More

    ಕಮಲನಗರ ಆಸ್ಪತ್ರೆಗೆ ವೈದ್ಯರ ಕೊರತೆ

    ಎ.ಪಿ.ಮಠಪತಿ ಕಮಲನಗರ
    ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆಯಿಂದ ರೋಗಿಗಳು ಪರದಾಡುವ ಸ್ಥಿತಿ ಇದೆ.

    ಕಮಲನಗರದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಸಮುದಾಯ ಆರೋಗ್ಯ ಕೇಂದ್ರವಾಗಿ 1999ರಲ್ಲಿ ಸರ್ಕಾರ ಮೇಲ್ದರ್ಜೆಗೇರಿಸಿತು. 6 ಹಾಸಿಗೆಯ ಆಸ್ಪತ್ರೆ 30 ಹಾಸಿಗೆ ಆಸ್ಪತ್ರೆಯಾಗಿ ಬದಲಾಯಿತು. ಆದರೆ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತಜ್ಞ ವೈದ್ಯರ ಕೊರತೆಯಿಂದ ರೋಗಿಗಳು ಸಂಕಷ್ಟ ಅನುಭವಿಸುತ್ತಿದ್ದಾರೆ.

    2 ವೈದ್ಯಾಧಿಕಾರಿ ಹುದ್ದೆ, 1 ಗ್ರೂಪ್ ಡಿ, ಹೆರಿಗೆ ತಜ್ಞ, ಅರಿವಳಿಕೆ ತಜ್ಞ ಹಾಗೂ ಮಕ್ಕಳ ತಜ್ಞ ವೈದ್ಯರ ಹುದ್ದೆ ಖಾಲಿ ಇವೆ. ಇಲ್ಲಿ ದಿನ ಸರಾಸರಿ 350 ಹೊರ ರೋಗಿಗಳು, 25 ಒಳರೋಗಿಗಳು ತಪಾಸಣೆಗೆ ಒಳಪಡುತ್ತಾರೆ. ಕೇವಲ ಇಬ್ಬರು ವೈದ್ಯರಿರುವ ಕಾರಣ ರೋಗಿಗಳು ದಿನಾಲೂ ಗಂಟೆಗಳ ಕಾಲ ಕಾಯಬೇಕಾಗಿದೆ.

    ಈಚೆಗೆ ಕರ್ನಾಟಕ ಆರೋಗ್ಯ ಪದ್ಧತಿ ಮತ್ತು ಸುಧಾರಣೆ ಯೋಜನೆ ಅಡಿಯಲ್ಲಿ 3.65 ಕೋಟಿ ರೂ. ವೆಚ್ಚದ ನೂತನ ಆಸ್ಪತ್ರೆ ಕಟ್ಟಡ ನಿರ್ಮಾಣ ಮಾಡಲಾಗಿದೆ. ಆದರೆ ತಜ್ಞ ವೈದ್ಯರಿಲ್ಲದ ಕಾರಣ ರೋಗಿಗಳು ಅನಿವಾರ್ಯವಾಗಿ ಮಹಾರಾಷ್ಟ್ರದ ಖಾಸಗಿ ಆಸ್ಪತ್ರೆಗಳ ಕಡೆ ಮುಖ ಮಾಡುವಂತಾಗಿದೆ.

    ರಾಷ್ಟ್ರೀಯ ಹೆದ್ದಾರಿ 50ರಲ್ಲಿರುವ ಪ್ರಮುಖ ಹೋಬಳಿ ಕೇಂದ್ರ ಕಮಲನಗರ. ಈ ರಸ್ತೆಯಲ್ಲಿ ಅಪಘಾತಗಳು ಸಂಭವಿಸಿದರೆ, ಬೀದರ್ ಜಿಲ್ಲಾ ಆಸ್ಪತ್ರೆ ಇಲ್ಲಿಂದ 60 ಕಿ.ಮೀ ದೂರವಾದರೆ, ಔರಾದ್ ತಾಲೂಕು ಆಸ್ಪತ್ರೆ 30 ಕಿ.ಮೀ ಅಂತರದಲ್ಲಿದೆ.

    ಅಪಘಾತಕ್ಕೀಡಾದವರಿಗೆ ಸಕಾಲದಲ್ಲಿ ವೈದ್ಯಕೀಯ ಚಿಕಿತ್ಸೆ ಕೊಡುವ ದೃಷ್ಟಿಯಿಂದ ಇಲ್ಲಿಯ ಸಮುದಾಯ ಆರೋಗ್ಯ ಕೇಂದ್ರದಲ್ಲಿ ತುರ್ತು ಚಿಕಿತ್ಸಾ ಘಟಕ, ರಕ್ತ ಸಂಗ್ರಹ ಘಟಕ ಇರುವುದು ಅವಶ್ಯ ಎನ್ನುತ್ತಾರೆ ಸಾರ್ವಜನಿಕರು. ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಖಾಲಿ ಇರುವ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ಹುದ್ದೆಗಳನ್ನು ಭತರ್ಿ ಮಾಡಬೇಕೆಂಬುದು ಸಾರ್ವಜನಿಕರ ಒತ್ತಾಯವಾಗಿದೆ.

    ಕಮಲನಗರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಸುತ್ತಲಿನ ಖತಗಾಂವ, ಮದನೂರ, ಡಿಗ್ಗಿ, ಬಾಲೂರ, ಮುರ್ಗ (ಕೆ), ಚಾಂಡೇಶ್ವರ, ಖೇಡ್, ಸಾವಳಿ, ಹೊಳಸಮುದ್ರ ಗ್ರಾಮದ ಅನೇಕ ರೋಗಿಗಳು ತಪಾಸಣೆಗೆಂದು ಬರುತ್ತಾರೆ. ಆದರೆ ವೈದ್ಯರ ಕೊರತೆಯಿಂದ ರೋಗಿಗಳು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
    | ಸುಭಾಷ ಮಿರ್ಚೆ, ಆರೋಗ್ಯ ರಕ್ಷಾ ಸಮಿತಿ ಸದಸ್ಯ

    ಸಮುದಾಯ ಆರೋಗ್ಯ ಕೇಂದ್ರದಲ್ಲಿ ವೈದ್ಯರ ಕೊರತೆಯಿಂದ ರೋಗಿಗಳು ಅನುಭವಿಸುತ್ತಿರುವ ತೊಂದರೆ ಬಗ್ಗೆ ಮೇಲಧಿಕಾರಿಗಳ ಗಮನಕ್ಕೆ ತಂದಿರುವೆ. ಖಾಲಿ ಇರುವ ವೈದ್ಯರ ಹುದ್ದೆ ಭರ್ತಿ ಮಾಡುವ ವಿಶ್ವಾಸವಿದೆ.
    | ಡಾ.ಗಾಯತ್ರಿ ವಿಜಯಕುಮಾರ, ತಾಲೂಕು ಆರೋಗ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts