More

    ಕರೊನಾ ವಿರುದ್ಧ ಭಾರತದ ಹೋರಾಟವನ್ನು ಬೆಂಬಲಿಸುತ್ತ ಮ್ಯಾಥ್ಯೂ ಹೇಡನ್ ಹೇಳಿದ್ದೇನು?

    ಮೆಲ್ಬೋರ್ನ್: ಕರೊನಾ ವೈರಸ್ 2ನೇ ಅಲೆ ವಿರುದ್ಧದ ಭಾರತದ ಹೋರಾಟಕ್ಕೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಭಾವನಾತ್ಮಕ ಪತ್ರದ ಮೂಲಕ ಬೆಂಬಲ ಸೂಚಿಸಿದ್ದಾರೆ. ಭಾರತದ ಕರೊನಾ ಪರಿಸ್ಥಿತಿಯ ಬಗ್ಗೆ ಪಾಶ್ಚಾತ್ಯ ಮಾಧ್ಯಮಗಳು ಅಪಪ್ರಚಾರ ನಡೆಸುತ್ತಿರುವ ಬಗ್ಗೆ ಕಿಡಿಕಾರಿರುವ ಹೇಡನ್, ಹಲವಾರು ವೈವಿಧ್ಯತೆ, ಅಪಾರ ಜನಸಂಖ್ಯೆ ಹೊಂದಿರುವ ನಡುವೆಯೂ ಭಾರತ ದಿಟ್ಟವಾಗಿಯೇ ಕರೊನಾ ಪರಿಸ್ಥಿತಿಯನ್ನು ನಿಭಾಯಿಸುತ್ತಿದೆ ಎಂದೂ ಹೇಳಿದ್ದಾರೆ.

    ‘ವೈರಸ್ ಹರಡುವಿಕೆಯ ವಿರುದ್ಧ ಹೋರಾಟ ನಡೆಯುತ್ತಿರುವ ನಡುವೆ ಜಾಗತಿಕ ಮಾಧ್ಯಮಗಳು ಅಪಪ್ರಚಾರದಲ್ಲಿ ತೊಡಗಿವೆ. 1.4 ಶತಕೋಟಿ ಜನಸಂಖ್ಯೆ ಹೊಂದಿರುವ ಭಾರತದಲ್ಲಿ ಯಾವುದೇ ಸರ್ಕಾರಿ ಯೋಜನೆಯನ್ನು ಯಶಸ್ವಿಯಾಗಿ ಜಾರಿಗೊಳಿಸುವುದು ಕೂಡ ಅತ್ಯಂತ ಸವಾಲಿನದು ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕು’ ಎಂದು ಹೇಡನ್ ಪಾಶ್ಚಾತ್ಯ ಮಾಧ್ಯಮಗಳ ಮೇಲೆ ಚಾಟಿ ಬೀಸಿದ್ದಾರೆ.

    ಸಾವಿರಾರು ಮೈಲಿ ದೂರದಲ್ಲಿ ಕುಳಿತುಕೊಂಡು ಮಾತನಾಡುವವರ ಬದಲಾಗಿ ಅಲ್ಲಿ ಹೆಚ್ಚಿನ ಸಮಯ ಕಳೆದಿರುವ ನನ್ನ ಮಾತು ಕೇಳಿ. ನಾನೂ ಕೆಲ ಮಾಹಿತಿಗಳನ್ನು ಕಲೆಹಾಕಿರುವೆ. ಭಾರತದಲ್ಲಿ ಈಗಾಗಲೆ 16 ಕೋಟಿ ಜನರಿಗೆ ಲಸಿಕೆ ಹಾಕಲಾಗಿದೆ. ಇದು ಆಸ್ಟ್ರೇಲಿಯಾದ ಜನಸಂಖ್ಯೆಗಿಂತ 5 ಪಟ್ಟು ಅಧಿಕವಾಗಿದೆ. ಪ್ರತಿ ದಿನ 13 ಲಕ್ಷ ಜನರಿಗೆ ಕೋವಿಡ್ ಪರೀಕ್ಷೆ ಮಾಡಲಾಗುತ್ತದೆ ಎಂದು ಹೇಡನ್ ಹೇಳಿದ್ದಾರೆ.

    ನಿಜಕ್ಕೂ ಇನ್‌ಕ್ರೆಡಿಬಲ್ ಇಂಡಿಯಾ
    ಭಾರತದಲ್ಲಿ ಪ್ರವಾಸೋದ್ಯಮ ಜನಪ್ರಿಯಗೊಳಿಸಲು ‘ಇನ್‌ಕ್ರೆಡಿಬಲ್ ಇಂಡಿಯಾ’ ಎಂಬ ಪದ ಬಳಸಲಾಗುತ್ತದೆ. ಆಸ್ಟ್ರೇಲಿಯಾದ ಪ್ರಧಾನಿ ಸ್ಕಾಟ್ ಮಾರಿಸನ್ ಭಾರತದ ವಿಮಾನಗಳನ್ನು ನಿಷೇಧಿಸಿರುವ ನಿರ್ಧಾರದ ನಡುವೆಯೂ ಅತ್ಯಂತ ಪುರಾತನ ನಾಗಕರಿಕತೆಯ ದೇಶದ ಬಗ್ಗೆ ನನ್ನ ಮನಸ್ಸಿನಲ್ಲಿ ಈ ಪದಗಳು ಬದಲಾಗಿಲ್ಲ. ಭಾರತದ ವಿರುದ್ಧ ಯಾವುದೇ ತೀಪು ನೀಡುವ ಮುನ್ನ ಅದರ ಸಂಸ್ಕೃತಿ, ವ್ಯಾಪ್ತಿ, ಭಾಷೆ, ಮಾನವ ಸಂಪನ್ಮೂಲ ಮತ್ತು ಇತರ ಸಂಕೀರ್ಣ ಅಂಶಗಳನ್ನು ಅರಿಯಬೇಕಿದೆ. ಭಾರತದ ಶ್ರೀಮಂತ ನಾಗರಿಕತೆಗೆ ಜಗತ್ತಿನಲ್ಲಿ ಕೆಲವೇ ಕೆಲವು ಪರ‌್ಯಾಯವಿದೆ ಎಂದು 49 ವರ್ಷದ ಹೇಡನ್ ಹೇಳಿದ್ದಾರೆ.

    ಭಾರತ ನನ್ನ ಆಧ್ಯಾತ್ಮಿಕ ಮನೆ!
    ನಾನು ಕಳೆದೊಂದು ದಶಕದಿಂದ ಭಾರತಕ್ಕೆ ಭೇಟಿ ನೀಡುತ್ತಿರುವೆ. ದೇಶದ ಎಲ್ಲೆಡೆ ಅದರಲ್ಲೂ ತಮಿಳುನಾಡಿನಲ್ಲಿ ಹೆಚ್ಚಾಗಿ ಸುತ್ತಾಡಿರುವೆ. ಇದು ನನ್ನ ಆಧ್ಯಾತ್ಮಿಕ ಮನೆ. ಇಂಥ ದೊಡ್ಡ ಮತ್ತು ವೈವಿಧ್ಯತೆಯ ದೇಶವನ್ನು ನಡೆಸುವ ಸವಾಲು ಹೊಂದಿರುವ ನಾಯಕರು ಮತ್ತು ಸರ್ಕಾರಿ ಅಧಿಕಾರಿಗಳ ಮೇಲೆ ನನಗೆ ಅಪಾರವಾದ ಗೌರವವಿದೆ. ನನಗೆ ಭಾರತದಲ್ಲಿ ಹೋದಲೆಲ್ಲ ಪ್ರೀತಿ ಸಿಕ್ಕಿದೆ. ಅದಕ್ಕೆ ನಾನು ಸದಾ ಋಣಿಯಾಗಿರುವೆ. ನಾನು ಭಾರತವನ್ನು ಅತ್ಯಂತ ಹತ್ತಿರದಿಂದ ಕಂಡಿರುವೆ ಎಂದು ಹೇಳಬಲ್ಲೆ. ಹೀಗಾಗಿ ಈ ಕಷ್ಟದ ಸಮಯದಲ್ಲಿ ಮಾತ್ರವಲ್ಲದೆ ಯಾವಾಗಲೂ ನನ್ನ ಹೃದಯ ಭಾರತಕ್ಕಾಗಿ ಮಿಡಿಯುತ್ತದೆ. ಭಾರತವನ್ನು, ಅಲ್ಲಿನ ಜನರನ್ನು ಮತ್ತು ಅಪಾರವಾದ ಸವಾಲುಗಳನ್ನು ಅರಿತುಕೊಳ್ಳಲು ಅಲ್ಲಿ ಹೆಚ್ಚಿನ ಸಮಯ ಕಳೆದಿರದ ಜಾಗತಿಕ ಮಾಧ್ಯಮಗಳ ಅಪಪ್ರಚಾರದ ಬಗ್ಗೆಯೂ ಬೇಸರವಾಗುತ್ತಿದೆ ಎಂದು ಹೇಡನ್ ಹೇಳಿದ್ದಾರೆ.

    ಮರಾಠಿ ನಟಿ ಜತೆಗೆ ಚೆನ್ನೈ ಸೂಪರ್‌ಕಿಂಗ್ಸ್ ಕ್ರಿಕೆಟಿಗನ ಡೇಟಿಂಗ್?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts