More

    ಕರೊನಾ ಹಾವಳಿ ನಡುವೆ ಮಲೇರಿಯಾ ಆತಂಕ

    ರಾಮಚಂದ್ರ ಕಿಣಿ ಭಟ್ಕಳ

    ತಾಲೂಕಿನಲ್ಲಿ ಒಂದೆಡೆ ಕರೊನಾ ತೀವ್ರ ಗತಿಯಲ್ಲಿ ಹೆಚ್ಚುತ್ತಿದ್ದರೆ, ಇನ್ನೊಂದೆಡೆ ಮಲೇರಿಯಾ ಕೇಸ್​ಗಳೂ ಸಾಕಷ್ಟು ಸಂಖ್ಯೆಯಲ್ಲಿ ಕಂಡುಬರುತ್ತಿರುವುದು ತಾಲೂಕು ಆಡಳಿತಕ್ಕೆ ತಲೆನೋವಾಗಿ ಪರಿಣಮಿಸಿದೆ.

    ಸಾಮಾನ್ಯವಾಗಿ ಪ್ರತಿವರ್ಷ ಈ ವೇಳೆಯಲ್ಲಿ ತಾಲೂಕು ಆಡಳಿತ ಮತ್ತು ಆರೋಗ್ಯ ಇಲಾಖೆ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿ ಮೂಲಕ ಮಲೇರಿಯಾ ಸಮೀಕ್ಷೆ ನಡೆಸುತ್ತಿತ್ತು. ಈ ವರ್ಷ ಇವರೆಲ್ಲರೂ ಕರೊನಾ ನಿಯಂತ್ರಣದತ್ತ ಹೆಚ್ಚಿನ ಗಮನ ಹರಿಸಿರುವುದರಿಂದ ಮಲೇರಿಯಾ ಸಮೀಕ್ಷೆ ಸಾಧ್ಯವಾಗಿಲ್ಲ.

    ಅಕ್ಕಪಕ್ಕದ ಜಿಲ್ಲೆಗಳಲ್ಲಿ ಮಲೇರಿಯಾ ಜೋರು: ಪ್ರಸ್ತುತ ತಾಲೂಕಿನಲ್ಲಿ ಮೂರು ಮಲೇರಿಯಾ ಕೇಸ್ ಕಂಡುಬಂದಿದ್ದರೂ ಉದ್ಯೋಗ, ಆಸ್ಪತ್ರೆ ಸೇರಿದಂತೆ ವಿವಿಧ ಕಾರ್ಯಗಳಿಗೆ ಹೆಚ್ಚಾಗಿ ಅವಲಂಬಿಸಿರುವ ಅಕ್ಕಪಕ್ಕದ ಉಡುಪಿ ಹಾಗೂ ದಕ್ಷಿಣ ಕನ್ನಡದಲ್ಲಿ ಮಲೇರಿಯಾ ಕೇಸ್​ಗಳು ಹೆಚ್ಚಿರುವುದು ಸ್ಥಳೀಯರಲ್ಲಿ ಆತಂಕ ಹೆಚ್ಚಿಸಿದೆ.

    900ಕ್ಕೂ ಹೆಚ್ಚು ಕೇಸ್: ಉಡುಪಿ ಹಾಗೂ ದಕ್ಷಿಣ ಕನ್ನಡದಲ್ಲಿ ಜನವರಿಯಿಂದ ಆಗಸ್ಟ್​ವರೆಗೆ 900ಕ್ಕೂ ಹೆಚ್ಚು ಮಲೇರಿಯಾ ಕೇಸ್​ಗಳು ಕಂಡುಬಂದಿರುವುದಾಗಿ ಅಲ್ಲಿನ ಆರೋಗ್ಯ ಇಲಾಖೆ ಖಚಿತಪಡಿಸಿದೆ.

    ನೈಟ್ ಬ್ಲಡ್ ಕ್ಯಾಂಪ್: ಜಿಲ್ಲೆಯಲ್ಲಿ ಮೀನುಗಾರಿಕೆಗಾಗಿ ಈಗಾಗಲೆ ಜಾರ್ಖಂಡ, ಒಡಿಸ್ಸಾ, ಪಶ್ಚಿಮ ಬಂಗಾಳಗಳಿಂದ ಕಾರ್ವಿುಕರನ್ನು ಕರೆತರಲಾಗುತ್ತಿದೆ. ಈ ರಾಜ್ಯಗಳಲ್ಲಿಯೂ ಮಲೇರಿಯಾ ಹಾಗೂ ಫೈಲೇರಿಯಾಸಿಸ್(ಆನೆಕಾಲು ರೋಗ) ಸಮಸ್ಯೆ ಹೆಚ್ಚಿದೆ. ಸಾಮಾನ್ಯವಾಗಿ ಫೈಲೇರಿಯಾಸಿಸ್ ಪರೀಕ್ಷೆ ನಡೆಸಲು ರಾತ್ರಿ 8 ಗಂಟೆಯ ನಂತರ ರಕ್ತ ಸಂಗ್ರಹಣೆ ನಡೆಸಲಾಗುತ್ತದೆ. ಇದೇ ಕಾರಣಕ್ಕಾಗಿ ಜಿಲ್ಲಾಡಳಿತ ಈಗಾಗಲೇ ಗೋಕರ್ಣದಲ್ಲಿ ನೈಟ್ ಬ್ಲಡ್ ಕ್ಯಾಂಪ್ ನಡೆಸುತ್ತಿದೆ.ಇದರಿಂದ ಮಲೇರಿಯಾ ಹಾಗೂ ಫೈಲೇರಿಯಾಸಿಸ್ ಎರಡನ್ನೂ ಒಂದೇ ಸಾರಿ ಪತ್ತೆ ಹಚ್ಚಲು ಸಹಕಾರಿಯಾಗಲಿದೆ. ಇದೇ ಮಾದರಿಯಲ್ಲಿ ಕರಾವಳಿಯ ಇತರ ಭಾಗಗಳಲ್ಲೂ ಕ್ಯಾಂಪ್ ನಡೆಸಲು ಜಿಲ್ಲಾಡಳಿತ ಮುಂದಾಗಿದೆ.

    ನಮ್ಮ ಜಿಲ್ಲೆಯಲ್ಲಿ ಮಲೇರಿಯಾ ನಿಯಂತ್ರಣದಲ್ಲಿದೆ. ಆದರೂ ಕೋವಿಡ್ 19 ಸೋಂಕಿನ ಪರಿಣಾಮ ಮಲೇರಿಯಾ ಹಾಗೂ ಇತರ ರೋಗಗಳ ಪರೀಕ್ಷೆಗೆ ಕೊಂಚ ಹಿನ್ನಡೆಯಾಗಿದೆ. ಚಳಿ ಜ್ವರದಿಂದ ಬಳಲುತ್ತಿರುವವರು ಹತ್ತಿರದ ಆಸ್ಪತ್ರೆಗೆ ಬಂದರೆ ರಕ್ತಲೇಪನ ಪರೀಕ್ಷೆ ನಡೆಸಲಾಗುತ್ತದೆ. ಒಂದು ವೇಳೆ ಮಲೇರಿಯಾ ಖಚಿತವಾದರೆ ಚಿಕಿತ್ಸೆ ನೀಡಲಾಗುತ್ತದೆ. ಭಟ್ಕಳದಲ್ಲಿ ಮಲೇರಿಯಾ ಸರ್ವೆ ನಡೆಸಲು ಸೂಚಿಸಲಾಗಿದೆ. ಯಾರು ಆತಂಕಗೊಳ್ಳುವ ಅವಶ್ಯಕತೆ ಇಲ್ಲ.

    | ಡಾ. ರಮೇಶ ರಾವ್, ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ, ಕಾರವಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts