More

    ಕಲಘಟಗಿ ಪಟ್ಟಣ ಪಂಚಾಯಿತಿ ಆಡಳಿತಕ್ಕೆ ಕಸರತ್ತು

    ಕಲಘಟಗಿ: ಪಟ್ಟಣ ಪಂಚಾಯಿತಿ ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆದು 17 ತಿಂಗಳಾದ ಮೇಲೆ ಅಧ್ಯಕ್ಷ – ಉಪಾಧ್ಯಕ್ಷರ ಆಯ್ಕೆಗೆ ಸರ್ಕಾರ ಮೀಸಲಾತಿ ಪ್ರಕಟಿಸಿ ಅ. 8ರಂದು ಗೆಜೆಟ್ ಹೊರಡಿಸಿದೆ. ಹೀಗಾಗಿ ಅಧಿಕಾರಕ್ಕೇರಲು ಪಪಂ ಸದಸ್ಯರು ಭಾರಿ ಕಸರತ್ತು ನಡೆಸಿದ್ದಾರೆ. ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆಗೆ, ಉಪಾಧ್ಯಕ್ಷ ಸ್ಥಾನ ಎಸ್.ಸಿ. ಮಹಿಳೆಗೆ ಮೀಸಲಾಗಿದೆ. ಪಟ್ಟಣದ 17 ವಾರ್ಡ್ ಗಳಲ್ಲಿ 9 ಬಿಜೆಪಿ, 3ರಲ್ಲಿ ಕಾಂಗ್ರೆಸ್, 2ರಲ್ಲಿ ಜೆಡಿಎಸ್ ಹಾಗೂ ಇನ್ನುಳಿದ 3 ವಾರ್ಡ್​ಗಳಲ್ಲಿ ಪಕ್ಷೇತರ ಸದಸ್ಯರಿದ್ದಾರೆ.

    ಪ್ರಸ್ತುತ ಆಡಳಿತಾರೂಢ ಬಿಜೆಪಿಯ ಸಿ.ಎಂ. ನಿಂಬಣ್ಣವರ ಶಾಸಕರಾಗಿದ್ದು, ಅವರದೇ ಪಕ್ಷ ಪಪಂನಲ್ಲಿ ಬಹುಮತ ಹೊಂದಿದೆ. ಅಲ್ಲದೆ, ಮೂವರು ಪಕ್ಷೇತರರು ಕೈಜೋಡಿಸಿದ್ದು ಬಿಜೆಪಿಗೆ ಆನೆಬಲ ಬಂದಂತಾಗಿದೆ.

    ಪಪಂ ಅಧ್ಯಕ್ಷ ಸ್ಥಾನಕ್ಕೆ 17ನೇ ವಾರ್ಡ್​ನ ಅನಸೂಯಾ ಹೆಬ್ಬಳ್ಳಿಮಠ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ 11ನೇ ವಾರ್ಡ್​ನ ಯಲ್ಲವ್ವ ಶಿಗ್ಲಿ ಆಯ್ಕೆಯಾಗುವುದು ಬಹುತೇಕ ಖಚಿತ. ಆದರೆ, ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳು 14ನೇ ವಾರ್ಡ್ ನ ಲಕ್ಷ್ಮೀ ಪಾಲ್ಕರ, 7ನೇ ವಾರ್ಡ್​ನ ಜೆಡಿಎಸ್ ಸದಸ್ಯೆ, ಮಾಜಿ ಅಧ್ಯಕ್ಷೆ ಶಕುಂತಲಾ ಬೋಳಾರ ತೆರೆಮರೆಯ ಕಸರತ್ತು ನಡೆಸಬಹುದು. ಉಪಾಧ್ಯಕ್ಷ ಸ್ಥಾನಕ್ಕೆ 16ನೇ ವಾರ್ಡ್​ನ ಮಾಲಾ ಲಮಾಣಿ ಒತ್ತಡ ತರಬಹುದು. ಶಕುಂತಲಾ ಬೋಳಾರ ಅವರು ಕಾಂಗ್ರೆಸ್, ಪಕ್ಷೇತರರು, ಶಾಸಕರ ವಿರುದ್ಧ ಅಸಮಾಧಾನಗೊಂಡಿರುವ ಬಿಜೆಪಿ ಅಭ್ಯರ್ಥಿಗಳೊಂದಿಗೆ ಸಹಮತ ಸಾಧಿಸಿದರೆ ಅಧ್ಯಕ್ಷರಾಗಬಹುದು. ಇನ್ನು ಕ್ಷೇತ್ರಕ್ಕೆ ಮಾಜಿ ಸಚಿವ ಸಂತೋಷ ಲಾಡ್ ಅವರು ಇತ್ತೀಚೆಗೆ ಎರಡು ಬಾರಿ ಬಂದು ಹೋಗಿರುವುದು ಬಿಜೆಪಿಗೆ ಚಳ್ಳೆಹಣ್ಣು ತಿನ್ನಿಸುವ ಕಾರ್ಯಕ್ರಮ ಇರಬಹುದೇ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts