More

    ಕಪ್ಪತಗುಡ್ಡದ 2 ಬ್ಲಾಕ್ ರದ್ದುಪಡಿಸಲು ಹುನ್ನಾರ!

    ಗದಗ: ಕಪ್ಪತಗುಡ್ಡ ವನ್ಯಜೀವಿ ಅಭಯಾರಣ್ಯದಲ್ಲಿ ನಾಲ್ಕು ವಲಯಗಳನ್ನು (1,2,3,4) ಮಾಡಬೇಕೆಂದು ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಆದರೆ, ಇದರಲ್ಲಿ 1 ಮತ್ತು 2ನೇ ವಲಯ ಇಟ್ಟುಕೊಂಡು 3 ಮತ್ತು 4ನೇ ಬ್ಲಾಕ್​ಗಳನ್ನು ರದ್ದುಪಡಿಸಬೇಕೆಂದು ಜನಪ್ರತಿನಿಧಿಗಳೇ ಪಟ್ಟು ಹಿಡಿದಿರುವ ಅಂಶ ಬೆಳಕಿಗೆ ಬಂದಿದೆ.

    ವನ್ಯಜೀವಿಧಾಮಕ್ಕೆ ಸಂಬಂಧಿಸಿದಂತೆ ಜಿಲ್ಲಾಧಿಕಾರಿ ನೇತೃತ್ವದ ಟಾಸ್ಕ್​ಫೋರ್ಸ್ ಸಮಿತಿ ಮೇಲೆ ಪ್ರಭಾವ ಬೀರಿ ನಾಲ್ಕು ವಲಯಗಳ ಪೈಕಿ ಎರಡು ವಲಯಗಳನ್ನು ರದ್ದು ಮಾಡಬೇಕೆಂದು ಕೇಂದ್ರಕ್ಕೆ ಪ್ರಸ್ತಾವನೆ ಸಲ್ಲಿಸುವ ಹುನ್ನಾರ ನಡೆದಿದೆ ಎಂಬ ಆರೋಪ ದಟ್ಟವಾಗಿದೆ.

    ಕಪ್ಪತಗುಡ್ಡ ವನ್ಯಜೀವಿಧಾಮ ಕುರಿತಂತೆ ಪರಿಸರ ಸೂಕ್ಷ್ಮ ಪ್ರದೇಶ ನಿಗದಿಪಡಿಸುವ ಕುರಿತು ಕಳೆದ ಮೇ 22 ರಂದು ವಿಧಾನಸೌಧದಲ್ಲಿ ಜರುಗಿದ ಜನಪ್ರತಿನಿಧಿಗಳು ಮತ್ತು ಹಿರಿಯ ಅಧಿಕಾರಿಗಳ ಸಭೆಯಲ್ಲಿ ತೀವ್ರ ಚರ್ಚೆ ನಡೆದಿದೆ. ಈ ಸಭೆಯಲ್ಲಿ ಅರಣ್ಯ ಸಚಿವ ಆನಂದ ಸಿಂಗ್, ಗಣಿ ಮತ್ತು ಭೂವಿಜ್ಞಾನ ಸಚಿವ ಸಿ.ಸಿ. ಪಾಟೀಲ, ಬೃಹತ್ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್, ಸಂಸದ ಶಿವಕುಮಾರ ಉದಾಸಿ, ಶಾಸಕರಾದ ಕಳಕಪ್ಪ ಬಂಡಿ ಮತ್ತು ಹಿರಿಯ ಅಧಿಕಾರಿಗಳು ಇದ್ದರು.

    ಸಭೆಯಲ್ಲಿ ನಡೆದಿದ್ದೇನು?: ಪರಿಸರ ಸೂಕ್ಷ್ಮ ಪ್ರದೇಶದ ಗಡಿ ನಿಗದಿಪಡಿಸಿ ಅಧಿಸೂಚನೆ ಹೊರಡಿಸಿ ಬೇಗನೆ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸದಿದ್ದರೆ ಕಪ್ಪತಗುಡ್ಡದ ಸುತ್ತಮುತ್ತಲಿನ 10 ಕಿಮೀ ವ್ಯಾಪ್ತಿವರೆಗೆ ವನ್ಯಜೀವಿಧಾಮದ ಗಡಿ ಎಂದು ಹೇಳಬೇಕಾಗುತ್ತದೆ. ಹೀಗಾಗಿ ಕೂಡಲೇ ಪ್ರಸ್ತಾವನೆ ಸಲ್ಲಿಸಬೇಕು ಎಂದು ಮೂವರು ಸಚಿವರು ಸಭೆಗೆ ತಿಳಿಸಿದ್ದಾರೆ. ಕಪ್ಪತಗುಡ್ಡ ರಕ್ಷಣೆ ನಮ್ಮೆಲ್ಲರ ಹೊಣೆ. ವನ್ಯಜೀವಧಾಮ ಅನುಷ್ಠಾನಗೊಳಿಸಲಾಗುವುದು ಎಂದು ಸಚಿವರು ಹೇಳುತ್ತಾರಾದರೂ 5-6 ಕಿಮೀ ಪರಿಸರ ಸೂಕ್ಷ್ಮ ಪ್ರದೇಶ ಇರಬೇಕು ಎಂಬುದನ್ನು ಸಚಿವರು ಸುತಾರಾಂ ಒಪ್ಪುತ್ತಿಲ್ಲ. ಸಾಧ್ಯವಾದಷ್ಟು ಕಡಿಮೆ ಪ್ರದೇಶವನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಗುರುತಿಸಬೇಕು ಎನ್ನುವುದು ಸ್ಥಳೀಯ ಮುಖಂಡರ ವಾದವಾಗಿದೆ. ಕಪ್ಪತಗುಡ್ಡದಲ್ಲಿ ಎಷ್ಟು ಚಿರತೆಗಳಿವೆ? ಬೇರೆ ಪ್ರಾಣಿಗಳು ಎಷ್ಟಿವೆ? ಪ್ರಾಣಿ ಪಕ್ಷಿಗಳ ಮಾಹಿತಿ ಇಲ್ಲದೆಯೇ ಯಾವ ಆಧಾರದ ಮೇಲೆ ವನ್ಯಜೀವಿಧಾಮ ಎಂದು ಘೊಷಣೆ ಮಾಡಲಾಯಿತು? ಕಪ್ಪತಗುಡ್ಡ ವನ್ಯಜೀವಿಧಾಮ ಎಂದು ನಾಲ್ಕು ಬ್ಲಾಕ್​ಗಳನ್ನು ಮಾಡಿರುವುದು ಸರಿಯಲ್ಲ. ಸ್ಥಳೀಯ ಸಂಸದರು, ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಪರಿಭಾವಿತ ಪರಿಸರ ಸೂಕ್ಷ್ಮ ಪ್ರದೇಶ ಕುರಿತು ಪ್ರಸ್ತಾವನೆ ಸಿದ್ಧ್ದಡಿಸಿರುವುದು ಒಪ್ಪುವ ಮಾತಲ್ಲ. ಪರಿಸರ ಸೂಕ್ಷ್ಮ ಪ್ರದೇಶವನ್ನು ಕೇವಲ 200 ಮೀಟರ್​ಗೆ ನಿಗದಿಪಡಿಸಿ ಎಂದು ಶಾಸಕರೊಬ್ಬರು ಸಭೆಯಲ್ಲಿ ಬಲವಾಗಿ ಪ್ರತಿಪಾದನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

    ಇದಕ್ಕೆ ಪ್ರತಿಕ್ರಿಯಿಸಿದ ಅರಣ್ಯ ಇಲಾಖೆ ಹಿರಿಯ ಅಧಿಕಾರಿಗಳು ವನ್ಯಜೀವಿಧಾಮ ಕುರಿತು ಕೇಂದ್ರಕ್ಕೆ ಸಲ್ಲಿಸಲು ಸಿದ್ಧಪಡಿಸಿರುವ ಪ್ರಸ್ತಾವನೆಯನ್ನೇ ಮತ್ತೊಮ್ಮೆ ತಯಾರಿಸಲು ಗದಗ ಉಪಸಂರಕ್ಷಣಾಧಿಕಾರಿಗೆ ಸೂಚಿಸಿ, ಸ್ಥಳೀಯ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

    ವನ್ಯಜೀವಿಧಾಮದ ಗಡಿ ಇರುವ ಅರಣ್ಯವನ್ನು ಪೂರ್ತಿಯಾಗಿ ಹಾಗೂ ವನ್ಯಜೀವಿಧಾಮದ ಗಡಿ ಅಂಚಿನ ಅರಣ್ಯೇತರ ಪ್ರದೇಶಗಳಲ್ಲಿ 100 ಮೀ ನಿಂದ 1 ಕಿಮೀವರೆಗೆ ಪರಿಸರ ಸೂಕ್ಷ್ಮ ಪ್ರದೇಶವೆಂದು ನಿಗದಿ ಮಾಡಬೇಕು ಎಂದು ಸಚಿವರು ತಿಳಿಸಿದಾಗ, ಅರಣ್ಯ ಮಂತ್ರಿ ಸಹ ಸಹಮತ ವ್ಯಕ್ತಪಡಿಸಿ ಒಪ್ಪಿಗೆ ಸೂಚಿಸಿದ್ದಾರೆ.

    ಗಣಿಗಾರಿಕೆಗೆ ಆಸ್ಪದ ಬೇಡ: ಪರಿಸರ ಸೂಕ್ಷ್ಮ ಪ್ರದೇಶದ ಗಡಿಯ ಮಿತಿಯನ್ನು ಕಡಿತ ಮಾಡಿದರೆ ವನ್ಯಜೀವಿಧಾಮ ಮಾಡುವುದರಲ್ಲಿ ಯಾವ ಅರ್ಥವಿದೆ. ಗಡಿ ಮಿತಿಯನ್ನು ಕಡಿತಗೊಳಿಸುವುದರಿಂದ ಗುಡ್ಡದಲ್ಲಿ ಚಿನ್ನ, ಅದಿರು, ಕಲ್ಲು ಮತ್ತು ಮಣ್ಣು ಗಣಿಗಾರಿಕೆಗೆ ಆಸ್ಪದ ನೀಡಿದಂತಾಗುತ್ತದೆ. ಸದ್ಯಕ್ಕೆ ಕಪ್ಪತಗುಡ್ಡದಲ್ಲಿ ಹುಲಿ, ಚಿರತೆಯಂತಹ ಪ್ರಾಣಿಗಳು ಇಲ್ಲದಿರಬಹುದು. ಆದರೆ, ಕಾಲಾಂತರದಲ್ಲಿ ಇಂತಹ ಎಲ್ಲ ಪ್ರಾಣಿಗಳು ವಾಸಿಸಲು ಪೂರಕವಾಗುವಂತಹ ಸ್ಥಿತಿಯನ್ನು ನಿರ್ವಿುಸಬೇಕು. ಹೀಗಾಗಿ ಜನಪ್ರತಿನಿಧಿಗಳು ಸ್ವಾರ್ಥ ಬಿಟ್ಟು ಗುಡ್ಡವನ್ನು ಉಳಿಸುವ ನಿಟ್ಟಿನಲ್ಲಿ ಯೋಜನೆ ರೂಪಿಸಬೇಕು ಎಂಬುದು ಪರಿಸರವಾದಿಗಳ ವಾದ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts