನ್ನೂರು ನಗರ ಸ್ಥಳೀಯ ಸಂಸ್ಥೆಗಳ ಜನಪ್ರತಿನಿಧಿಗಳು ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

    ತ್ಯಾಜ್ಯ ವಿಲೇವಾರಿಗೆ ಪ್ರತಿ ತಿಂಗಳು ಸುಮಾರು 10 ಲಕ್ಷ ರೂ. ಖರ್ಚಾಗುತ್ತದೆ. ಅದರ ಶೇ. 10 ರಷ್ಟು ಎಂದರೆ 1 ಲಕ್ಷ ಆದಾಯ ಬಂದರೂ ನಮಗೆ ನಷ್ಟವಿಲ್ಲ. ನಗರ ಸ್ವಚ್ಛವಾಗಿರುವ ಜತೆ ನಗರಸಭೆಗೆ ಆದಾಯವೂ ಬರುತ್ತಿದೆ. ತೆಂಗಿನ ಚಿಪ್ಪು, ಗರಿಗಳನ್ನು ಪ್ರತ್ಯೇಕ ಮಾಡಿ ಒಣಗಿಸಿದ್ದೇವೆ. ಅದನ್ನು ಸಣ್ಣ ಕಟ್ಟುಗಳನ್ನಾಗಿ ಮಾಡಿ ಪ್ರತಿ ಕಟ್ಟಿಗೆ 10 ರೂ.ನಂತೆ ಮಾರಾಟ ಮಾಡುವ ಯೋಜನೆ ರೂಪಿಸಿದ್ದೇವೆ. ತ್ಯಾಜ್ಯ ವಿಲೇವಾರಿ ಘಟಕವನ್ನು ಇಡೀ ರಾಜ್ಯದಲ್ಲೇ ಮಾದರಿಯಾಗಿ ರೂಪಿಸಲಾಗುತ್ತಿದೆ. ಅದರ ಅಧ್ಯಯನಕ್ಕೆ ಪ್ರತ್ಯೇಕ ತರಬೇತಿ ಕೇಂದ್ರ ತೆರೆಯುವ ಯೋಜನೆ ಇದೆ. | ಆರ್.ಪಿ. ನಾಯ್ಕ ನಗರಸಭೆಯ ಪ್ರಭಾರ ಪೌರಾಯುಕ್ತ

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts