More

    ಕರೊನಾ ಬದಲು ಕಳ್ಳಬಟ್ಟಿ ಹಾವಳಿ

    ರೋಣ: ಕೊರೊನಾ ಭೀತಿಯ ಹಿನ್ನೆಲೆಯಲ್ಲಿ ಲಾಕ್ ಡೌನ್ ಘೊಷಣೆಯಾಗಿದೆ. ತಾಲೂಕಿನಲ್ಲಿ ಈ ಸೋಂಕು ರೋಗದಿಂದ ಯಾರಾದರೂ ಬಾಧೆಗೊಳಗಾಗುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ, ಅಕ್ರಮ ಕಳ್ಳಬಟ್ಟಿ ದಂಧೆಯಿಂದ ಹಾನಿಯಾಗುವುದು ಖಚಿತ ಎಂಬ ಭೀತಿ ತಲೆದರೋರಿದೆ.

    ಲಾಕ್ ಡೌನ್ ಘೊಷಣೆಯಾದ ನಂತರ ತಾಲೂಕಿನಲ್ಲಿ ಅಕ್ರಮ ಮದ್ಯ ಹಾಗೂ ಕೆಲವು ಗ್ರಾಮಗಳಲ್ಲಿ ಅಕ್ರಮ ಕಳ್ಳಬಟ್ಟಿ ಮಾರಾಟ ದಂಧೆ ವ್ಯಾಪಕವಾಗಿ ಕಂಡುಬರುತ್ತಿದೆ.

    ಪೊಲೀಸರ ಕಣ್ತಪ್ಪಿಸಿ ನಿಗದಿತ ದರಕ್ಕಿಂತ ನಾಲ್ಕಾರು ಪಟ್ಟು ಅಧಿಕ ಬೆಲೆಗೆ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದರಿಂದ ಬಡ ಕುಟುಂಬಗಳು ಆರ್ಥಿಕ ತೊಂದರೆ ಅನುಭವಿಸಿದರೆ, ಕಳ್ಳಬಟ್ಟಿ ಕುಡಿದು ಎಲ್ಲಿ ಆರೋಗ್ಯ ಹದಗೆಡಿಸಿಕೊಳ್ಳುತ್ತಾರೋ ಎಂದು ಕುಟುಂಬ ಸದಸ್ಯರು ಕಣ್ಣೀರು ಇಡುತ್ತಿದ್ದಾರೆ.

    ತಾಲ್ಲೂಕಿನ ಬೆಳವಣಿಕಿ, ಮುಗಳಿ, ಕುರಬನಾಳ, ನೆಲ್ಲೂರ, ಗುಡ್ಡದಬೈರಾಪೂರ ಸೇರಿ ಕೆಲ ಗ್ರಾಮಗಳಲ್ಲಿ ಅಕ್ರಮವಾಗಿ ಕಳ್ಳ ಬಟ್ಟಿ , ಮದ್ಯ ಮಾರಾಟ ಮಾಡಲಾಗುತ್ತಿದೆ. ಈ ಬಗ್ಗೆ ಮಾಹಿತಿ ಪಡೆದ ಅಬಕಾರಿ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರಾದರೂ ಅಕ್ರಮ ದಂಧೆ ಸಂಪೂರ್ಣ ನಿಂತಿಲ್ಲ.

    ಅಕ್ರಮ ಚಟುವಟಿಕೆಗಳನ್ನು ತಡೆಯುವ ದಿಸೆಯಲ್ಲಿ ಅಬಕಾರಿ ಇಲಾಖೆ ಸಿಬ್ಬಂದಿ 10 ದಿನಗಳ ಅವಧಿಯಲ್ಲಿ ತಾಲೂಕಿನ 25ಕ್ಕೂ ಹೆಚ್ಚು ಕಡೆಗಳಲ್ಲಿ ದಾಳಿ ನಡೆಸಿ, 8.5 ಲೀಟರ್ ಮದ್ಯ, 12 ಲೀಟರ್ ಕಳ್ಳಬಟ್ಟಿ ಸಾರಾಯಿ ವಶಪಡಿಸಿಕೊಳ್ಳುವುದರ ಜೊತೆಗೆ ಸ್ಥಳಲ್ಲಿಯೇ ಸಾವಿರಾರು ಲೀಟರ್ ಕಳ್ಳಬಟ್ಟೆ ನಾಶಪಡಿಸಿ 12 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಂಡಿದೆ ಎಂಬುದು ಅಬಕಾರಿ ಇಲಾಖೆ ಅಧಿಕಾರಿಗಳ ಮಾಹಿತಿ.

    ಅಧಿಕಾರಿಗಳು ದಾಳಿ ನಡೆಸಿದ್ದೇನೋ ನಿಜ. ಆದರೆ, ಅಕ್ರಮ ದಂಧೆ ಪ್ರಮಾಣ ವ್ಯಾಪಕವಾಗಿದೆ. ಇಂದಿಗೂ ಹೆಚ್ಚು ಹಣ ಕೊಟ್ಟರೆ ಎಲ್ಲರೂ ದೊರೆಯುತ್ತದೆ ಎಂಬ ವಾತಾವರಣ ತಾಲೂಕಿನ ಹಲವೆಡೆ ಇದೆ. ಇದು ಪ್ರಜ್ಞಾವಂತರ ನಿದ್ದೆಗೆಡಿಸಿದೆ.

    ಬೇರೆ ಗ್ರಾಮಗಳಿಂದ ಕೊಂಡು ಬರುತ್ತಾರೆ:
    ಪ್ರತಿ ದಿನ ರೋಣ ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದ ಮದ್ಯ ವ್ಯಸನಿಗಳು ನೆಲ್ಲೂರ, ಗುಡ್ಡದಬೈರಾಪೂರ ಸೇರಿ ಕೆಲ ಗ್ರಾಮಗಳಿಗೆ ತೆರಳಿ ಕಳ್ಳ ಬಟ್ಟಿ ಖರೀದಿಸಿ ತರುತ್ತಾರೆ. ಪ್ರತಿ ಲೀಟರ್ ಕಳ್ಳಬಟ್ಟಿಗೆ 250ರಿಂದ 300 ರೂ.ಗೆ ಮಾರಾಟ ಮಾಡಲಾಗುತ್ತಿದೆ ಎಂದು ಕಳ್ಳಬಟ್ಟಿ ಕೊಂಡು ಬಂದವರೇ ಹೇಳುತ್ತಿದ್ದಾರೆ.

    ಅಬಕಾರಿ ಇಲಾಖೆ ಅಧಿಕಾರಿಗಳು ಕೇವಲ ಎಚ್ಚರಿಕೆ ನೀಡಿ ಕೈತೊಳೆದುಕೊಳ್ಳದೆ, ಕಠಿಣ ಕ್ರಮಕ್ಕೆ ಮುಂದಾಗಬೇಕು. ದಾಳಿ ನಂತರವೂ ಅಕ್ರಮ ದಂಧೆ ಮುಂದುವರಿಯದಂತೆ ನಿಗಾ ಇಡಬೇಕು ಎಂಬುದು ಪ್ರಜ್ಞಾವಂತರ ಒತ್ತಾಸೆಯಾಗಿದೆ.

    ತಾಲೂಕಿನ ಕೆಲ ಗ್ರಾಮಗಳಲ್ಲಿ ಅಕ್ರಮವಾಗಿ ಕಳ್ಳಬಟ್ಟಿ ತಯಾರಿಸಿ ಮಾರಾಟ ಮಾಡುವ ಸ್ಥಳಗಳಿಗೆ ದಾಳಿ ಮಾಡಿ ಎಚ್ಚರಿಕೆ ನೀಡಲಾಗಿದೆ. ಅಲ್ಲದೆ, ಅಕ್ರಮ ಮದ್ಯ ಮಾರಾಟ ಮಾಡಿದ 15 ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಈ ಅಕ್ರಮ ದಂಧೆಗಳ ಬಗ್ಗೆ ಸಾರ್ವಜನಿಕರು ಮೊ. ಸಂಖ್ಯೆ 9902344546 ಗೆ ಕರೆ ಮಾಡಿ ದೂರು ನೀಡಿದರೆ ಕ್ರಮ ಜರುಗಿಸಲಾಗುವುದು.
    | ಶ್ರೀಶೈಲ್ ಅಕ್ಕಿ
    ಅಬಕಾರಿ ಸಹಾಯಕ ಪೊಲೀಸ್ ಇನ್​ಸ್ಪೆಕ್ಟರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts