More

    ಕಮ್ಯುನಿಸ್ಟ್ ಗಟ್ಟಿಗೊಳಿಸಲು ಬದ್ಧರಾಗಿ  -ಆನಂದರಾಜ್ ಹೇಳಿಕೆ -ಸಿಪಿಐ ಸಂಸ್ಥಾಪನಾ ದಿನಾಚರಣೆ 

    ದಾವಣಗೆರೆ: ಮುಳ್ಳಿನ ಹಾಸಿಗೆ ಮೇಲೆ ಕೂತ ಅನೇಕ ಹಿರಿಯರು ಕಮ್ಯುನಿಸ್ಟ್ ಸಂಘಟನೆ ಮಾಡಿದ್ದಾರೆ. ಈಗಿನ ಮುಖಂಡರು, ಕಾರ್ಯಕರ್ತರು ಕೂಡ ಪಕ್ಷವನ್ನು ಮತ್ತಷ್ಟು ಗಟ್ಟಿಗೊಳಿಸಲು ಬದ್ಧರಾಗಬೇಕು ಎಂದು ಸಿಪಿಐನ ಜಿಲ್ಲಾ ಮಂಡಳಿ ಖಜಾಂಚಿ ಆನಂದರಾಜ್ ಹೇಳಿದರು.
    ನಗರದ ಪಂಪಾಪತಿ ಭವನದಲ್ಲಿ ಭಾರತ ಕಮ್ಯುನಿಸ್ಟ್ ಪಕ್ಷದ 98ನೇ ವರ್ಷದ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
    ಇಡೀ ದೇಶದಲ್ಲಿ ಸ್ಥಳೀಯ ಮಟ್ಟದಿಂದ ದೇಶ ಮಟ್ಟದಲ್ಲಿ ಸಮ್ಮೇಳನ ನಡೆಸುತ್ತಿರುವ ಏಕೈಕ ಪಕ್ಷ ಕಮ್ಯುನಿಸ್ಟ್. ಪ್ರತಿ ವರ್ಷ ಸದಸ್ಯರ ನೋಂದಣಿ ನವೀಕರಣ ಮಾಡಲಾಗುತ್ತಿದೆ. ರಾಜಕೀಯ ಶಕ್ತಿ ವೃದ್ಧಿಗಾಗಿ ಸದಸ್ಯತ್ವ ಸಂಖ್ಯೆ ಹೆಚ್ಚಿಸಿ ಪಕ್ಷವನ್ನು ಮತ್ತಷ್ಟು ಬೆಳೆಸಬೇಕು ಎಂದು ಆಶಿಸಿದರು.
    ಆರಂಭದಲ್ಲಿದ್ದ ಪಕ್ಷದ ಚಿಹ್ನೆಯಾಗಿದ್ದ ಕುಡುಗೋಲು-ತೆನೆ ನಂತರದಲ್ಲಿ ಕುಡುಗೋಲು-ಸುತ್ತಿಗೆಯಾಗಿದೆ. ರೈತರ ಹೋರಾಟಗಳನ್ನೂ ಪಕ್ಷ ನಡೆಸಿದೆ. ಕೆಂಬಾವುಟಕ್ಕೆ ಯಾರೋ ಬಣ್ಣ ನೀಡಿದ್ದಲ್ಲ. ಕಾರ್ಮಿಕರ ರಕ್ತದಲ್ಲಿ ಅದ್ದಿ ತೆಗೆದದ್ದಾಗಿದೆ. 1964ರಲ್ಲಿ ಪಕ್ಷ ಇಬ್ಭಾಗವಾಯಿತು. ಸಿಪಿಐ ಅಧಿಕಾರಕ್ಕೆ ಅಂಟಿಕೊಳ್ಳದೆ ಸಂಘಟನೆಗಾಗಿಯೇ ಹೋರಾಟ ಮಾಡಿತು ಎಂದು ಹೇಳಿದರು.
    ಕಾರ್ಮಿಕರ ಪರ ಹೋರಾಟಗಳಿಂದಾಗಿಯೇ ನಮ್ಮ ಪಕ್ಷ ಉಳಿದಿದೆಯೇ ವಿದ್ಯಾವಂತರಿಂದಲ್ಲ. ಪಕ್ಷದ ಅನೇಕ ಮುಖಂಡರಿಗೆ ಸಿಪಿಐನ ಸಿದ್ಧಾಂತವೇ ತಿಳಿದಿಲ್ಲ. ಅದನ್ನು ತಿಳಿಯಬೇಕಿದೆ. ಬಂಡವಾಳಿಗರ ಪರವಾದ ಕಾಂಗ್ರೆಸ್, ಕೋಮುವಾದಿಯಾದ ಬಿಜೆಪಿಗೆ ಭವಿಷ್ಯವಲ್ಲ. ರೈತರು-ಕಾರ್ಮಿಕರ ಚಳವಳಿ ಮೂಲಕವೇ ಕಮ್ಯುನಿಸ್ಟ್ ಅನ್ನು ಕಟ್ಟಬೇಕಿದೆ ಎಂದರು.
    ದಾವಣಗೆರೆಯಲ್ಲಿ ಕೈಗಾರಿಕೆಗಳು ಮುಚ್ಚಲು ಕಮ್ಯುನಿಸ್ಟರು ಕಾರಣರಲ್ಲ. ಸಿಪಿಐ ಬೆಂಬಲದಿಂದಾಗಿ ಕಾಂಗ್ರೆಸ್ ನಾಯಕರು ನಗರಸಭೆ ಅಧ್ಯಕ್ಷರಾಗಿ ಅಧಿಕಾರ ನಡೆಸಿದ್ದರು. ನಮ್ಮ ಸಂಘಟನೆಗೆ ಬಲವಾಗಿದ್ದ ಹತ್ತಿ ಗಿರಣಿಗಳನ್ನು ಮುಚ್ಚಿಸುವ ಮೂಲಕ ಕಾಂಗ್ರೆಸ್ಸಿಗರು ದ್ರೋಹ ಬಗೆದರು. ಕೈಗಾರಿಕೆಗಳ ಮಾಲೀಕರೇ ಈ ಬಗ್ಗೆ ತಪ್ಪೊಪ್ಪಿಕೊಂಡರು ಎಂದು ಪ್ರತಿಪಾದಿಸಿದರು.
    ಜಿಲ್ಲಾ ಕಾರ್ಯದರ್ಶಿ ಆವರಗೆರೆ ಚಂದ್ರು ಮಾತನಾಡಿ ರೈತರು, ದುಡಿವ ವರ್ಗದ ಜನರಿಗೆ ನ್ಯಾಯ ಒದಗಿಸುತ್ತಲೇ ಕಮ್ಯುನಿಸ್ಟ್ 98 ವರ್ಷ ಸವೆಸಿದೆ. ಪಕ್ಷವನ್ನು ವಿಸ್ತರಿಸುವ ಹಿನ್ನೆಲೆಯಲ್ಲಿ ಜನರ ಸಮಸ್ಯೆಗಳನ್ನು ಕೈಗೆತ್ತಿಕೊಂಡು ಮುನ್ನಡೆಯಬೇಕಿದೆ ಎಂದರು.
    1925ರ ಡಿ. 26ರಿಂದ ಪಕ್ಷ ಬೆಳೆದು ಬಂದ ಹಾದಿ ವಿವರಿಸಿದ ಪಕ್ಷದ ಸಹ ಕಾರ್ಯದರ್ಶಿ ಎಚ್.ಜಿ.ಉಮೇಶ್, ಪಕ್ಷಕ್ಕೆ ಸಾಮೂಹಿಕವಾಗಿ ಶಕ್ತಿ ತುಂಬುವತ್ತ ಗಮನ ಹರಿಸಬೇಕಿದೆ ಎಂದರು.
    ಸಹ ಕಾರ್ಯದರ್ಶಿ ಆವರಗೆರೆ ವಾಸು ಮಾತನಾಡಿ ಮನಮೋಹನಸಿಂಗ್ ಸರ್ಕಾರ, ಬೆಂಬಲ ನೀಡಿದ್ದ ಸಿಪಿಐನ ಬೇಡಿಕೆಗಳನ್ನು ಈಡೇರಿಸಲಿಲ್ಲ. ಕಾಂಗ್ರೆಸ್ ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ನರೇಂದ್ರ ಮೋದಿ ಅವರ ಕೈಗೆ ಮತ್ತೆ ಅಧಿಕಾರ ಸಿಗದಂತೆ ಎಲ್ಲರೂ ಎಚ್ಚರ ವಹಿಸಬೇಕಿದೆ ಎಂದು ಹೇಳಿದರು.
    ಜಿಲ್ಲಾ ಮಂಡಳಿ ಸದಸ್ಯ ಪಿ.ಷಣ್ಮುಖಸ್ವಾಮಿ ಮಾತನಾಡಿ ಬಿಜೆಪಿ ಸರ್ಕಾರ ಮತ್ತೆ ಅಧಿಕಾರಕ್ಕೆ ಬಂದರೆ ಸಂವಿಧಾನವನ್ನೇ ಹತ್ತಿಕ್ಕಲಿದೆ. 2025ನೇ ವರ್ಷಕ್ಕೆ ಆರ್‌ಎಸ್‌ಎಸ್ ಸಂಘಟನೆಗೆ ನೂರು ವರ್ಷ ತುಂಬಲಿರುವ ಹಿನ್ನೆಲೆಯಲ್ಲಿ ಹಿಂದು ರಾಷ್ಟ್ರ ಘೋಷಣೆಗೆ ಮುಂದಾಗುತ್ತಿದೆ. ಈ ಹಂತದಲ್ಲಾದರೂ ಸಂವಿಧಾನದ ಬಗ್ಗೆ ಜನರನ್ನು ಎಚ್ಚರಿಸುವ ಕೆಲಸ ಆಗಬೇಕಿದೆ ಎಂದರು.
    ಪಂಪಾಪತಿ, ಶೇಖರಪ್ಪ, ಸುರೇಶ್ ರೈತ-ಕಾರ್ಮಿಕರ ಕಲ್ಯಾಣಾಭಿವೃದ್ಧಿ ಟ್ರಸ್ಟ್ ಅಧ್ಯಕ್ಷ ಟಿ.ಎಸ್.ನಾಗರಾಜ್ ಧ್ವಜಾರೋಹಣ ನೆರವೇರಿಸಿದರು. ಎನ್‌ಎಫ್‌ಐಡಬ್ಲುೃ ಜಿಲ್ಲಾಧ್ಯಕ್ಷೆ ಎಂ.ಬಿ.ಶಾರದಮ್ಮ, ಮುಖಂಡರಾದ ಮಹಮ್ಮದ್ ಬಾಷಾ, ಟಿ.ಎಚ್. ನಾಗರಾಜ್, ವಿ. ಲಕ್ಷ್ಮಣ್, ಐರಣಿ ಚಂದ್ರು, ಎಸ್.ಎಸ್.ಮಲ್ಲಮ್ಮ, ನಿಟುವಳ್ಳಿ ಬಸವರಾಜ ಇತರರಿದ್ದರು.
    —–

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts