More

    ಕಲ್ಲು ಗಣಿಗಾರಿಕೆಗೆ ಕರಗುತ್ತಿವೆ ಲಕ್ಷ್ಮೇಶ್ವರ, ಶಿರಹಟ್ಟಿ ತಾಲೂಕಿನ ಗುಡ್ಡಗಳು

    ಲಕ್ಷ್ಮೇಶ್ವರ: ಜಿಲ್ಲೆಯಲ್ಲಿ ವಿಪುಲವಾದ ನೈಸರ್ಗಿಕ ಸಂಪತ್ತು ಹೊಂದಿರುವ ತಾಲೂಕುಗಳೆಂದರೆ ಶಿರಹಟ್ಟಿ ಮತ್ತು ಲಕ್ಷ್ಮೇಶ್ವರ. ಇತ್ತೀಚಿನ ವರ್ಷಗಳಲ್ಲಿ ಇಲ್ಲಿನ ನೈಸರ್ಗಿಕ ಸಂಪತ್ತಿನ ಮೇಲೆ ಉಳ್ಳವರ ಕೆಂಗಣ್ಣು ಬಿದ್ದಿದೆ. ಅಧಿಕೃತವಾಗಿಯೋ ಅಥವಾ ಅನಧಿಕೃತವಾಗಿಯೋ ನಿತ್ಯವೂ ನಿರಂತರವಾಗಿ ಲೂಟಿ ಕಾರ್ಯ ನಡೆದಿದೆ.

    ಉತ್ತರ ಕರ್ನಾಟಕದ ಸಹ್ಯಾದ್ರಿಯಾದ ಕಪ್ಪತಗುಡ್ಡದ ಸೆರಗಿನಲ್ಲಿರುವ ಈ ತಾಲೂಕುಗಳ ಗುಡ್ಡಗಳು ಕಲ್ಲು ಗಣಿಗಾರಿಕೆ ನಡೆಸುತ್ತಿರುವ ಕ್ರಷರ್​ಗಳ ಸದ್ದಿನಿಂದ ಮಂಜಿನಂತೆ ಕರಗುತ್ತಿವೆ. ಈ ಗುಡ್ಡಗಳಲ್ಲಿ ಖಡಿ, ಎಂ. ಸ್ಯಾಂಡ್ ತಯಾರಿಸಿ ರಾಜ್ಯಾದ್ಯಂತ ಸಾಗಿಸಲಾಗುತ್ತದೆ. ಮನೆ ಕಟ್ಟಲು ಬಳಸುವ ಕಲ್ಲುಗಳು ದುಬಾರಿಯಾಗಿವೆ. ಆದರೆ, ಅರಣ್ಯ ಮತ್ತು ಕಂದಾಯ ಇಲಾಖೆಯ ವ್ಯಾಪ್ತಿಯ ಈ ಗುಡ್ಡಗಳಲ್ಲಿ ಗಣಿಗಾರಿಕೆ ಅವ್ಯಾಹತವಾಗಿ ನಡೆದಿದ್ದರೂ ಅಧಿಕಾರಿಗಳು ಆಕ್ಷೇಪ ವ್ಯಕ್ತಪಡಿಸದಿರುವುದು ಪ್ರಶ್ನಾರ್ಹವಾಗಿದೆ.

    ಲಕ್ಷೆ್ಮೕಶ್ವರ ತಾಲೂಕಿನ ಆದ್ರಳ್ಳಿ, ನಾದಿಗಟ್ಟಿ, ವಡ್ಡರಪಾಳ್ಯ ಸೇರಿ ವಿವಿಧೆಡೆ ಹಾಗೂ ಶಿರಹಟ್ಟಿ ತಾಲೂಕಿನ ದೇವಿಹಾಳ, ಚನ್ನಪಟ್ಟಣ, ಪರಸಾಪುರ, ಮಾಗಡಿ, ಛಬ್ಬಿ ಗ್ರಾಮಗಳ ವ್ಯಾಪ್ತಿಯಲ್ಲಿನ ಗುಡ್ಡಗಳು ದೈತ್ಯಾಕಾರದ 24 ಕ್ರಷರ್​ಗಳ ಹೊಡೆತಕ್ಕೆ ಮಾಯವಾಗುತ್ತಿವೆ. ಈ ಕ್ರಷರ್​ಗಳು ಪ್ರಭಾವಿ ರಾಜಕಾರಣಿಗಳು, ಅಧಿಕಾರಿಗಳ ಒಡೆತನದಲ್ಲಿದ್ದು, ಕಾನೂನಿನಡಿಯೇ ಕಾರ್ಯ ನಿರ್ವಹಿಸುತ್ತಿವೆ ಎಂದು ಅಧಿಕಾರಿಗಳು ಸಮರ್ಥಿಕೊಳ್ಳುತ್ತಿದ್ದಾರೆ.

    ಮೊದಲೆಲ್ಲ ಅಲ್ಪ ಪ್ರಮಾಣದಲ್ಲಿ ನಡೆಯುತ್ತಿದ್ದ ಕಲ್ಲು ಗಣಿಗಾರಿಕೆ ಈಗ ಎಲ್ಲೆ ಮೀರಿದೆ. ಬಂಡವಾಳ ಶಾಹಿಗಳು ಗುಡ್ಡಗಳ ಸುತ್ತಲಿನ ಗ್ರಾಮಸ್ಥರಿಗೆ ಆಸೆ-ಆಮಿಷವೊಡ್ಡಿ ಗಣಿಗಾರಿಕೆಗೆ ಬಳಸಿಕೊಂಡಿದ್ದಾರೆ. ಕೆಲವರು ಗುಡ್ಡಗಳನ್ನು ಸ್ಪೋಟಕಗಳಿಂದ ಛಿದ್ರ ಮಾಡಿ ಕ್ರಷರ್​ನವರಿಗೆ ಕಲ್ಲು ಸಾಗಿಸುವ ದಂಧೆ ಮಾಡುತ್ತಿದ್ದಾರೆ.

    ಮುಕ್ತಿ ಯಾವಾಗ?: ಗುಡ್ಡ ಒಡೆಯಲು ಭಾರಿ ಸ್ಪೋಟಕಗಳನ್ನು ಬಳಸುತ್ತಿರುವುದರಿಂದ ರೈತರ ಬೋರ್​ವೆಲ್​ಗಳಲ್ಲಿ ಅಂತರ್ಜಲ ಕುಸಿದಿದೆ. ಕೆಲವರ ಮನೆಗಳಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿವೆ. ಭಾರಿ ವಾಹನಗಳ ಸಂಚಾರದಿಂದ ರಸ್ತೆಗಳು ಹದಗೆಟ್ಟಿವೆ. ಸ್ಪೋಟಕಗಳ ರಭಸಕ್ಕೆ ರಾತ್ರಿ ವೇಳೆ ಮಕ್ಕಳು ಬೆಚ್ಚಿ ಬೀಳುತ್ತಿದ್ದಾರೆ. ಇದರಿಂದ ನಮಗೆ ಮುಕ್ತಿ ಯಾವಾಗ ಎಂದು ಗ್ರಾಮಸ್ಥರು ಚಿಂತೆಗೀಡಾಗಿದ್ದಾರೆ.

    ಶಿರಹಟ್ಟಿ, ಲಕ್ಷ್ಮೇಶ್ವರ ತಾಲೂಕಿನಲ್ಲಿ ಕ್ರಷರ್​ಗಳು ಅಧಿಕೃತವಾಗಿಯೇ ಕಲ್ಲು ಗಣಿಗಾರಿಕೆ ನಡೆಸುತ್ತಿವೆ. ನಾವು ಭೇಟಿ ನೀಡಿ ಪರಿಶೀಲಿಸಿದ್ದು, ಅನುಮತಿ ಪಡೆದ ಪ್ರದೇಶದಲ್ಲಿ ಮಾತ್ರ ಗಣಿಗಾರಿಕೆ ನಡೆಸಿದ್ದಾರೆ. ಆದರೆ, ಮಿತಿ ಮೀರಿದ ಭಾರವನ್ನು ವಾಹನಗಳಲ್ಲಿ ಹೇರಿ ಸಾಗಿಸುತ್ತಿರುವುದನ್ನು ಇಲಾಖೆ ಗಂಭೀರವಾಗಿ ಪರಿಗಣಿಸಿದೆ.
    | ರಾಜೇಶ ಡಿ., ಗಣಿ ಮತ್ತು ಭೂಗರ್ಭ ಇಲಾಖೆ ಜಿಲ್ಲಾ ಅಧಿಕಾರಿ

    ಅರಣ್ಯದಲ್ಲಿ ಅಕ್ರಮ ಗಣಿಗಾರಿಕೆ ತಡೆಯಲು ಈ ಭಾಗದ ಜನರಿಗೆ ತಿಳಿವಳಿಕೆ ನೀಡಲಾಗಿದೆ. ಕೆಲವರ ಮೇಲೆ ಪ್ರಕರಣಗಳನ್ನೂ ದಾಖಲಿಸಲಾಗಿದೆ. ಇಲಾಖೆ ಸಹ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಿದೆ. | ಸತೀಶ ಪೂಜಾರ, ಪ್ರಾದೇಶಿಕ ವಲಯ ಅರಣ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts