More

    ಕಷ್ಟದಲ್ಲಿರುವ ಮಕ್ಕಳು 1098 ಸಂಪರ್ಕಿಸಿ

    ಚಿತ್ರದುರ್ಗ: ಕೇಂದ್ರ ಸರ್ಕಾರ ಮಿಷನ್ ವಾತ್ಸಲ್ಯ ಯೋಜನೆಯಡಿ ಕಷ್ಟದಲ್ಲಿರುವ ಮಕ್ಕಳಿಗೆ ಅಗತ್ಯ ನೆರವು ನೀಡುವ ಉದ್ದೇಶದಿಂದ 1098 ಸಹಾಯವಾಣಿ ಆರಂಭಿಸಿದೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.


    ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬೆಂಗಳೂರಿನ ಮಕ್ಕಳ ರಕ್ಷಣಾ ನಿರ್ದೇಶನಾಲಯ, ಜಿಲ್ಲಾಡಳಿತ, ಜಿಪಂ ವತಿಯಹಿಂದ ಬಾಲಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಕ್ಕಳ ಸಹಾಯವಾಣಿ ಕೇಂದ್ರ-1098 ಉದ್ಘಾಟಿಸಿ ಮಾತನಾಡಿದರು.


    ರಾಜ್ಯದ ಎಲ್ಲ ವರ್ಗದ ಜನರ ಸಮಸ್ಯೆಗಳ ಪರಿಹಾರಕ್ಕಾಗಿ 112 ಸಹಾಯವಾಣಿ ಮಾದರಿಯಲ್ಲೇ ರಾಷ್ಟ್ರಾದ್ಯಂತ ಸಂಕಷ್ಟಕ್ಕೆ ಸಿಲುಕಿರುವ ಮಕ್ಕಳ ರಕ್ಷಣೆ, ಪೋಷಣೆ ಮತ್ತು ತುರ್ತು ಸೇವೆಗಳನ್ನು ಒದಗಿಸಲು ಈ ಸಹಾಯವಾಣಿ ನೆರವಾಗಲಿದೆ ಎಂದರು.


    ಕೇಂದ್ರ ಹಾಗೂ ರಾಜ್ಯ ಸರ್ಕಾರ ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗಾಗಿ ಸಾಕಷ್ಟು ಕಾರ್ಯಕ್ರಮ ರೂಪಿಸಿವೆ. ಇವುಗಳ ಕುರಿತು ಪಾಲಕರಿಗೆ, ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯ ಅಧಿಕಾರಿಗಳಿಂದ ಆಗಬೇಕು ಎಂದು ಸಲಹೆ ನೀಡಿದರು.


    ಬಹುತೇಕ ಸಂದರ್ಭದಲ್ಲಿ ಕುಟುಂಬದ ಸದಸ್ಯರು, ಆಪ್ತರು ಹಾಗೂ ಪರಿಚಿತರಿಂದಲೇ ಮಕ್ಕಳ ಮೇಲೆ ದೌರ್ಜನ್ಯ ಆಗುವ ಸಂಭವವಿದೆ. ಇದು ಅತ್ಯಂತ ಗಾಬರಿಗೊಳಿಸುವ ವಿಚಾರ. ಆದ್ದರಿಂದ ಮಕ್ಕಳಿಗೆ ರಕ್ಷಾ ಕವಚದಂತೆ ಅಧಿಕಾರಿಗಳು ಇರಬೇಕು ಎಂದು ಸಲಹೆ ನೀಡಿದರು.


    ಸರ್ಕಾರ ಇಂತಹ ವಿಚಾರ ಗಂಭೀರವಾಗಿ ಪರಿಗಣಿಸಿ ಸಂಬಂಧಿಸಿದವರ ಮೇಲೆ ಕಠಿಣ ಕ್ರಮ ಕೈಗೊಳ್ಳಲು ಮುಂದಾದಾಗ ಮಾತ್ರ ಸಮಾಜ ಘಾತುಕ ಶಕ್ತಿಗಳಲ್ಲಿ ಭಯ ಹುಟ್ಟಲು ಸಾಧ್ಯ ಎಂದರು.


    ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಸಿ.ಸವಿತಾ ಮಾತನಾಡಿ, ಸಹಾಯವಾಣಿಯೂ ಭಿಕ್ಷಾಟನೆ, ಬಾಲಕಾರ್ಮಿಕ, ಕಾಣೆಯಾದ, ಮಾದಕ ವ್ಯಸನಿ, ಬಾಲ್ಯವಿವಾಹ, ಹಿಂಸೆ ಮತ್ತು ಲೈಂಗಿಕ ದೌರ್ಜನ್ಯಕ್ಕೆ ಒಳಗಾದ, ಶಿಕ್ಷಣದಿಂದ ವಂಚಿತರಾದ ಮಕ್ಕಳಿಗೆ ರಕ್ಷಣೆ, ಅಗತ್ಯ ನೆರವು ನೀಡಲಿದೆ. ಸಾರ್ವಜನಿಕರ ಕರೆಗೆ ತಕ್ಷಣ ಸ್ಪಂದಿಸಲಿದೆ ಎಂದು ಹೇಳಿದರು.


    ರಾಷ್ಟ್ರೀಯ ಪೋಷಣ್ ಅಭಿಯಾನ ಯೋಜನೆಯಡಿ ಪೋಷಣ್ ಮಾಸಾಚರಣೆ ಹಾಗೂ ಜಾಗೃತಿ ಕಾರ್ಯಕ್ರಮಕ್ಕೆ ಇದೇ ವೇಳೆ ಸಚಿವರು ಚಾಲನೆ ನೀಡಿದರು.


    ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಡಾ.ಆರ್.ಪ್ರಭಾಕರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೆಶಕಿ ಭಾರತಿ ಆರ್.ಬಣಕಾರ, ಅಧಿಕಾರಿಗಳಾದ ವಿಜಯಕುಮಾರ್, ಪವಿತ್ರಾ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಲೋಕೇಶ್ವರಪ್ಪ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts