More

    ಕರೊನಾ ವಿರುದ್ಧ ಅಜಯ ಹೋರಾಟ

    ರಾಮಚಂದ್ರ ಕಿಣಿ ಭಟ್ಕಳ

    ಕಣ್ಣೆದುರೇ 9 ತಿಂಗಳ ಕರುಳ ಬಳ್ಳಿ ಆಟವಾಡುತ್ತಿದೆ. ಆದರೆ, ಎತ್ತಿ ಮುದ್ದಾಡುವಂತಿಲ್ಲ. ಮುದ್ದಿನ ಮಡದಿ ಮಾಡಿದ ಕಾಫಿ ಕುಡಿಯುವಂತಿಲ್ಲ. ಕರೊನಾ ಸೇನಾನಿಯಾಗಿರುವ ಕಾರಣ ಕಳೆದ 45 ದಿನಗಳಿಂದ ಸ್ವಯಂ ಕ್ವಾರಂಟೈನ್​ನಲ್ಲಿ ಇರುವ ಜಾಲಿ ಪಟ್ಟಣ ಪಂಚಾಯಿತಿಯ ಕಿರಿಯ ಆರೋಗ್ಯ ನಿರೀಕ್ಷಕ ಅಜಯ ಭಂಡಾರಕರ್ ಅವರ ಪರಿಸ್ಥಿತಿ ಇದು.

    ಭಟ್ಕಳದಲ್ಲಿ ಮೊದಲ ಕರೊನಾ ಪ್ರಕರಣ ಕಂಡು ಬಂದಾಗಿನಿಂದ ಮನೆ ಬಿಟ್ಟಿರುವ ಇವರು ಈತನಕ ಮನೆ ಸೇರಿಲ್ಲ. ಕಳೆದ 45 ದಿನಗಳಿಂದ ಕರೊನಾ ಸೋಂಕಿತರ ಮೇಲೆ ನಿಗಾ, ಸೋಂಕಿತರ ಮನೆ, ಎಟಿಎಂಗಳಲ್ಲಿ ಮದ್ದು ಸಿಂಪಡಣೆಯಂತಹ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಸದಾ ಅಪಾಯವನ್ನು ಎದುರಿಸುತ್ತಿದ್ದರೂ ಎದುರಿನವರಿಗೆ ಮಾತ್ರ ನಗುಮೊಗದ ಸೇವೆ ನೀಡುತ್ತ ಬಂದಿದ್ದಾರೆ. ಮದಿನಾ ಕಾಲನಿಯಲ್ಲಿ ಒಂದೇ ಮನೆಯಲ್ಲಿ 9 ಕರೊನಾ ಪ್ರಕರಣಗಳು ದೃಢಪಟ್ಟಿವೆ. ಅವರ ಮನೆ ಮತ್ತು ಅಕ್ಕಪಕ್ಕದ ಮನೆಗಳತ್ತ ತೆರಳಲು ಸಿಬ್ಬಂದಿ ಭಯಪಡುತ್ತಿದ್ದಾರೆ. ಆದರೆ, ಇವರು ಧೈರ್ಯದಿಂದ ತೆರಳಿ ಮದ್ದು ಸಿಂಪಡಣೆಯಲ್ಲಿ ತೊಡಗಿದ್ದಾರೆ.

    ಇತ್ತೀಚೆಗೆ ಮಹಿಳೆಯೊಬ್ಬರು ಮೃತಪಟ್ಟಿದ್ದರು. ಆಗ ಅವರು ಕರೊನಾದಿಂದ ಮೃತಪಟ್ಟಿದ್ದಾರೆ ಎಂದು ಸ್ಥಳೀಯರು ಅವರ ಶವ ಎತ್ತಲು ಮುಂದೆ ಬರಲಿಲ್ಲ. ಆಗಲೂ ಅಜಯ ಅವರೇ ಶವವನ್ನು ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಹೀಗೆ ಪ್ರತಿದಿನ ಕರೊನಾ ಪೀಡಿತ ಪ್ರದೇಶದಲ್ಲೇ ಕರ್ತವ್ಯ ನಿರ್ವಹಿಸುತ್ತಿರುವುದರಿಂದ ಮನೆಗೂ ತೆರಳದೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ.

    ಮನೆಯ ಪಕ್ಕದಲ್ಲಿರುವ ಕೊಠಡಿಯೊಂದರಲ್ಲಿ ಇವರು ವಾಸ ಮಾಡುತ್ತಿದ್ದಾರೆ. ಮನೆಯರೊಂದಿಗೆ ಬೆರೆಯದೇ ಒಬ್ಬರೇ ಉಪಾಹಾರ, ಊಟ ಸೇವನೆ ಮಾಡುತ್ತಿದ್ದಾರೆ. ಮನೆಯಲ್ಲಿ 9 ತಿಂಗಳ ಹಸುಗೂಸು, ಮಡದಿ ಇದ್ದು ಅವರಿಗೆ ಯಾವ ತೊಂದರೆಯೂ ಆಗಬಾರದು ಎಂದು ಸ್ವಯಂ ಕ್ವಾರಂಟೈನ್ ಆಗಿದ್ದಾರೆ.

    ಕರೊನಾ ಪ್ರಕರಣಗಳು ಒಂದೊಂದಾಗಿ ಮುಗಿಯುತ್ತ ಬಂದು ಒಂಟಿ ವಾಸ ಅಂತ್ಯಗೊಳ್ಳುತ್ತದೆ ಎನ್ನುವಷ್ಟರಲ್ಲಿ ಮತ್ತೆ ಕರೊನಾ ಪ್ರಕರಣ ಹೆಚ್ಚಾಗಿದ್ದರಿಂದ ದೊಡ್ಡ ಜವಾಬ್ದಾರಿ ಹೆಗಲೇರಿದೆ. ಈಗ ಭಟ್ಕಳ ಪಟ್ಟಣ ತುಂಬೆಲ್ಲಾ ಮದ್ದು ಸಿಂಪಡಣೆ ಸಿಂಪಡಣೆ ಮಾಡುವ ಕೆಲಸದಲ್ಲಿ ಮಾಡಬೇಕಾಗಿದೆ. ಇವರಿಗೆ ಕರ್ತವ್ಯದಲ್ಲಿ ಕಿರಿಯ ಆರೋಗ್ಯ ಸಹಾಯಕ ವಿನಾಯಕ ನಾಯ್ಕ ಹಾಗೂ ಪೌರ ಕಾರ್ವಿುಕರು ಸಹಕಾರ ನೀಡುತ್ತಿದ್ದಾರೆ. ಇವರ ಸೇವೆಗೆ ಸಾರ್ವಜನಿಕರ ಶ್ಲಾಘನೆ ವ್ಯಕ್ತವಾಗಿದೆ.

    ಕರ್ತವ್ಯ ನಿರ್ವಹಿಸಲು ಬಂದಾಗ ಅದರಲ್ಲಿ ಶ್ರದ್ಧೆ ತೋರಿಸಬೇಕು. ವೈದ್ಯರು, ಪೊಲೀಸರು, ಪೌರ ಕಾರ್ವಿುಕರು ಎಲ್ಲರೂ ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದು, ಇದರಲ್ಲಿ ನಾನೂ ಒಬ್ಬ ಅಷ್ಟೆ. ಮನೆಯಲ್ಲಿ 9 ತಿಂಗಳ ಹಸುಗೂಸು ಇರುವುದರಿಂದ ಕಳೆದ 45 ದಿನಗಳಿಂದ ಪ್ರತ್ಯೇಕ ಕೊಠಡಿಯಲ್ಲಿ ವಾಸ ಮಾಡುತ್ತಿದ್ದೇನೆ.
    | ಅಜಯ ಭಂಡಾರಕ
    ಕಿರಿಯ ಆರೋಗ್ಯ ನಿರೀಕ್ಷಕ ಪಟ್ಟಣ ಪಂಚಾಯಿತಿ ಜಾಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts