More

    ಕಬ್ಬು ಬೆಳೆಗಾರರ ಸಂಘದಿಂದ ಪ್ರತಿಭಟನೆ

    ನಂಜನಗೂಡು: ಸಕ್ಕರೆ ಕಾರ್ಖಾನೆಗೆ ಕಬ್ಬು ಪೂರೈಸುವ ರೈತರಿಗೆ ನ್ಯಾಯಯುತ ದರ ನೀಡಬೇಕೆಂದು ಆಗ್ರಹಿಸಿ ರೈತ ಸಂಘಟನೆ ಹಾಗೂ ಕಬ್ಬು ಬೆಳೆಗಾರರ ಸಂಘದ ವತಿಯಿಂದ ಬುಧವಾರ ತಾಲೂಕಿನ ಅಳಗಂಚಿ ಗ್ರಾಮದಲ್ಲಿರುವ ಬಣ್ಣಾರಿ ಅಮ್ಮನ್ ಸಕ್ಕರೆ ಕಾರ್ಖಾನೆ ಮುಂಭಾಗ ಪ್ರತಿಭಟನೆ ನಡೆಯಿತು.

    ರೈತ ಸಂಘದ ಅಧ್ಯಕ್ಷ ಬಡಗಲಪುರ ನಾಗೇಂದ್ರ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತಾಪಿ ವರ್ಗವನ್ನು ಸಂಪೂರ್ಣ ನಿರ್ಲಕ್ಷೃ ಮಾಡಿವೆ. ಕಬ್ಬಿಗೆ ಸರಿಯಾದ ವೈಜ್ಞಾನಿಕ ಬೆಲೆ ನೀಡುತ್ತಿಲ್ಲ. ರೈತರು ಕಬ್ಬಿಗೆ ಪ್ರತಿ ಟನ್‌ಗೆ 4500 ರೂ. ಕೇಳುತ್ತಿದ್ದಾರೆ. ಆದರೆ ಸ್ವಾಮಿನಾಥನ್ ವರದಿ ಪ್ರಕಾರ ಪ್ರತಿ ಟನ್ ಕಬ್ಬಿಗೆ 5700 ರೂ. ಕೊಡಬೇಕು. ಕಬ್ಬಿನ ಉಪ ಉತ್ಪನ್ನಗಳ ಮಾರಾಟದಿಂದ ಬರುವ ನಿವ್ವಳ ಲಾಭದಲ್ಲಿ ಎಫ್‌ಆರ್‌ಪಿ ಯನ್ನು ಶೇ.70ರಷ್ಟು ರೈತರು ಹಾಗೂ ಶೇ.30 ರಷ್ಟು ಕಾರ್ಖಾನೆಗೆ ಕೊಡಬೇಕು ಎಂದು ವರದಿಯಲ್ಲಿ ಹೇಳಲಾಗಿತ್ತು. ಆದರೆ, ಈ ಹಿಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸರ್ಕಾರದಲ್ಲಿ ಕಬ್ಬು ಬೆಳೆಗಾರರ ಕಣ್ಣೊರೆಸಲು ಪ್ರತಿ ಟನ್ ಕಬ್ಬಿಗೆ 150 ರೂ. ಕೊಡಬೇಕೆಂದು ಆದೇಶ ನೀಡಿತ್ತು. ಇದನ್ನೂ ನೀಡಲು ಮುಂದಾಗದ ಸಕ್ಕರೆ ಕಾರ್ಖಾನೆಗಳು, ಆ ಆದೇಶಕ್ಕೂ ನ್ಯಾಯಾಲಯದಿಂದ ತಡೆ ತಂದಿವೆ ಎಂದು ಆಪಾದಿಸಿದರು.

    ನ್ಯಾಯಾಲಯದಲ್ಲಿ ತಂದಿರುವ ತಡೆಯನ್ನು ಹಿಂಪಡೆದು ರೈತರಿಗೆ 150 ರೂ. ಕೊಡುವ ಮೂಲಕ ನ್ಯಾಯ ಒದಗಿಸಬೇಕು. ಕಬ್ಬು ಸಾಗಣೆ, ಕಟಾವು ಬೆಲೆ ಹಾಗೂ ಕೂಲಿಕಾರ್ಮಿಕರ ದರವೂ ಹೆಚ್ಚಾಗಿದ್ದು, ಕಬ್ಬು ಬೆಳೆಯುವುದೇ ಕಷ್ಟಕರವಾಗಿದೆ. ಆದ್ದರಿಂದ ಕಬ್ಬು ಬೆಳೆಗಾರರ ಹಿತ ಕಾಯಲು ಸರ್ಕಾರ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.

    ಸ್ಥಳಕ್ಕಾಗಮಿಸಿದ ನಂಜನಗೂಡು ತಹಸೀಲ್ದಾರ್ ಶಿವಕುಮಾರ್ ಅವರು ರೈತರ ಬೇಡಿಕೆಗಳ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸುವುದಾಗಿ ಭರವಸೆ ನೀಡಿದರು. ಇದನ್ನು ನಿರಾಕರಿಸಿದ ರೈತರು, ಜಿಲ್ಲಾಧಿಕಾರಿ ಬಂದು ಅಹವಾಲು ಸ್ವೀಕರಿಸುವವರೆಗೂ ಧರಣಿ ಹಿಂಪಡೆಯುವುದಿಲ್ಲ ಎಂದು ಮುಂದುವರಿಸಿದ್ದರು.

    ಪ್ರಭಟನೆಯಲ್ಲಿ ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಹೊಸಕೋಟೆ ಬಸವರಾಜು, ಅಶ್ವತ್ಥ ನಾರಾಯಣ್ ಅರಸ್, ಎಸ್.ಆರ್.ಕುಮಾರ್, ಬಿಳಿಗೆರೆ ಗುರುಲಿಂಗೇಗೌಡ, ರೈತ ಸಂಘದ ತಾಲೂಕು ಅಧ್ಯಕ್ಷ ಶಿರಮಳ್ಳಿ ಸಿದ್ದಪ್ಪ, ಮಹದೇವಸ್ವಾಮಿ, ಮಹದೇವನಾಯಕ, ರಾಮೇಗೌಡ, ವಿಜೇಂದ್ರ, ಹೆಜ್ಜಿಗೆ ಪ್ರಕಾಶ ಮುಂತಾದವರು ಭಾಗವಹಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts