More

    ಕಮಲ ಬಿಟ್ಟು ಹೊರೆ ಹೊತ್ತ ಹಾಲಹರವಿ, ಜೆಡಿಎಸ್ ಸೇರಿದ ಬಿಜೆಪಿ ಮಾಜಿ ಶಾಸಕ

    ಹುಬ್ಬಳ್ಳಿ: ಹುಬ್ಬಳ್ಳಿ ಧಾರವಾಡ ಪೂರ್ವ ವಿಧಾನಸಭಾ ಮೀಸಲು ಕ್ಷೇತ್ರದ ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ ಅವರು ಭಾನುವಾರ ಜಾತ್ಯತೀತ ಜನತಾದಳ ಸೇರ್ಪಡೆಯಾಗಿದ್ದಾರೆ.

    ಬೆಂಗಳೂರಿನಲ್ಲಿ ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ವೀರಭದ್ರಪ್ಪ ಸೇರಿ ಬೇರೆಬೇರೆ ಪಕ್ಷಗಳಿಂದ ಬಂದ ಮುಖಂಡರಿಗೆ ಪಕ್ಷದ ಧ್ವಜ ನೀಡಿ ಸ್ವಾಗತಿಸಿದರು.

    ಶ್ರೀ ಸಿದ್ಧಾರೂಢರು ಹಾಗೂ ಗುರುನಾಥರೂಢರ ಪರಮ ಭಕ್ತರೂ ಆಗಿರುವ ಹಾಲಹರವಿ ಅವರು ಸಿದ್ಧಾರೂಢರ ಜಾತ್ರೆಯ ದಿನವೇ ರಾಜಕೀಯ ಜೀವನದ ಪ್ರಮುಖ ನಿರ್ಧಾರ ಕೈಗೊಂಡಿರುವುದು ಚರ್ಚೆಗೆ ಗ್ರಾಸ ಒದಗಿಸಿದೆ.

    ಪೂರ್ವ ಕ್ಷೇತ್ರದಲ್ಲಿ 2008ರ ಚುನಾವಣೆಯಲ್ಲಿ ಬಿಜೆಪಿಯಿಂದ ಆಯ್ಕೆಯಾಗಿದ್ದ ವೀರಭದ್ರಪ್ಪ ಹಾಲಹರವಿ ಅವರು 2013ರಲ್ಲಿ ಪ್ರಸಾದ ಅಬ್ಬಯ್ಯ ವಿರುದ್ಧ ಸೋಲನುಭವಿಸಿದ್ದರು. 2018ರಲ್ಲಿ ಇವರಿಗೆ ಟಿಕೆಟ್ ನೀಡಿರಲಿಲ್ಲ. ಈ ಬಾರಿ ಬಿಜೆಪಿಯಿಂದ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ಪಕ್ಷದ ವರಿಷ್ಠರು ಇದುವರೆಗೂ ಭರವಸೆ ನೀಡಿರಲಿಲ್ಲ. ತಮ್ಮನ್ನು ನಿರ್ಲಕ್ಷ್ಯ ಮಾಡಿದ್ದಾರೆ ಎಂಬ ಬೇಸರದ ಹಿನ್ನೆಲೆಯಲ್ಲಿ ಈಗಾಗಲೇ ಇವರು ಜೆಡಿಎಸ್ ಬಾಗಿಲು ಬಡಿದಿದ್ದರು. ಹುಬ್ಬಳ್ಳಿಗೆ ಬಂದಾಗ ಕುಮಾರಸ್ವಾಮಿ ಅವರನ್ನು ಭೇಟಿ ಕೂಡ ಆಗಿದ್ದರು. ಇದೀಗ ಪಕ್ಷ ಸೇರ್ಪಡೆ ಅಧಿಕೃತಗೊಳಿಸಿದ್ದಾರೆ.

    ಮಾಜಿ ಶಾಸಕ ವೀರಭದ್ರಪ್ಪ ಹಾಲಹರವಿ, ಎಪಿಎಂಸಿ ಮಾಜಿ ಅಧ್ಯಕ್ಷ ಈಶ್ವರ ಕಿತ್ತೂರ ಅವರು ತಮ್ಮ ಬೆಂಬಲಿಗರೊಂದಿಗೆ ಜೆಡಿಎಸ್ ಸೇರಿದ್ದಾರೆ. ಪೂರ್ವ ಕ್ಷೇತ್ರದ ಟಿಕೆಟ್ ಇನ್ನೂ ಘೋಷಣೆಯಾಗಿಲ್ಲ. ಯಾರಿಗೂ ಭರವಸೆಯನ್ನೂ ನೀಡಿಲ್ಲ ಎಂದು ಮಹಾನಗರ ಜಿಲ್ಲಾಧ್ಯಕ್ಷ ಗುರುರಾಜ ಹುಣಸಿಮರದ ತಿಳಿಸಿದರು.

    ಈ ಬಗ್ಗೆ ಪ್ರತಿಕ್ರಿಯೆ ನೀಡಿದ ವೀರಭದ್ರಪ್ಪ ಹಾಲಹರವಿ ಅವರು, ತಮ್ಮನ್ನು ನಿರ್ಲಕ್ಷ್ಯ ವಹಿಸಿದ ಬಿಜೆಪಿಯಿಂದ ಹೊರಗೆ ಬಂದಿರುವೆ. ಬೆಂಗಳೂರಿನಲ್ಲಿ ಕುಮಾರಸ್ವಾಮಿ ಅವರ ಸಮ್ಮುಖದಲ್ಲಿ ಜೆಡಿಎಸ್ ಸೇರಿದ್ದೇನೆ. ಅವರ ಮುಂದೆ ಯಾವುದೇ ಬೇಡಿಕೆ ಇಟ್ಟಿಲ್ಲ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts