More

    ಕಳಸಾ-ಬಂಡೂರಿ ಕಾಮಗಾರಿ ಶೀಘ್ರ ಆರಂಭಿಸಿ

    ನರಗುಂದ: ಮಹದಾಯಿ ಕಳಸಾ-ಬಂಡೂರಿ ಯೋಜನೆಗೆ ರಾಜ್ಯ ಸರ್ಕಾರ 1650 ಕೋಟಿ ರೂಪಾಯಿ ಅನುದಾನ ನೀಡಿದೆ. ತಕ್ಷಣವೇ ಕಾಮಗಾರಿ ಪ್ರಾರಂಭಿಸದಿದ್ದರೆ ಸುಪ್ರೀಂಕೋರ್ಟ್​ನಲ್ಲಿ ರೈತರಿಂದಲೇ ಪಿಐಎಲ್ ಸಲ್ಲಿಸಲಾಗುವುದು ಎಂದು ರೈತಸೇನೆ ರಾಜ್ಯಾಧ್ಯಕ್ಷ ವೀರೇಶ ಸೊಬರದಮಠ ಹೇಳಿದರು.
    ಮಹದಾಯಿ ಹೋರಾಟ ಜುಲೈ 16ಕ್ಕೆ 6 ವರ್ಷ ಪೊರೈಸಿ 7ನೇ ವರ್ಷಕ್ಕೆ ಪದಾರ್ಪಣೆಗೊಂಡ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ನಿರಂತರ ಹೋರಾಟ ವೇದಿಕೆಯಲ್ಲಿ ಶುಕ್ರವಾರ ಅವರು ಮಾತನಾಡಿದರು. ‘ಉತ್ತರ ಕರ್ನಾಟಕದ ಮಹದಾಯಿ ಯೋಜನೆಗೆ ಈ ಭಾಗದ ರೈತರು ನಿರಂತರವಾಗಿ ಹೋರಾಟ ಮಾಡಿದ್ದಾರೆ. 11 ಜನ ಪ್ರಾಣ ಕಳೆದುಕೊಂಡಿದ್ದಾರೆ. ರಾಷ್ಟ್ರಪತಿಗೆ ದಯಾಮರಣ ಅರ್ಜಿ ಸಲ್ಲಿಸಿದ್ದರಿಂದ ಸುಪ್ರಿಂಕೋರ್ಟ್ ಈ ಮಹತ್ವದ ಯೋಜನೆಗೆ ಗೆಜೆಟ್ ನೋಟಿಫಿಕೇಷನ್ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ಆದೇಶಿಸಿತು. ಆದರೆ, ಭ್ರಷ್ಟ ರಾಜಕೀಯ ಪಕ್ಷಗಳಿಂದ ಯಾವುದೇ ಪ್ರಯೋಜನವಾಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಸರ್ಕಾರ ಕೋವಿಡ್ ನಿಯಮ ಉಲ್ಲಂಘಿಸಿದ್ದಲ್ಲದೆ ಸಾಕಷ್ಟು ಭ್ರಷ್ಟಾಚಾರ ನಡೆಸಿದೆ. ಈ ಬಗ್ಗೆ ತನಿಖೆ ಕೈಗೊಳ್ಳುವಂತೆ ಸರ್ಕಾರದ ವಿರುದ್ಧ ಹೈಕೋರ್ಟ್​ನಲ್ಲಿ ಒಂದು ವಾರದ ಹಿಂದೆ ರಿಟ್ ಅರ್ಜಿ ಸಲ್ಲಿಸಿದ್ದೇವೆ. ಮಲಪ್ರಭಾ ಅಚ್ಚುಕಟ್ಟು ಪ್ರದೇಶದ ಕಾಲುವೆ ನವೀಕರಣ ಕಾಮಗಾರಿ ಕಳಪೆಯಿಂದಾಗಿ ಅಪಾರ ಪ್ರಮಾಣದ ನೀರು ಸೋರಿಕೆಯಾಗುತ್ತಿದೆ. ಇದರಿಂದ ಟೇಲ್ಯಾಂಡ್ ಪ್ರದೇಶದ ರೈತರ ಜಮೀನುಗಳಿಗೆ ಸಮರ್ಪಕವಾಗಿ ನೀರು ಪೂರೈಕೆಯಾಗುತ್ತಿಲ್ಲ. 750 ಕೋಟಿ ರೂಪಾಯಿ ಮೊತ್ತದ ಕಾಲುವೆಗಳ ನವೀಕರಣ ಕಾಮಗಾರಿಗೆ 1200 ಕೋಟಿ ರೂಪಾಯಿ ಅನುಮೋದನೆ ಪಡೆಯಲಾಗಿದೆ. ಈ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದರು.
    ಬ್ಯಾಂಕ್​ಗಳಲ್ಲಿ ಏಜೆಂಟರ ಹಾವಳಿ ಹೆಚ್ಚಾಗಿದೆ. ಬಹುತೇಕ ರೈತರಿಗೆ ಸಾಲಮನ್ನಾ ಯೋಜನೆ ಹಣ ಇನ್ನೂ ಪಾವತಿಯಾಗಿಲ್ಲ. ಈ ಬಗ್ಗೆ ಕಾನೂನಾತ್ಮಕ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
    ನ್ಯಾಯಾಧೀಕರಣದಲ್ಲಿ ಕರ್ನಾಟಕಕ್ಕೆ ಈಗಾಗಲೇ 5.5 ಟಿಎಂಸಿ ನೀರು ಕುಡಿಯಲು ಸೇರಿ ವಿವಿಧ ಬಳಕೆಗಾಗಿ 13.5 ಟಿಎಂಸಿ ನೀರು ಹಂಚಿಕೆಯಾಗಿದೆ. 8 ಟಿಎಂಸಿ ನೀರನ್ನು ವಿದ್ಯುತ್ ಬಳಕೆಗೆ ಆದೇಶಿಸಿರುವ ಬಗ್ಗೆ ಮಾಹಿತಿ ದೊರೆತಿದೆ. ಈ ಬಗ್ಗೆ ರಾಜ್ಯ ಸರ್ಕಾರ ಹೆಚ್ಚಿನ ಗಮನ ಹರಿಸಬೇಕು. ವ್ಯಾಪಾರಸ್ಥರು ಮಾರುಕಟ್ಟೆ ದರಕ್ಕಿಂತ ಕಡಿಮೆ ದರದಲ್ಲಿ ರೈತರ ಉತ್ಪನ್ನ ಖರೀದಿಸಿದರೆ ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
    ಎಸ್.ಬಿ.ಜೋಗಣ್ಣವರ, ಗುರು ರಾಯನಗೌಡ್ರ, ರಾಘವೇಂದ್ರ ಗುಜಮಾಗಡಿ, ಈರಬಸಪ್ಪ ಹೂಗಾರ, ಶ್ರೀಶೈಲ ಮೇಟಿ, ಮಾತನಾಡಿದರು. ನರಗುಂದದ ವೀರ ಬಾಬಾಸಾಹೇಬ ಭಾವೆ ಹಾಗೂ ಹುತಾತ್ಮ ರೈತ ವೀರಪ್ಪ ಕಡ್ಲಿಕೊಪ್ಪ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಪುರಸಭೆಯಿಂದ ಹೋರಾಟ ವೇದಿಕೆವರೆಗೆ ಕೈಗೆ ಕಪ್ಪುಪಟ್ಟಿ ಕಟ್ಟಿ, ಧ್ವಜ ಹಿಡಿದುಕೊಂಡು ಕರಾಳ ದಿನ ಆಚರಿಸಲಾಯಿತು.
    ರಾಮು ಸಾಬಳೆ, ನಿಂಗಪ್ಪ ನಾಯ್ಕರ, ವೆಂಕಪ್ಪ ಹುಜರತ್ತಿ, ಯಲ್ಲಪ್ಪ ಗುಡದರಿ, ಬಸಪ್ಪ ಗುಡದರಿ, ಅರ್ಜುನ ಮಾನೆ, ಅನಸವ್ವ ಶಿಂಧೆ, ಕಾಶವ್ವ ಉಳ್ಳಾಗಡ್ಡಿ, ಬಸವ್ವ ನಾಗನೂರ, ಪಾರವ್ವ ದಾನರಡ್ಡಿ, ಚನ್ನವ್ವ ಕರ್ಜಗಿ, ಫಕೀರಪ್ಪ ಅಣ್ಣಿಗೇರಿ, ರತ್ನಾ ಸವಳಭಾವಿ, ವಿಜಯಕುಮಾರ ಹೂಗಾರ ಇತರರಿದ್ದರು.
    ಪ್ರಮುಖ ನಿರ್ಣಯಗಳು: ಶಾಶ್ವತವಾಗಿ ಬೆಂಬಲ ಬೆಲೆ ಖರೀದಿ ಕೇಂದ್ರಗಳನ್ನು ತೆರೆಯಬೇಕು. ಮಹದಾಯಿ ಯೋಜನೆ ಕುರಿತು ರ್ಚಚಿಸಲು ನೂತನ ರಾಜ್ಯಪಾಲರ ಭೇಟಿಗೆ ಅವಕಾಶ ಕಲ್ಪಿಸಿಕೊಡಬೇಕು. ಹೋರಾಟದಲ್ಲಿ ಮೃತಪಟ್ಟಿರುವ 11 ರೈತರ ಪೈಕಿ 7 ರೈತರ ಕುಟುಂಬಳಿಗೆ ತಲಾ 5 ಲಕ್ಷ ರೂಪಾಯಿ ಪರಿಹಾರವನ್ನು ಸರ್ಕಾರ ತಕ್ಷಣವೇ ನೀಡಬೇಕು. ಮಲಪ್ರಭಾ ವ್ಯಾಪ್ತಿಯ ರೈತರ ಜಮೀನುಗಳಿ ನೀರು ಪೂರೈಕೆಯಾಗಬೇಕು. ಜಮೀನುಗಳಿಗೆ ತೆರಳಲು ಸಮರ್ಪಕವಾಗಿ ರಸ್ತೆಗಳನ್ನು ನಿರ್ವಿುಸಬೇಕು ಎಂಬಿತ್ಯಾದಿ ನಿರ್ಣಯಗಳನ್ನು ಕೈಗೊಳ್ಳಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts