More

    ಕಳಸಾ-ಬಂಡೂರಿ ಕಾಮಗಾರಿ ಆರಂಭಿಸಿ

    ಗದಗ: ಮಹದಾಯಿ ತಿರುವು ಯೋಜನೆಯ ಭಾಗವೇ ಕುಡಿಯುವ ನೀರಿನ ಯೋಜನೆಯಾದ ಕಳಸಾ-ಬಂಡೂರಿ ನಾಲೆ ಜೋಡಣೆ. ಕರ್ನಾಟಕ ಸೇರಿ ಯೋಜನೆ ವ್ಯಾಪ್ತಿಯ ರಾಜ್ಯಗಳು ಮತ್ತು ಕೇಂದ್ರದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಕೂಡಲೆ ಕಾಮಗಾರಿ ಆರಂಭಿಸಿ ಜನತೆಗೆ ನೀರು ದೊರಕಿಸಬೇಕು ಎಂದು ಕಳಸಾ-ಬಂಡೂರಿ ನಾಲೆ ಜೋಡಣೆ ಹೋರಾಟ ಕೇಂದ್ರ ಸಮಿತಿ ಅಧ್ಯಕ್ಷ ವಿಜಯ ಕುಲಕರ್ಣಿ ಹೇಳಿದರು.

    ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಯೋಜನೆಯಿಂದ ಕುಡಿಯುವ ನೀರಿನ ಕಳಸಾ-ಬಂಡೂರಿ ಯೋಜನೆ ಒಂದಕ್ಕೆ 7.56 ಟಿಎಂಸಿ ನೀರು ಲಭಿಸಬೇಕು. ನ್ಯಾಯಾಧಿಕರಣ ವಿದ್ಯುತ್ ಉತ್ಪಾದನೆ ಬಳಕೆಗೆ 8 ಟಿಎಂಸಿ, ಕುಡಿಯಲು 5.42 ಟಿಎಂಸಿ ಸೇರಿ ಒಟ್ಟು 13.42 ಟಿಎಂಸಿ ಹಂಚಿಕೆ ಮಾಡಿತ್ತು. ಆದರೆ, ಕೇಂದ್ರ ಸರ್ಕಾರ ಗೆಜೆಟ್ ನೋಟಿಫಿಕೇಷನ್ ಹೊರಡಿಸಿರಲಿಲ್ಲ. ಈಗ ಸುಪ್ರೀಂಕೋರ್ಟ್ ಗೆಜೆಟ್ ಪ್ರಕಟಿಸುವಂತೆ ಕೇಂದ್ರಕ್ಕೆ ನಿರ್ದೇಶನ ನೀಡಿರುವುದು ಸ್ವಾಗತಾರ್ಹ. ಈಗಾಗಲೇ ಕಳಸಾ ಕಾಮಗಾರಿ ಪೂರ್ಣಗೊಂಡಿದ್ದು, ತಡೆಗೋಡೆ ತೆರವುಗೊಳಿಸಿ ಚೆಕ್ ಡ್ಯಾಂ ನಿರ್ವಿುಸಲು ಮುಂದಾಗಬೇಕು. ಜತೆಗೆ ಬಂಡೂರಿ ಕಾಮಗಾರಿಗೆ ಟೆಂಡರ್ ಕರೆದು ಕಾಮಗಾರಿ ಆರಂಭಿಸಬೇಕು ಎಂದರು.

    ಹೋರಾಟ ಸಮಿತಿ ಜಿಲ್ಲಾ ಸಂಚಾಲಕ ಬಸವಣ್ಣೆಯ್ಯ ಹಿರೇಮಠ ಮಾತನಾಡಿ, ಬಾದಾಮಿ ಕ್ಷೇತ್ರದ ಹಿಂದಿನ ಶಾಸಕ ಬಿ.ಎಂ. ಹೊರಕೇರಿ ಅವರ ಕನಸು ಈಗ ನನಸಾಗುತ್ತಿದೆ. ಆದರೆ, ನೀರು ಸಂಗ್ರಹಕ್ಕೆ ಸೂಕ್ತ ಸ್ಥಳದ ಕೊರತೆ ಇದ್ದುದರಿಂದ ನವಿಲುತೀರ್ಥ ಜಲಾಶಯದ ಹೂಳು ತೆಗೆಯಬೇಕು. ಜತೆಗೆ ಮಲಪ್ರಭಾ ಕಾಲುವೆ ಆಧುನೀಕರಣ ಕಾಮಗಾರಿ ಪೂರ್ಣಗೊಳಿಸಿದರೆ ಈ ಯೋಜನೆ ಸಫಲವಾಗಲಿದೆ. ಕಳಸಾ-ಬಂಡೂರಿ ಯೋಜನೆ ಜಾರಿಗೆ ರಾಜ್ಯ ಸರ್ಕಾರ ಈ ಬಜೆಟ್​ನಲ್ಲಿ ಕನಿಷ್ಠ ಸಾವಿರ ಕೋಟಿ ರೂ. ಮೀಸಲಿಡಬೇಕು ಎಂದರು. ನಿಸಾರ್ ಅಹ್ಮದ್ ಖಾಜಿ, ಆನಂದ ತೊಂಡಿಹಾಳ, ಅರುಣಕುಮಾರ ಹೊಂಬಳ, ಇತರರಿದ್ದರು.

    ಮಹದಾಯಿ ನೀರು ಸದ್ಬಳಕೆ: ಮಹದಾಯಿ, ಕಳಸಾ ಬಂಡೂರಿ ಯೋಜನೆಯಲ್ಲಿ ರಾಜ್ಯದ ಪಾಲಿನ 13.46 ಟಿಎಂಸಿ ಅಡಿ ನೀರು ಸದ್ಬಳಕೆಗೆ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಸಿ.ಸಿ. ಪಾಟೀಲ ಹೇಳಿದರು. ಗದಗದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಚಿವ ಜಗದೀಶ ಶೆಟ್ಟರ್ ನೇತೃತ್ವದಲ್ಲಿ ಬಜೆಟ್​ನಲ್ಲಿ ಯೋಜನೆ ಜಾರಿಗೆ ಸಂಪನ್ಮೂಲ ಮೀಸಲಿಡಲು ಮುಖ್ಯಮಂತ್ರಿಗೆ ಮನವಿ ಮಾಡುತ್ತೇವೆ ಎಂದರು. ಬೆಂಗಳೂರಿನ ಫ್ರೀಡಂ ಪಾರ್ಕ್​ನಲ್ಲಿ ಆಯೋಜಿಸಿದ್ದ ಸಿಎಎ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿರುವುದು ಖಂಡನೀಯ. ಯುವಜನಾಂಗ ದೇಶದ್ರೋಹಿಗಳ ಜತೆ ಕೈಜೋಡಿಸುತ್ತಿರುವುದು ವಿಷಾದಕರ ಸಂಗತಿ ಎಂದರು.

    ಗೆಜೆಟ್ ನೋಟಿಫಿಕೇಷನ್ ಹೊರಡಿಸಿ: ಮಹದಾಯಿ ಯೋಜನೆ ಅನುಷ್ಠಾನಕ್ಕೆ ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್ ಆದೇಶದಂತೆ ತಕ್ಷಣವೇ ಗೆಜೆಟ್ ನೋಟಿಫಿಕೇಷನ್ ಹೊರಡಿಸಬೇಕು ಎಂದು ಕರವೇ ಉಪಾಧ್ಯಕ್ಷ ಎಸ್.ಎಚ್. ಸೋಂಪೂರ ಆಗ್ರಹಿಸಿದರು. ನರಗುಂದ ಪಟ್ಟಣದಲ್ಲಿ ಗುರುವಾರ ಏರ್ಪಡಿಸಿದ್ದ ಕರವೇ ನರಗುಂದ ತಾಲೂಕು ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು. ಕನ್ನಡ ಭಾಷೆ, ನೆಲ-ಜಲ, ನಾಡು, ನುಡಿಗಾಗಿ ಕರವೇ ಸಂಘಟನೆ ಸರ್ವ ಸದಸ್ಯರು ಅವಿರತವಾಗಿ ಶ್ರಮಿಸಬೇಕಾಗಿದೆ ಎಂದರು. ಹನುಮಂತ ಅಬ್ಬಿಗೇರಿ, ಶರಣು ಗೋಡಿ, ನಬೀಸಾಬ್ ಕಿಲ್ಲೇದಾರ, ಮಾಲಾ ಪಾಟೀಲ, ಈಶ್ವರಯ್ಯ ಹಿರೇಮಠ, ಫಯಾಜ್ ಪಠಾಣ, ಜಯಶ್ರೀ ಚಲವಾದಿ, ಅನಿಲ ನರಗುಂದ, ಮಕ್ತುಮಸಾಬ್ ಕರಮನಿ, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts