More

    ಕಮಲ ಬಿಟ್ಟು ಕೈ ಹಿಡಿಯಲಿದ್ದಾರೆ ವಿಎಸ್​ಪಿ

    ಚಂದ್ರಶೇಖರಯ್ಯ ಹಿರೇಮಠ ಮುಂಡಗೋಡ

    ಯಲ್ಲಾಪುರ-ಮುಂಡಗೋಡ ಕ್ಷೇತ್ರದ ಮಾಜಿ ಶಾಸಕ, ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಅಧ್ಯಕ್ಷ ವಿ.ಎಸ್. ಪಾಟೀಲ ಶೀಘ್ರದಲ್ಲಿ ಬಿಜೆಪಿಗೆ ವಿದಾಯ ಹೇಳಿ ಕಾಂಗ್ರೆಸ್ ಸೇರ್ಪಡೆ ಆಗಲಿದ್ದಾರೆ.

    ಪಾಟೀಲ ಅವರು ಕೈ ಹಿಡಿಯಲಿದ್ದಾರೆ ಎಂಬ ಸುದ್ದಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಚರ್ಚೆಯಾಗುತ್ತಿದೆ. ಈ ಕುರಿತು ಸೋಮವಾರ ‘ವಿಜಯವಾಣಿ’ಗೆ ಪ್ರತಿಕ್ರಿಯಿಸಿದ ಪಾಟೀಲ, ‘ನಾನು ಕಾಂಗ್ರೆಸ್ ಸೇರುತ್ತೇನೆ ಎನ್ನುವುದು ನಿಜ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ದಿನಾಂಕ ನಿಗದಿಪಡಿಸಲಿದ್ದು, ಆ ದಿನ ಮುಂಡಗೋಡದಲ್ಲಿ ಬೃಹತ್ ಸಮಾವೇಶ ನಡೆಸಿ ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರ್ಪಡೆಯಾಗುತ್ತೇನೆ’ ಎಂದು ತಿಳಿಸಿದರು.

    ಮೂಲೆಗುಂಪಾಗಿದ್ದೇ ಕಾರಣ: ಕಾರ್ವಿುಕ ಸಚಿವ ಶಿವರಾಮ ಹೆಬ್ಬಾರ ಅವರು ಬಿಜೆಪಿ ಸೇರ್ಪಡೆಯಾದಾಗ ವಿ.ಎಸ್.ಪಾಟೀಲ ಅವರು ಕ್ಷೇತ್ರವನ್ನು ಬಿಟ್ಟು ಕೊಟ್ಟಿದ್ದರು. ಆಗ ಪಾಟೀಲರಿಗೆ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಅಧ್ಯಕ್ಷರ ಹುದ್ದೆ ನೀಡಲಾಯಿತು. ಆದರೆ, ಪಕ್ಷದಲ್ಲಿ ಗೌರವ ಸಿಕ್ಕಿಲ್ಲ ಎಂದು ಅವರು ಬೇಸರಗೊಂಡಿದ್ದಾರೆ. ದಿನಗಳು ಉರುಳಿದಂತೆ ನನ್ನನ್ನು ಹಾಗೂ ಬೆಂಬಲಿಗರನ್ನು ಸಂಪೂರ್ಣವಾಗಿ ಮೂಲೆ ಗುಂಪು ಮಾಡಲಾಯಿತು. ನಾನು ಅಥವಾ ಬಂಬಲಿಗರು ಹೇಳುವ ಯಾವುದೇ ಕೆಲಸಗಳು ಕ್ಷೇತ್ರದಲ್ಲಿ ಆಗುತ್ತಿಲ್ಲ. ಕಾರ್ವಿುಕ ಸಚಿವ ಶಿವರಾಮ ಹೆಬ್ಬಾರ ಸಹ ನಿರ್ಲಕ್ಷಿಸುತ್ತ ಬಂದಿದ್ದಾರೆ ಎಂದು ವಿ.ಎಸ್. ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು. ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂಬ ಕಾರಣಕ್ಕೆ ಕಳೆದ ಉಪಚುನಾವಣೆಯಲ್ಲಿ ನಾನು ಸಹ ಶಿವರಾಮ ಹೆಬ್ಬಾರ ಅವರಿಗೆ ಬೆಂಬಲ ನೀಡಿದೆ. ಇದೀಗ ಪಕ್ಷದಲ್ಲಿ ನನಗೆ ಬೆಲೆ ಸಿಗುತ್ತಿಲ್ಲ. ಕೆಲವರು ನನ್ನ ರಾಜಕೀಯ ಜೀವನ ಮುಗಿಸಲು ಮುಂದಾಗಿದ್ದಾರೆ. ನಾನೇನು ರಾಜಕೀಯ ಸನ್ಯಾಸಿಯಲ್ಲ ಎಂಬುದನ್ನು ಎದುರಾಳಿಗಳಿಗೆ ತಿಳಿಸಬೇಕಿದೆ ಎಂದರು.

    ಕಾಂಗ್ರೆಸ್ ಸೇರುವ ಮುನ್ನ ರಾಜೀನಾಮೆ: ಈಗಾಗಲೆ ಕಾಂಗ್ರೆಸ್​ನ ಹಿರಿಯ ಮುಖಂಡರ ಜತೆಗೆ ಎರಡ್ಮೂರು ಬಾರಿ ಮಾತುಕತೆಯಾಗಿದೆ. ಬಿಜೆಪಿ ತೊರೆಯುವುದು ಖಚಿತ. ಕಾಂಗ್ರೆಸ್ ಸೇರುವ ಮುನ್ನ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಅಧ್ಯಕ್ಷ ಸ್ಥಾನ ಹಾಗೂ ಬಿಜೆಪಿ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸುತ್ತೇನೆ ಎಂದು ವಿ.ಎಸ್. ಪಾಟೀಲ ತಿಳಿಸಿದರು.

    ಕಾಂಗ್ರೆಸ್​ಗೆ ಟಾನಿಕ್: ಯಲ್ಲಾಪುರ- ಮುಂಡಗೋಡ ವಿಧಾನಸಭೆ ಕ್ಷೇತ್ರದಲ್ಲಿ ಬಿಜೆಪಿಯ ಎದುರು ಕಾಂಗ್ರೆಸ್ ಸೊರಗುತ್ತ ಸಾಗಿದೆ. ವಿ.ಎಸ್. ಪಾಟೀಲ ಸೇರ್ಪಡೆಯಾದಲ್ಲಿ ತಮ್ಮ ಪಕ್ಷಕ್ಕೆ ಟಾನಿಕ್ ಸಿಕ್ಕಂತಾಗುತ್ತದೆ ಎಂಬ ಕಾರಣದಿಂದ ಕೈ ಪಕ್ಷದಲ್ಲಿ ಯಾರೂ ವಿರೋಧ ಮಾಡುತ್ತಿಲ್ಲ.

    ನಾನು ಕಾಂಗ್ರೆಸ್ ಸೇರುವುದು ಖಚಿತ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ ದಿನಾಂಕ ನಿಗದಿಪಡಿಸಿದ ಬಳಿಕ ಅಂದು ಮುಂಡಗೋಡನಲ್ಲಿ ಸಹಸ್ರಾರು ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರುತ್ತೇನೆ. ಬಿಜೆಪಿಯಲ್ಲಿ ನನಗೆ ಮತ್ತು ಬೆಂಬಲಿಗರಿಗೆ ಸೂಕ್ತ ಗೌರವ ಸಿಗುತ್ತಿಲ್ಲ. ನಾವು ಹೇಳಿದ ಕೆಲಸಗಳು ಆಗುತ್ತಿಲ್ಲ. ಆದ್ದರಿಂದ ಸದ್ಯದಲ್ಲಿಯೆ ಕಾಂಗ್ರೆಸ್ ಸೇರುತ್ತೇವೆ.
    ವಿ.ಎಸ್. ಪಾಟೀಲ ವಾಯವ್ಯ ಕರ್ನಾಟಕ ಸಾರಿಗೆ ಸಂಸ್ಥೆ ಅಧ್ಯಕ್ಷ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts