More

    ಕಬ್ಬಳಿ ರಂಗೇಗೌಡರಿಗೆ ಚುಂಚಶ್ರೀ ಪ್ರಶಸ್ತಿ

    ಚನ್ನರಾಯಪಟ್ಟಣ: ಶ್ರೀ ಕ್ಷೇತ್ರ ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ಭೈರವೈಕ್ಯ ಡಾ.ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅವರ ಪಟ್ಟಾಭಿಷೇಕ ವಾರ್ಷಿಕೋತ್ಸವ ಪ್ರಯುಕ್ತ ಕೊಡ ಮಾಡುವ ಚುಂಚಶ್ರೀ ಪ್ರಶಸ್ತಿಗೆ ತಾಲೂಕಿನ ಕಬ್ಬಳಿ ರಂಗೇಗೌಡ ಭಾಜನರಾಗಿದ್ದಾರೆ.


    ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಕ್ಕೆ ನೀಡಿರುವ ಸೇವೆಯನ್ನು ಗುರುತಿಸಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠವು ಪ್ರಶಸ್ತಿಗೆ ರಂಗೇಗೌಡ ಅವರನ್ನು ಆಯ್ಕೆ ಮಾಡಿದೆ. ಸೆ.24ರಂದು ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕು ಆದಿಚುಂಚನಗಿರಿಯಲ್ಲಿ ಆಯೋಜಿಸಿರುವ ರಾಜ್ಯ ಮಟ್ಟದ ಜಾನಪದ ಮೇಳದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವುದು.
    ಚನ್ನರಾಯಪಟ್ಟಣ ತಾಲೂಕು ಹಿರೀಸಾವೆ ಹೋಬಳಿ ಕಬ್ಬಳಿ ಗ್ರಾಮದ ದಿ.ಚಿಣ್ಣೇಗೌಡ ಹಾಗೂ ಸಾವಿತ್ರಮ್ಮ ದಂಪತಿ ಪುತ್ರನಾಗಿ ಅ.26 1937ರಲ್ಲಿ ಜನಿಸಿದರು. 1ರಿಂದ 7ನೇ ತರಗತಿವರೆಗೆ ದಿಡಗ ಸರ್ಕಾರಿ ಹಿರಿಯ ಪಾಠ ಶಾಲೆ, 7 ರಿಂದ 10 ರವರೆಗೆ ಚನ್ನರಾಯಪಟ್ಟಣ ನವೋದಯ ವಿದ್ಯಾಸಂಸ್ಥೆಯಲ್ಲಿ ವಿದ್ಯಾಭ್ಯಾಸ ಮಾಡಿದರು. ಮೈಸೂರು ಮಹಾರಾಜ ಕಾಲೇಜಿನಲ್ಲಿ 2 ವರ್ಷ ಇಂಟರ್ ಮೀಡಿಯಟ್ ಪೂರ್ಣಗೊಳಿಸಿದರು. ನಂತರ ಧಾರ್ಮಿಕ, ರಾಜಕೀಯ, ಸಾಮಾಜಿಕ ಸೇವೆಯತ್ತ ಮುಖ ಮಾಡಿ ಇಂದಿಗೂ ಈ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ.


    ಸ್ವಗ್ರಾಮ ಕಬ್ಬಳಿಯಿಂದ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಸ್ವರ್ಧಿಸಿ ಜಯಗಳಿಸಿ ಉತ್ತಮ ಕೆಲಸ ಮಾಡುವ ಮೂಲಕ ಸತತ ಎರಡು ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದರು. ಎರಡು ಬಾರಿ ತಾಲೂಕು ಬೋರ್ಡ್ ಮೆಂಬರ್, ಒಮ್ಮೆ ತಾಲೂಕು ಬೋರ್ಡ್ ಪ್ರೆಸಿಡೆಂಟ್ ಆಗಿದ್ದರು. 10 ವರ್ಷ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. 6 ವರ್ಷ ಕೆಪಿಸಿಸಿ ಕಾರ್ಯಕಾರಿ ಸಮಿತಿ ಸದಸ್ಯರಾಗಿದ್ದರು. 1987 ರಿಂದ 1990 ರವರೆಗೆ ಭಾರತೀಯ ತೆಂಗು ಅಭಿವೃದ್ಧಿ ಮಂಡಳಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.
    ಕಬ್ಬಳಿ ಶ್ರೀ ಬಸವೇಶ್ವರ ಸ್ವಾಮಿ ದೇಗುಲ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದರು. ದೇಗುಲವು ಆದಿಚುಂಚನಗಿರಿ ಮಹಾಸಂಸ್ಥಾನದ ಒಡೆತನಕ್ಕೆ ಸೇರಿದ ಬಳಿಕವೂ ತಮ್ಮ ಸೇವೆ ಮುಂದುವರಿಸಿದ್ದಾರೆ. ಕಬ್ಬಳಿಯಲ್ಲಿ ಆದಿಚುಂಚನಗಿರಿ ಮಹಾಸಂಸ್ಥಾನ ಮಠ, ಭಕ್ತರ ಸಹಕಾರದೊಂದಿಗೆ ಅಂದಾಜು 75 ರಿಂದ 80 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿರುವ ಬಸವೇಶ್ವರಸ್ವಾಮಿ ದೇಗುಲಕ್ಕೆಂದು ಶ್ರೀ ಮಠಕ್ಕೆ 2 ಎಕರೆ ಜಮೀನನ್ನು ಕಳೆದ ವರ್ಷ ದಾನ ನೀಡಿದ್ದಾರೆ. ಪತ್ನಿ ಸಾವಿತ್ರಮ್ಮ, ಮಕ್ಕಳಾದ ಆರ್.ನಾಗೇಶ್, ಆರ್.ಪ್ರೇಮಾ, ಆರ್.ಕಲಾವತಿ ಹಾಗೂ ಆರ್.ಪಂಕಜಾ ತಂದೆಯ ಧಾರ್ಮಿಕ ಸೇವೆಗೆ ಕೈಜೋಡಿಸಿರುವುದು ಶ್ಲಾಘನೀಯ ಎನ್ನುತ್ತಾರೆ ಕಬ್ಬಳಿ ಮಠದ ಶ್ರೀ ಶಿವಪುತ್ರನಾಥ ಸ್ವಾಮೀಜಿ.


    ಸಮಾಜ ಸೇವೆಗೆ ಸಂದ ಫಲ: ಸದಾ ಧಾರ್ಮಿಕ ಹಾಗೂ ಸಾಮಾಜಿಕ ಸೇವೆಯಲ್ಲಿ ತೊಡಗಿರುವ ಇವರನ್ನು ಮಹಾಸಂಸ್ಥಾನ ಮಠವು ಗುರುತಿಸಿ ಪ್ರಶಸ್ತಿಗೆ ಆಯ್ಕೆ ಮಾಡಿದೆ. ಸೆ.24 ಶನಿವಾರ ಹಮ್ಮಿಕೊಂಡಿರುವ ಜಾನಪದ ಮೇಳದಲ್ಲಿ ಕಬ್ಬಳಿ ರಂಗೇಗೌಡ ಅವರಿಗೆ ಚುಂಚಶ್ರೀ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ‘ವಿಜಯವಾಣಿ’ ಗೆ ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts