More

    ಕರೊನಾ ವಿರುದ್ಧ ಗೆಲುವಿಗೆ ಆಯುರ್ವೆದ ಮದ್ದು

    ಶಿವಮೊಗ್ಗ: ಕರೊನಾದಿಂದ ಇಡೀ ದೇಶವೇ ಸಂಕಷ್ಟ ಎದುರಿಸುತ್ತಿದೆ. ಕರೊನಾ ಗೆಲ್ಲುವುದಕ್ಕೆ ಆತ್ಮವಿಶ್ವಾಸದ ಜತೆಗೆ ಆಯುರ್ವೆದವೂ ಉಪಕಾರಿ ಎಂದು ಕರೊನಾ ಸುರಕ್ಷಾ ಪಡೆ ಅಧ್ಯಕ್ಷ, ಸಚಿವ ಕೆ.ಎಸ್.ಈಶ್ವರಪ್ಪ ಅಭಿಪ್ರಾಯಪಟ್ಟರು.

    ಕುವೆಂಪು ರಂಗಮಂದಿರದಲ್ಲಿ ಸೋಮವಾರ ನಗರದ 85 ಸಾವಿರ ಮನೆಯ 4 ಲಕ್ಷ ಸದಸ್ಯರಿಗೆ 3 ಔಷಧಗಳುಳ್ಳ ಆಯುರ್ವೆದ ಕಿಟ್ ವಿತರಿಸುವ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕರೊನಾ ಹಿಮ್ಮೆಟ್ಟಿಸಲು ಆಸ್ಮಸ್ಥೈರ್ಯ ಮತ್ತು ರೋಗ ನಿರೋಧಕ ಶಕ್ತಿ ಪ್ರಮುಖ ಪಾತ್ರ ವಹಿಸಲಿದೆ ಎಂದರು.

    ಕರೊನಾ ಬರುತ್ತದೆ ಎಂದು ಯಾರೊಬ್ಬರೂ ನಿರೀಕ್ಷೆ ಮಾಡಿರಲಿಲ್ಲ. ಆದರೆ ಇಡೀ ವಿಶ್ವವನ್ನೇ ವ್ಯಾಪಿಸಿರುವ ಕರೊನಾಕ್ಕೆ ಔಷಧ ಕಂಡುಹಿಡಿಯುವ ಪ್ರಯತ್ನ ಇನ್ನೂ ನಡೆದಿದೆ. ಹಾಗಾಗಿ ಪ್ರಸ್ತುತ ಆಯುರ್ವೆದದ ಮೂಲಕ ಕರೊನಾ ಎದುರಿಸುವ ಸಾಮರ್ಥ್ಯವನ್ನು ಜನರಲ್ಲಿ ಬೆಳೆಸಬೇಕಿದೆ. ಈ ಮೂಲಕ ಸಮಾಜದ ಋಣ ತೀರಿಸಬೇಕಿದೆ ಎಂದು ಹೇಳಿದರು.

    ಕಿಟ್ ವಿತರಣೆ ಕಾರ್ಯಕ್ರಮ ಯಶಸ್ವಿಗೊಳ್ಳುವ ಜತೆಗೆ ಸಂತೃಪ್ತಿ ನೀಡಬೇಕು. ವಿವಿಧ ಸಂಘ ಸಂಸ್ಥೆಗಳ ಕಾರ್ಯಕರ್ತರನ್ನು ಜೋಡಿಸಿ ನಿಯಮಿತವಾಗಿ ಕಿಟ್​ಗಳನ್ನು ವಿತರಿಸುವ ಜವಾಬ್ದಾರಿ ಬೂತ್​ವುಟ್ಟದ ಕಮಿಟಿ ಮೇಲಿದೆ. ಯಾರ ಮನೆಗೆ ಹೆಚ್ಚು ಕೊಡದೇ, ಕಡಿಮೆಯೂ ನೀಡದೆ ಆಧಾರ್ ಕಾರ್ಡ್ ಇದ್ದವರಿಗೆ ವ್ಯವಸ್ಥಿತವಾಗಿ ತಲುಪಿಸುವ ವ್ಯವಸ್ಥೆ ಮಾಡಬೇಕೆಂದು ಸಲಹೆ ನೀಡಿದರು.

    ಜು.29ರಂದು ಆಯುರ್ವೆದ ತಜ್ಞ ಡಾ. ಗಿರಿಧರ್ ಕಜೆ ಅವರು ಶಿವಮೊಗ್ಗದಲ್ಲಿ ಕಿಟ್ ವಿತರಣೆಗೆ ಚಾಲನೆ ನೀಡಲಿದ್ದು ಅದಕ್ಕೂ ಮೊದಲೇ 1 ಲಕ್ಷ ಕಿಟ್​ಗಳು ನಗರಕ್ಕೆ ಬರಲಿವೆ. ಎಲ್ಲ 35 ವಾರ್ಡ್​ನಲ್ಲೂ ಪಕ್ಷಬೇಧ ಮರೆತು ವಿತರಣೆ ಮಾಡಬೇಕಿದೆ. ಆನಂತರ ಹಂತ ಹಂತವಾಗಿ ಕಿಟ್​ಗಳು ಬರಲಿದ್ದು ನಗರದ 4 ಲಕ್ಷ ಜನರಿಗೂ ವಿತರಣೆ ಮಾಡಬೇಕು ಎಂದರು.

    ಸುರಕ್ಷಾ ಪಡೆಯ ಮುಖಂಡ ಗಿರೀಶ್ ಕಾರಂತ್ ಮಾತನಾಡಿ, ಸಂಘ ಸಂಸ್ಥೆಯವರನ್ನು ಒಟ್ಟುಗೂಡಿಸಿಕೊಂಡು ಆಯುರ್ವೆದದ ಕಿಟ್​ಗಳನ್ನು ನಗರದ ಪ್ರತಿಯೊಬ್ಬರ ಮನೆಗೂ ವಿತರಿಸಬಹುದು. ಆದರೆ ಎಲ್ಲಿಯೂ ಲೋಪ ಆಗದಂತೆ ಎಚ್ಚರಿಕೆ ವಹಿಸಬೇಕಾಗುತ್ತದೆ ಎಂದರು.

    ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಜೆ.ಆರ್.ವಾಸುದೇವ, ಸುರಕ್ಷಾ ಪಡೆಯ ಖಜಾಂಚಿಗಳಾದ ಡಿ.ಎಸ್.ಅರುಣ್, ಕೆ.ಇ.ಕಾಂತೇಶ್, ಮೇಯರ್ ಸುವರ್ಣಾ ಶಂಕರ್, ಉಪ ಮೇಯರ್ ಸುರೇಖಾ ಮುರಳೀಧರ್, ರಶ್ಮಿ ಪ್ರವೀಣ್, ಎಸ್.ಜ್ಞಾನೇಶ್ವರ್, ಜಗದೀಶ್ ಮತ್ತಿತರರಿದ್ದರು.

    ಸಮಾಜ ಸೇವೆಗೆ ಜನ ಬೆನ್ನು ತಟ್ಟುತ್ತಿದ್ದಾರೆ. ವ್ಯಾಪಾರಿ-ಉದ್ಯಮಿಗಳು, ಗುತ್ತಿಗೆದಾರರು ನೆರವು ನೀಡುವುದಾಗಿ ಮುಂದೆ ಬಂದಿದ್ದಾರೆ. ಈಗಾಗಲೇ ಬಾಗಲಕೋಟೆ, ಕಲಬುರ್ಗಿ ಸೇರಿ ರಾಜ್ಯದ ಹಲವೆಡೆಯಿಂದ ಆಯುರ್ವೆದ ಕಿಟ್​ಗೆ ಬೇಡಿಕೆ ಬಂದಿದೆ. ಪ್ರತಿ ಕಾರ್ಯಕರ್ತರೂ ಕನಿಷ್ಠ 500 ರೂ.ನಿಂದ ತಮ್ಮ ಕೈಲಾದಷ್ಟು ನೆರವು ನೀಡಿ ರಶೀದಿ ಪಡೆದುಕೊಳ್ಳಬೇಕು.

    |ಕೆ.ಎಸ್.ಈಶ್ವರಪ್ಪ, ಜಿಲ್ಲಾ ಉಸ್ತುವಾರಿ ಸಚಿವ

    ಕರೊನಾ ನಿಯಂತ್ರಣಕ್ಕೆ ಆತ್ಮಸ್ಥೈರ್ಯದ ಜತೆಗೆ ರೋಗನಿರೋಧಕ ಶಕ್ತಿಯೂ ಅತಿ ಮುಖ್ಯವಾಗುತ್ತದೆ. ರೋಗ ನಿರೋಧಕ ಶಕ್ತಿ ಇದ್ದವರು ಕರೊನಾ ಗೆದ್ದು ಬರುತ್ತಿದ್ದಾರೆ. ಹಾಗಾಗಿ ಆಯುರ್ವೆದದ ಮೂಲಕ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದು ಇಂದಿನ ಅಗತ್ಯವಾಗಿದೆ.

    | ಡಾ. ಧನಂಜಯ್ ಸರ್ಜಿ, ಸರ್ಜಿ ಆಸ್ಪತ್ರೆ ಸಂಸ್ಥಾಪಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts