More

    ಕರಾವಳಿಯಲ್ಲಿ ಮುಂಗಾರು ಚುರುಕು

    ಮಂಗಳೂರು: ದ.ಕ.ಜಿಲ್ಲೆಯಲ್ಲಿ ಗುರುವಾರ ಉತ್ತಮ ಮಳೆಯಾಗಿದ್ದು, ಕಳೆದ ಕೆಲವು ದಿನಗಳಿಂದ ದುರ್ಬಲಗೊಂಡಿದ್ದ ಮುಂಗಾರು ಮತ್ತೆ ಚುರುಕಾಗಿದೆ. ಕರಾವಳಿಯಲ್ಲಿ ಮುಂದಿನ ಎರಡು ದಿನಗಳ ಕಾಲ ಹವಾಮಾನ ಇಲಾಖೆ ಆರೆಂಜ್ ಅಲರ್ಟ್ ಘೋಷಿಸಿದ್ದು, ಮಳೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಯಿದೆ.
    ಬುಧವಾರ ರಾತ್ರಿಯಿಂದಲೇ ಮಳೆ ಆರಂಭವಾಗಿದ್ದು, ಸಾಧಾರಣದಿಂದ ಉತ್ತಮವಾಗಿ ಸುರಿದಿದೆ. ಗುರುವಾರ ಬೆಳಗ್ಗಿನಿಂದಲೇ ಭಾರಿ ಮಳೆ ಸುರಿದಿದ್ದು, ಕೆಲವು ಪ್ರದೇಶಗಳಲ್ಲಿ ಗಾಳಿಯ ಅಬ್ಬರವೂ ಹೆಚ್ಚಿತ್ತು. ಸುಳ್ಯ ತಾಲೂಕಾದ್ಯಂತ ಬೆಳಗ್ಗಿನಿಂದಲೇ ಒಂದು ಕ್ಷಣ ಬಿಡುವಿಲ್ಲದೆ ಮಳೆ ಸುರಿದಿದೆ. ಸುಬ್ರಹ್ಮಣ್ಯದಲ್ಲೂ ನಿರಂತರ ಮಳೆಯಾಗಿದೆ. ಮಂಗಳೂರು ನಗರ ಹಾಗೂ ಹೊರ ವಲಯದಲ್ಲಿಯೂ ಸಾಧಾರಣದಿಂದ ಉತ್ತಮ ಮಳೆ ಸುರಿದಿದೆ.
    ದಿನವಿಡೀ ಸುರಿದ ಮಳೆಯಿಂದಾಗಿ ಗ್ರಾಮಾಂತರ ಭಾಗಗಳಲ್ಲಿ ತೋಡು-ತೊರೆಗಳಲ್ಲಿ ನೀರಿನ ಹರಿವು ಹೆಚ್ಚಾಗಿದ್ದು, ನದಿಗಳಲ್ಲಿಯೂ ಸ್ವಲ್ಪ ಪ್ರಮಾಣದಲ್ಲಿ ನೀರಿನ ಹರಿಯುವಿಕೆ ಹೆಚ್ಚಾಗಿದೆ. ಮಳೆಯಿಲ್ಲದೆ ಕಂಗೆಟ್ಟಿದ್ದ ಕೃಷಿಕರ ಮುಖದಲ್ಲಿ ಮತ್ತೆ ಮಂದಹಾಸ ಮೂಡಿದ್ದು, ಕೃಷಿ ಚಟುವಟಿಕೆಯಲ್ಲಿ ಹೆಚ್ಚು ಹುಮ್ಮಸ್ಸಿನಿಂದ ತೊಡಗಿಸಿಕೊಂಡಿದ್ದಾರೆ.
    ಗುರುವಾರ ಬೆಳಗ್ಗಿನಿಂದ ಸಾಯಂಕಾಲದವರೆಗೆ ಬಡಗ ಎಡಪದವು ಗ್ರಾಮದಲ್ಲಿ ಅತ್ಯಧಿಕ 134.5 ಮಿ.ಮೀ, ಇರುವೈಲ್ 98.5 ಮಿ.ಮೀ ಮಳೆ ಸುರಿದಿದೆ. ಬೆಳಗ್ಗೆ ಅಂತ್ಯಗೊಂಡ ಹಿಂದಿನ 24 ಗಂಟೆಯಲ್ಲಿ ಜಿಲ್ಲೆಯಲ್ಲಿ ಸರಾಸರಿ 18.1 ಮಿ.ಮೀ ಮಳೆ ಸುರಿದಿದೆ. ಪುತ್ತೂರಿನಲ್ಲಿ 12.5, ಬಂಟ್ವಾಳದಲ್ಲಿ 30.7, ಬೆಳ್ತಂಗಡಿಯಲ್ಲಿ 16.1, ಮಂಗಳೂರಿನಲ್ಲಿ 28.8 ಮಿ.ಮೀ.ಮಳೆ ಸುರಿದಿದೆ.

    ಸಮುದ್ರಕ್ಕೆ ಇಳಿಯದಂತೆ ಮೀನುಗಾರರಿಗೆ ಸೂಚನೆ: ಬಂಗಾಳ ಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತ ಪರಿಣಾಮ ಮಳೆ ಬಿರುಸುಗೊಂಡಿದೆ. ಸಮುದ್ರದಲ್ಲಿ ಗಂಟೆಗೆ 40-50 ಕಿ.ಮೀ.ವೇಗದಲ್ಲಿ ಬಲವಾದ ಗಾಳಿ ಬೀಸಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ. ಜಿಲ್ಲಾಡಳಿತವೂ ನದಿಪಾತ್ರದ ಜನರು ಜಾಗರೂಕತೆಯಿಂದ ಇರುವಂತೆ ಸೂಚಿಸಿದೆ.

    ಉಡುಪಿ ಜಿಲ್ಲಾದ್ಯಂತ ಮಳೆ: ಜಿಲ್ಲೆಯಲ್ಲಿ ಗುರುವಾರ ಉತ್ತಮ ಮಳೆಯಾಗಿದ್ದು, ದಿನವಿಡೀ ಮೋಡ ಕವಿದ ವಾತಾವರಣವಿತ್ತು. ಸಾಯಂಕಾಲ ಧಾರಾಕಾರ ಮಳೆ ಸುರಿದಿದೆ. ಉಡುಪಿ, ಕಾಪು, ಪಡುಬಿದ್ರಿ, ಕಾರ್ಕಳ, ಹಿರಿಯಡ್ಕ, ಬ್ರಹ್ಮಾವರ, ಕುಂದಾಪುರ, ಬೈಂದೂರು ಮೊದಲಾದ ಕಡೆ ರಾತ್ರಿ ವೇಳೆ ಉತ್ತಮ ಮಳೆಯಾಗಿದೆ. ಉದ್ಯಾವರ ಗ್ರಾಮದ ಸುಶೀಲಾ ಸೇರಿಗಾರ್ತಿ ಎಂಬುವರ ಮನೆಯ ಗೋಡೆ ಕುಸಿದು ಬಿದ್ದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts