More

    ಕರೊನಾ ಭೀತಿ, ಬೆಳೆಗಾರರಿಗೆ ಫಜೀತಿ

    ರಾಜೇಂದ್ರ ಶಿಂಗನಮನೆ ಶಿರಸಿ
    ಜನರಲ್ಲಿನ ಕರೊನಾ ಭೀತಿಯನ್ನೇ ಬಂಡವಾಳ ಮಾಡಿಕೊಂಡ ವ್ಯಾಪಾರಿಗಳು ರೈತರಿಂದ ಬಾಳೆಕಾಯಿಯನ್ನು ಅತಿ ಕಡಿಮೆ ದರಕ್ಕೆ ಖರೀದಿಸುತ್ತಿದ್ದಾರೆ. ಕೆಜಿಯೊಂದಕ್ಕೆ ಕನಿಷ್ಠ 15ರಿಂದ 20 ರೂಪಾಯಿ ದರವಿದ್ದ ಬಾಳೆಕಾಯಿ ಈಗ ದಾಸನಕೊಪ್ಪ ಮಾರುಕಟ್ಟೆಯಲ್ಲಿ ಕೇವಲ 3 ರೂಪಾಯಿಗೆ ಇಳಿದಿದೆ!

    ಒಂದೆಡೆ ಕರೊನಾ ವೈರಸ್ ಭೀತಿಗೆ ಜನರು ಕಂಗಾಲಾಗಿದ್ದರೆ, ಮತ್ತೊಂದೆಡೆ ವ್ಯಾಪಾರಿಗಳು ಈ ಭೀತಿಯನ್ನೇ ಬಂಡವಾಳ ಮಾಡಿಕೊಂಡು ಹಣ ಗಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ. ‘ಕರೊನಾ ಭೀತಿಯಿಂದ ಬಹುತೇಕ ಮಾರುಕಟ್ಟೆಗಳು ಸ್ತಬ್ಧವಾಗಿದ್ದು, ಹೊರ ಜಿಲ್ಲೆ ಹಾಗೂ ರಾಜ್ಯಗಳ ಮಾರುಕಟ್ಟೆಯಲ್ಲಿ ಬಾಳೆಕಾಯಿಗೆ ಬೇಡಿಕೆ ಕುಸಿದಿದೆ. ಹೀಗಾಗಿ, ಕೊಡುವುದಾದರೆ ನಾವು ಹೇಳಿದ ದರಕ್ಕೆ ಕೊಡಿ, ಇಲ್ಲವಾದರೆ ಖರೀದಿಸುವುದಿಲ್ಲ’ ಎಂಬ ಉತ್ತರ ವ್ಯಾಪಾರಿಗಳದ್ದಾಗಿದೆ.

    ರಾಜ್ಯದ ಮಾರುಕಟ್ಟೆಯಲ್ಲಿ ಕೆಜಿ ಬಾಳೆಗೆ ಕನಿಷ್ಠ 15ರಿಂದ 20 ರೂ. ಇದೆ. ಹೀಗಿದ್ದರೂ ವರ್ತಕರು ರೈತರಿಂದ 2ರಿಂದ 3 ರೂ.ಗೆ ಕೆಜಿ ಬಾಳೆ ಕಾಯಿ ಖರೀದಿಸುತ್ತಿದ್ದಾರೆ. ಮಾರುಕಟ್ಟೆಯಲ್ಲಿ ನಡೆಯುತ್ತಿರುವ ಈ ವಂಚನೆಯಿಂದಾಗಿ ಬಾಳೆ ಬೆಳೆಗಾರರು ಕಂಗಾಲಾಗಿದ್ದು, ಅನೇಕ ಮಂದಿ ಬಾಳೆ ಬೆಳೆಗಾಗಿ ಮಾಡಿದ ಸಾಲದ ಶೂಲಕ್ಕೆ ಸಿಲುಕುವಂತಾಗಿದೆ.

    ಉತ್ತರ ಕನ್ನಡ ಜಿಲ್ಲೆಯಲ್ಲಿ ಸುಮಾರು 2900 ಹೆಕ್ಟೇರ್ ಪ್ರದೇಶದಲ್ಲಿ ಬಾಳೆ ಬೆಳೆ ಇದೆ. ಇದರಲ್ಲಿ ಶೇ. 50ಕ್ಕೂ ಹೆಚ್ಚು ಪ್ರದೇಶ ಬನವಾಸಿ ಹೋಬಳಿ ವ್ಯಾಪ್ತಿಯಲ್ಲಿದೆ. ಶಿರಸಿ ಹಾಗೂ ಇತರ ಮಾರುಕಟ್ಟೆಗಳು ದೂರವಾಗುವ ಕಾರಣಕ್ಕೆ ಇಲ್ಲಿನ ಬಾಳೆಕಾಯಿಗೆ ದಾಸನಕೊಪ್ಪದಲ್ಲಿ ನಡೆಯುವ ವಾರದ ಸಂತೆಯೇ ಮಾರುಕಟ್ಟೆ. ಇಲ್ಲಿ ಬಾಳೆಕಾಯಿ ತರುವ ರೈತರು ಇಲ್ಲಿಗೆ ಬರುವ ಸ್ಥಳೀಯ ಹಾಗೂ ಹೊರ ರಾಜ್ಯದ ವ್ಯಾಪಾರಿಗಳು ಹೇಳಿದ ದರಕ್ಕೆ ನೀಡುವುದು ಅನಿವಾರ್ಯವಾಗಿದೆ.

    ಗೋವಾ ರಾಜ್ಯವು ಉತ್ತರ ಕನ್ನಡದ ಬಾಳೆಕಾಯಿಗೆ ಬಹುದೊಡ್ಡ ಸಗಟು ಮಾರುಕಟ್ಟೆಯಾಗಿದೆ. ಶಿರಸಿ ಸೇರಿ ವಿವಿಧ ಭಾಗಗಳಿಂದ ನಿತ್ಯ ಬಾಳೆಕಾಯಿ ತುಂಬಿದ ವಾಹನಗಳು ಗೋವಾಕ್ಕೆ ತೆರಳುತ್ತಿರುತ್ತವೆ. ಆದರೆ, ಈಗ ಬೇಡಿಕೆ ಕಡಿಮೆಯಾಗಿದ್ದು, ದರ ಕುಸಿತದಿಂದ ಬೆಳೆಗಾರರು ಅಸಹಾಯಕ ಸ್ಥಿತಿ ಎದುರಿಸುತ್ತಿದ್ದಾರೆ. ಇಂಥ ಸಂದರ್ಭದಲ್ಲಿ ಕೆಲ ವ್ಯಾಪಾರಿಗಳು ತೀರಾ ಕನಿಷ್ಠ ದರಕ್ಕೆ ಬಾಳೆಕಾಯಿ ಖರೀದಿಸುತ್ತಿದ್ದಾರೆ. ಇದರಿಂದಾಗಿ, ಹಾಕಿದ ಬಂಡವಾಳವೂ ಬೆಳೆಗಾರರಿಗೆ ವಾಪಸಾಗುತ್ತಿಲ್ಲ.

    ಎಲ್ಲ ಪ್ರಕಾರದ ಬಾಳೆಕಾಯಿ ದರವೂ ಬಹುತೇಕ ಕುಸಿದಿದೆ. ಯಾಲಕ್ಕಿ ಮಿಟ್ಲಿ 25-30 ರೂ.ಗೆ ಮಾರಾಟ ಆಗುತ್ತಿದ್ದದ್ದು ಈಗ 3ರಿಂದ 4 ರೂ. ಗೆ ಕುಸಿದಿದೆ. ಕರಿಬಾಳೆ, ಜಿ-9, ಮೈಸೂರು ಬಾಳೆ ಮುಂತಾದ ತಳಿ ಬಾಳೆಕಾಯಿ ದರವೂ ಶೇ. 90ರಷ್ಟು ಕುಸಿದಿದೆ. ಮಾರುಕಟ್ಟೆಯಲ್ಲಿ ಪುಟ್ಟಬಾಳೆ ಕೆಜಿಗೆ 30 ರೂ., ಪಚಬಾಳೆ 15ರೂ. ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಕೆಲ ದಿನಗಳ ಹಿಂದಿನ ದರಕ್ಕೆ ಹೋಲಿಸಿದರೆ ಪ್ರತಿ ಕೆ.ಜಿ.ಗೆ ಮಾರುಕಟ್ಟೆಯಲ್ಲಿ ಕೇವಲ 5ರಿಂದ 6ರೂ. ಕಡಿಮೆ ಮಾಡಲಾಗಿದೆ. ಆದರೆ, ಬಾಳೆ ಬೆಳೆಗಾರರಿಗೆ ಮಾತ್ರ ದರದಲ್ಲಿ ಸಂಪೂರ್ಣ ಅನ್ಯಾಯವಾಗುತ್ತಿದೆ.
    | ಆನಂದ ಗೌಡ- ಬಾಳೆ ಬೆಳೆಗಾರ

    ಏಲಕ್ಕಿ, ನೇಂದ್ರ, ಪಚಬಾಳೆ, ಜಿ9 ಸೇರಿ ಎಲ್ಲ ತಳಿಗಳ ಬಾಳೆಕಾಯಿಯನ್ನು ಅಜಮಾಸು ಒಂದೇ ದರದಲ್ಲಿ ಖರೀದಿಸಲಾಗುತ್ತಿದೆ. ಈ ಪೈಕಿ ಪಚಬಾಳೆ, ಏಲಕ್ಕಿ ಬಾಳೆ ಸುಮಾರು 800 ಹೆಕ್ಟೇರ್ ಪ್ರದೇಶದಲ್ಲಿದ್ದು, ಒಂದು ಎಕರೆಗೆ ಕನಿಷ್ಠ 30 ಟನ್ ಇಳುವರಿ ಬರುತ್ತಿದೆ. ಈ ಪೈಕಿ ಪಚಬಾಳೆಯನ್ನು 3ರಿಂದ 4 ರೂ. ಗೂ ಖರೀದಿ ಮಾಡುವವರೂ ಇಲ್ಲದಂತಾಗಿದೆ. ಕೆಲವರು ಸಿಕ್ಕಿದಷ್ಟು ಬೆಲೆಗೆ ಭಾರದ ಮನಸ್ಸಿನಿಂದಲೇ ಮಾರಾಟ ಮಾಡಿದ್ದಾರೆ. ವ್ಯಾಪಾರಿಗಳ ಈ ತಂತ್ರದಿಂದ ಬಾಳೆ ಬೆಳೆಗಾರರು ಉಪವಾಸ ಬೀಳುವಂತಾಗಿದೆ.
    | ವಿಶ್ವ ಮಳಲಗಾಂವ- ಬಾಳೆ ಬೆಳೆಗಾರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts