More

    ಕರೊನಾ ಸೋಂಕಿನಿಂದ ಮೂವರು ಚೇತರಿಕೆ

    ಹಾವೇರಿ: ಕರೊನಾ ಸೋಂಕಿನಿಂದ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮೂವರು ಚೇತರಿಸಿಕೊಂಡು ಸೋಮವಾರ ಬಿಡುಗಡೆಗೊಂಡರು. ಆಸ್ಪತ್ರೆಯ ವೈದ್ಯರು ಹಾಗೂ ದಾದಿಯರು, ಅರೆವೈದ್ಯಕೀಯ ಸಿಬ್ಬಂದಿ ಚಪ್ಪಾಳೆ ಮೂಲಕ ಗುಲಾಬಿ ಹೂ ನೀಡಿ ಶುಭ ಕೋರಿ ಬೀಳ್ಕೊಟ್ಟರು.

    ಸವಣೂರ ಎಸ್​ಎಂ ಕೃಷ್ಣ ನಗರದ ನಿವಾಸಿ 55ವರ್ಷದ ಮಹಿಳೆ ಪಿ-1689, ಯಲವಿಗಿ ಗ್ರಾಮದ 27ವರ್ಷದ ಮಹಿಳೆ ಪಿ-1690 ಹಾಗೂ ಬಂಕಾಪುರ ನಿವಾಸಿ 22ವರ್ಷದ ಚಾಲಕ ಪಿ-1691 ಆಸ್ಪತ್ರೆಯಿಂದ ಬಿಡುಗಡೆಗೊಂಡವರು. ಇವರನ್ನು ಅಂಬ್ಯುಲೆನ್ಸ್ ಮೂಲಕ ಅವರವರ ಮನೆಗಳಿಗೆ ಕಳುಹಿಸಲಾಯಿತು.

    ಬಿಡುಗಡೆಯಾದ ಎಸ್.ಎಂ. ಕೃಷ್ಣಾ ನಗರದ ನಿವಾಸಿ ಮಹಿಳೆಗೆ ಯಾವುದೇ ಪ್ರವಾಸದ ಹಿನ್ನಲೆ ಇರಲಿಲ್ಲ. ಮುಂಬೈನಿಂದ ಬಂದಿದ್ದ ಪಿ-639ನಿಂದ ಸೋಂಕು ಬಂದಿತ್ತು. ಬಂಕಾಪುರ ಹಾಗೂ ಯಲವಿಗಿಯ ಸೋಂಕಿತರಿಗೆ ಮುಂಬೈ ಪ್ರವಾಸ ಹಿನ್ನಲೆ ಹೊಂದಿದ್ದರು. ಗಂಟಲ ದ್ರವ ಪರೀಕ್ಷೆಯಲ್ಲಿ ಇವರಿಗೆ ಕರೊನಾ ಸೋಂಕು ಕಂಡುಬಂದಿತ್ತು.

    ಬಿಡುಗಡೆ ಹೊಂದಿದ ಪಿ-1689 ಸವಣೂರ ಪಟ್ಟಣದ ಕಂಟೇನ್ಮೆಂಟ್ ಏರಿಯಾದ ಎಸ್​ಎಂ ಕೃಷ್ಣ ನಗರದ ನಿವಾಸಿಯಾಗಿದ್ದರು. ಪಿ-1690 27ವರ್ಷದ ಮಹಿಳೆ ಸವಣೂರ ತಾಲೂಕು ಯಲವಗಿ ಗ್ರಾಮದ ನಿವಾಸಿ ಬಿಎಸ್​ಸಿ ನರ್ಸಿಂಗ್ ವ್ಯಾಸಂಗ ಮುಗಿಸಿ ಸಿಎಚ್​ಒ ತರಬೇತಿಗಾಗಿ ಮುಂಬೈನಲ್ಲಿದ್ದ ಈ ಮಹಿಳೆ ಸೇವಾ ಸಿಂಧು ಪಾಸ್ ಪಡೆದು ಹಾವೇರಿಗೆ ಮೇ 19ರಂದು ಆಗಮಿಸಿದ್ದರು. ಪಿ-1691 22ವರ್ಷದ ವ್ಯಕ್ತಿ ಚಾಲಕ ಬಂಕಾಪುರ ನಿವಾಸಿಯಾಗಿದ್ದಾನೆ. ಈ ವ್ಯಕ್ತಿ ಬಂಕಾಪುರದಿಂದ ಮೆಣಸಿನಕಾಯಿ ಲೋಡ್​ನ್ನು ತೆಗೆದುಕೊಂಡು ಮೂರು ಬಾರಿ ಮುಂಬೈನ ವಾಸಿ ಮಾರುಕಟ್ಟೆಯ ಕೋಲ್ಡ್ ಸ್ಟೋರೇಜ್​ಗೆ ಹೋಗಿ ಬಂದಿದ್ದ. ಮೇ 22ರಂದು ಈ ಮೂವರಿಗೆ ಸೋಂಕು ದೃಢಪಟ್ಟಿತ್ತು.

    ಈ ಸಮಯದಲ್ಲಿ ಕೋವಿಡ್ ಆಸ್ಪತ್ರೆಯ ವೈದ್ಯ ಡಾ. ಸುರೇಶ ಪೂಜಾರ ಮಾತನಾಡಿ, ಈಗಾಗಲೇ ಆರು ಜನ ಸೊಂಕಿತರು ಚೇತರಿಸಿಕೊಂಡು ಬಿಡುಗಡೆಗೊಂಡಿದ್ದಾರೆ. ಉಳಿದವರು ಶೀಘ್ರದಲ್ಲಿಯೇ ಗುಣಮುಖರಾಗಲಿದ್ದು ಅವರ ಕೊನೆಯ ವರದಿ ಬಂದ ನಂತರ ಕೋವಿಡ್ ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಗುವುದು ಎಂದರು. ಈ ಸಂದರ್ಭದಲ್ಲಿ ಕರೊನಾ ನೋಡಲ್ ಅಧಿಕಾರಿ ಡಾ. ವಿಶ್ವನಾಥ ಸಾಲಿಮಠ, ಡಾ. ಎಲ್.ಎಲ್. ರಾಥೋಡ, ಡಾ. ನಿರಂಜನ ಮಾನಿಬಣಕಾರ, ಪ್ರಭಾರ ನರ್ಸಿಂಗ್ ಅಧೀಕ್ಷಕಿ ರಾಜೇಶ್ವರಿ ಭಟ್ ಇತರರಿದ್ದರು.

    ಮುಂಬೈನಿಂದ ಬಂದ ಶಿಗ್ಗಾಂವಿ ವ್ಯಕ್ತಿಗೆ ಸೋಂಕು

    ಜಿಲ್ಲೆಗೆ ಮುಂಬೈನ ಕಂಟಕ ಮುಂದುವರಿದಿದೆ. ಸೋಮವಾರ ಮತ್ತೋರ್ವ ವ್ಯಕ್ತಿಗೆ ಸೋಂಕು ದೃಢಪಟ್ಟಿದ್ದು, ಇದರೊಂದಿಗೆ ಜಿಲ್ಲೆಯಲ್ಲಿ ಕರೊನಾ ಸೋಂಕಿತರ ಸಂಖ್ಯೆ 15ಕ್ಕೇರಿದೆ.

    ಮುಂಬೈನಿಂದ ತನ್ನ ಕುಟುಂಬದೊಂದಿಗೆ ಜಿಲ್ಲೆಗೆ ಬಂದು ಶಿಗ್ಗಾಂವಿ ತಾಲೂಕಿನ ಜಕ್ಕಿನಕಟ್ಟಿಯಲ್ಲಿನ ರಾಣಿ ಚನ್ನಮ್ಮ ವಸತಿ ಶಾಲೆಯ ಸಾಂಸ್ಥಿಕ ಕ್ವಾರಂಟೈನ್​ನಲ್ಲಿ ಉಳಿದಿದ್ದ ಶಿಗ್ಗಾಂವಿ ಪಟ್ಟಣದ 57ವರ್ಷದ ನಿವಾಸಿಗೆ (ಪಿ-3271) ಸೋಮವಾರ ಕರೊನಾ ಸೋಂಕು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಕೃಷ್ಣ ಬಾಜಪೈ ತಿಳಿಸಿದ್ದಾರೆ.

    ಟ್ರಾವೆಲ್ ಹಿಸ್ಟರಿ: ಪಿ-3271 ಮೂಲತಃ ಶಿಗ್ಗಾಂವಿ ಪಟ್ಟಣದವರು. ಈ ವ್ಯಕ್ತಿ ಮುಂಬೈನ ಸಿದ್ದಿವಿನಾಯಕ ಚಾಳ ಸಾಂತಾಕ್ರೂಸ್​ನಲ್ಲಿ ಹೆಂಡತಿ ಮತ್ತು ಮಗಳೊಂದಿಗೆ ವಾಸವಾಗಿ ಕಾರ್ವಿುಕರಾಗಿ ದುಡಿಯುತ್ತಿದ್ದರು. ಮೇ 19ರಂದು ಓಲಾ ಕಂಪನಿ ಬಾಡಿಗೆ ಕಾರಿನಲ್ಲಿ ಬೆಳಗ್ಗೆ ಹೊರಟು ಪುಣೆ, ನಿಪ್ಪಾಣಿ, ಬೆಳಗಾವಿ, ಹುಬ್ಬಳ್ಳಿ ಮಾರ್ಗವಾಗಿ ತಡಸ ಚೆಕ್ ಪೋಸ್ಟ್​ಗೆ ಅಂದು ರಾತ್ರಿ 9.30ಕ್ಕೆ ಆಗಮಿಸಿದ್ದರು. ವೈದ್ಯಕೀಯ ತಪಾಸಣೆ ನಂತರ ಜಕ್ಕಿನಕಟ್ಟಿಯಲ್ಲಿನ ರಾಣಿ ಚನ್ನಮ್ಮ ವಸತಿ ಶಾಲೆಯ ಕ್ವಾರಂಟೈನ್ ಕೇಂದ್ರದಲ್ಲಿ ಇರಿಸಲಾಗಿತ್ತು. ಮೇ 24ರಂದು ಸ್ವಾಬ್ ಪರೀಕ್ಷೆಗೆ ಕಳಹಿಸಲಾಗಿತ್ತು. ಮೇ 31ರ ರಾತ್ರಿ ಪಾಸಿಟಿವ್ ವರದಿ ಬಂದ ಹಿನ್ನೆಲೆಯಲ್ಲಿ ಸೋಂಕಿತನಿಗೆ ನಿಗದಿತ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

    ಜಕ್ಕಿನಕಟ್ಟಿ ರಾಣಿ ಚನ್ನಮ್ಮ ವಸತಿ ಶಾಲೆಯ 100 ಮೀಟರ್ ವ್ಯಾಪ್ತಿಯನ್ನು ಈಗಾಗಲೇ ಕಂಟೇನ್ಮೆಂಟ್ ಜೋನ್ ಎಂದು ಘೊಷಿಸಲಾಗಿದೆ. ಜಕ್ಕಿನಕಟ್ಟಿ ಗ್ರಾಮವನ್ನು ಬಫರ್ ಜೋನ್ ಎಂದು ಗುರುತಿಸಲಾಗಿದೆ. ಶಿಗ್ಗಾಂವಿ ತಾಲೂಕು ತಹಸೀಲ್ದಾರರನ್ನು ಇನ್ಸಿಡೆಂಟ್ ಕಮಾಂಡರ್ ಎಂದು ನೇಮಿಸಿ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 15ಕ್ಕೆ ಏರಿಕೆಯಾಗಿದ್ದು, ಇದರಲ್ಲಿ ಈಗಾಗಲೇ ಆರು ಜನ ಗುಣವಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 9ಕ್ಕೆ ತಲುಪಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts