More

    ಕಳೆದ ಸಾಲಿಗಿಂತ ವಾಯು ಮಾಲಿನ್ಯ ಕಡಿಮೆ

    ಬೆಂಗಳೂರು: ಪ್ರತಿ ವರ್ಷ ದೀಪಾವಳಿ ಹಬ್ಬ ಬಂದರೆ ಪಟಾಕಿ ಭರಾಟೆಯಿಂದ ಮಾಲಿನ್ಯ ಕಲುಷಿತಗೊಳ್ಳುತ್ತಿತ್ತು. ಆದರೆ, ಈ ಬಾರಿ ಕಲುಷಿತಗೊಂಡ ಮಾಲಿನ್ಯದ ಪ್ರಮಾಣ ಕಡಿಮೆಯಾಗಿದೆ ಎಂದು ಕರ್ನಾಟಕ ರಾಜ್ಯ ಪೊಲ್ಯೂಷನ್ ಕಂಟ್ರೋಲ್ ಬೋರ್ಡ್ (ಕೆಎಸ್‌ಪಿಸಿಬಿ) ತಿಳಿಸಿದೆ. ಪ್ರತಿ ವರ್ಷ ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಸುವುದರಿಂದ ಮಾಲಿನ್ಯ ಹೆಚ್ಚಳವಾಗುತ್ತಿತ್ತು. ಆದರೆ, 2019ಕ್ಕೆ ಹೋಲಿಸಿದರೆ ರಾಜಧಾನಿಯಲ್ಲಿ ಈ ಬಾರಿ ಶೇ.30.34ರಷ್ಟು ವಾಯು ಮಾಲಿನ್ಯ ಕಡಿಮೆಯಾಗಿದೆ. ಕಳೆದ ಕೆಲ ವರ್ಷಗಳಿಗೆ ಹೋಲಿಸಿದರೆ ದೀಪಾವಳಿ ಸಂದರ್ಭದಲ್ಲಿ ಕಡಿಮೆ ಮಾಲಿನ್ಯ ಉಂಟಾಗಿದೆ. ಕರೊನಾ ಭೀತಿ ಹಿನ್ನೆಲೆಯಲ್ಲಿ ಪಟಾಕಿ ಸಿಡಿಸುವವರ ಸಂಖ್ಯೆ ಕಡಿಮೆಯಾಗಿತ್ತು.

    ಹೀಗಾಗಿ ಮಾಲಿನ್ಯವೂ ಅಷ್ಟೊಂದು ಕಲುಷಿತಗೊಂಡಿಲ್ಲ. ದೀಪಾವಳಿ ಹಬ್ಬದ ಅಂಗವಾಗಿ ಪಟಾಕಿ ಖರೀದಿಸುವವರ ಸಂಖ್ಯೆಯೂ ತೀರಾ ವಿರಳವಾಗಿತ್ತು. ಸೋಮವಾರ ಸಂಜೆ ಪಟಾಕಿ ಹೊಡೆಯಲು ಕಾದು ಕುಳಿತಿದ್ದವರ ಆಸೆಗೆ ಮಳೆರಾಯ ತಣ್ಣೀರೆರಚಿದ್ದ. ಜತೆಗೆ, ಮಾಲಿನ್ಯ ನಿಯಂತ್ರಣ ಮಾಡುವ ಉದ್ದೇಶದಿಂದ ಕೆಎಸ್‌ಪಿಸಿಬಿಯು ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿತ್ತು. ಮಾಲಿನ್ಯ ನಿಯಂತ್ರಿಸುವ ನಿಟ್ಟಿನಲ್ಲಿ ಈ ಬಾರಿ ರಾಸಾಯನಿಕವಿಲ್ಲದ ಹಸಿರು ಪಟಾಕಿ ಮಾರಾಟಕ್ಕೆ ಮಾತ್ರ ಸರ್ಕಾರ ಅನುಮತಿ ನೀಡಲಾಗಿತ್ತು.

    ಈ ಎಲ್ಲ ಕಾರಣಗಳಿಂದ ದೀಪಾವಳಿ ಸಂದರ್ಭದಲ್ಲಿ ವಾಯು ಮಾಲಿನ್ಯ ಇಷ್ಟೊಂದು ಪ್ರಮಾಣದಲ್ಲಿ ಕಡಿಮೆಯಾಗಿದೆ ಎನ್ನುತ್ತಾರೆ ಅಧಿಕಾರಿಗಳು. ವಾಯು ಗುಣಮಟ್ಟ ಸಮಾಧಾನಕರ ಹಂತದಲ್ಲಿದ್ದರೆ, ಸೂಕ್ಷ್ಮ ದೇಹ ಸ್ಥಿತಿಯವರಿಗೆ ಉಸಿರಾಟದ ತೊಂದರೆ ಉಂಟಾಗುತ್ತದೆ. ಸಾಧಾರಣ ಹಂತ ತಲುಪಿದರೆ ಅಸ್ತಮಾ, ಶ್ವಾಸಕೋಶ, ಹೃದ್ರೋಗಿಗಳಿಗೆ ಉಸಿರಾಡಲು ಸಮಸ್ಯೆಯಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts