More

    ಕನ್ನಡ ಸಂವಾದ ಮಾಡುವ ಬದ್ಧತೆಯಿರಲಿ -ಶ್ರೀ ಬಸವಪ್ರಭು ಸ್ವಾಮೀಜಿ ಆಶಯ -ಅಖಂಡ ಕರ್ನಾಟಕ ರಕ್ಷಣಾ ವೇದಿಕೆಯಿಂದ ರಾಜ್ಯೋತ್ಸವ 

    ದಾವಣಗೆರೆ: ಕನ್ನಡಿಗರು ಯಾವುದೇ ಭಾಷೆ ಕಲಿಯಲು ಅಭ್ಯಂತರವಿಲ್ಲ. ಆದರೆ ಹೋದಲ್ಲೆಲ್ಲ ಕನ್ನಡದ ಮೂಲಕ ಸಂವಾದ ಮಾಡುವ ಬದ್ಧತೆ ಬೆಳೆಸಿಕೊಳ್ಳಬೇಕು ಎಂದು ಚಿತ್ರದುರ್ಗ ಮುರುಘಾಮಠದ ಉಸ್ತುವಾರಿ ಶ್ರೀ ಬಸವಪ್ರಭು ಸ್ವಾಮೀಜಿ ಆಶಿಸಿದರು.
    ಇಲ್ಲಿನ ಶಿವಯೋಗಿಮಂದಿರದಲ್ಲಿ ಅಖಂಡ ಕರ್ನಾಟಕ ರಕ್ಷಣಾ ವೇದಿಕೆಯಿಂದ ಶನಿವಾರ ಹಮ್ಮಿಕೊಂಡಿದ್ದ 68ನೇ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
    ಕೆಲವು ಮನೆಗಳಲ್ಲಿ ಚಿಣ್ಣರು ಕೂಡ ಇಂಗ್ಲಿಷ್ ಭಾಷೆ ವ್ಯಾಮೋಹಕ್ಕೆ ಒಳಗಾಗಿದ್ದಾರೆ. ಆದರೆ, ಪಾಲಕರು ಮಕ್ಕಳಲ್ಲಿ ಕನ್ನಡದ ಪ್ರೀತಿಯನ್ನು ಕಲಿಸಬೇಕು. ಈ ಬದ್ಧತೆ ಉಳಿಸಿಕೊಂಡಲ್ಲಿ ಮಾತೃಭಾಷೆ ಉಳಿಸಿ ಎಂಬ ಹೇಳುವ ಅಗತ್ಯ ಬಾರದು ಎಂದರು.
    ಕರ್ನಾಟಕ ಎಂದು ಹೆಸರಾಗಿದ್ದರೂ ಕನ್ನಡ ಭಾಷೆ ಮಾತ್ರ ಉಸಿರಾಗಿಲ್ಲ. ಆಂಗ್ಲ ಮಾಧ್ಯಮದಲ್ಲಿ ಕಲಿತರೇನೆ ನೌಕರಿ, ಭವಿಷ್ಯ ಸಿಗಲಿದೆ ಎಂಬ ಭ್ರಮೆಯಿಂದ ಪಾಲಕರು ಹೊರಬರಬೇಕು. ಇಂದಿನ ಜಾಗತೀಕರಣ ಸಂದರ್ಭದಲ್ಲಿ ಭಾಷೆ ತೊಂದರೆಯಲ್ಲಿದೆ. ಹಾಗಾಗಿ ಭಾಷೆಯನ್ನು ಹೆಚ್ಚು ಬಳಸಿದಷ್ಟು ಉಳಿಯಲಿದೆ ಎಂದು ತಿಳಿಸಿದರು.
    ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ, ಇನ್‌ಸೈಟ್ಸ್ ಸಂಸ್ಥೆಯ ಸಂಸ್ಥಾಪಕ ಜಿ.ಬಿ.ವಿನಯಕುಮಾರ್ ಮಾತನಾಡಿ ಮಾತೃಭಾಷೆ ನಮ್ಮಲ್ಲಿ ಸ್ವಾತಂತ್ರೃದ ಜತೆಗೆ ಸ್ವಂತ ಯೋಚನಾ ಲಹರಿ, ಸೃಜನಶೀಲತೆಯನ್ನು ಬೆಳೆಸಲಿದೆ. ಇದರಿಂದ ಅಭಿವೃದ್ಧಿ ಸಾಧ್ಯವಾಗಲಿದ್ದು ಜಿಡಿಪಿ ಪ್ರಮಾಣ 10ಪಟ್ಟು ಹೆಚ್ಚಲಿದೆ ಎಂದು ಹೇಳಿದರು.
    ಗ್ರಾಮೀಣ ಪ್ರದೇಶದ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಓದಿದ ಕಾರಣಕ್ಕೆ ನಗಣ್ಯವಾಗಿ ಕಾಣಲಾಗುತ್ತಿದೆ. ಅವರಲ್ಲಿ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಬಗ್ಗೆ ಆತ್ಮಸ್ಥೈರ್ಯ ತುಂಬಿದರೆ ಆ ಪ್ರತಿಭೆಗಳು ಅರಳಿವೆ. ಕನ್ನಡಕ್ಕೂ ಹೊಸ ದಿಕ್ಕು ಸಿಗಲಿದೆ ಎಂದರು.
    ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಲೋಕಿಕೆರೆ ನಾಗರಾಜ್ ಮಾತನಾಡಿ ಗಡಿ ಜಿಲ್ಲೆಗಳು ಪರಭಾಷೆಯ ಹಾವಳಿಗೆ ಒಳಗಾಗಿವೆ. ಆದರೆ ದಾವಣಗೆರೆ ಮಾತ್ರ ಅಚ್ಚ ಕನ್ನಡತನ ಉಳಿಸಿಕೊಂಡುಬಂದಿದೆ. ಕನ್ನಡಪರ ಸಂಘಟನೆಗಳು ಸೈನಿಕರಂತೆ ಕನ್ನಡ ಉಳಿಸುವ ಕೆಲಸ ಮಾಡುತ್ತಿವೆ ಎಂದರು.
    ಕಾರ್ಯಕ್ರಮದಲ್ಲಿ ಸಂಘಟನೆ ರಾಜ್ಯಾಧ್ಯಕ್ಷ ಬಿ.ಜಿ. ಅಜಯಕುಮಾರ್, ಸಂಸ್ಥಾಪಕ ಎಸ್.ಜಿ.ಸೋಮಶೇಖರ್, ಜಿಪಂ ಮಾಜಿ ಸದಸ್ಯ ತೇಜಸ್ವಿ ಪಟೇಲ್, ಕನ್ನಡ ಪರ ಹೋರಾಟಗಾರರಾದ ಟಿ. ಶಿವಕುಮಾರ್, ಕೆ.ಜಿ.ಶಿವಕುಮಾರ್, ನಾಗೇಂದ್ರ ಬಂಡೀಕರ್, ಕೆೆ.ಎಚ್.ರೇವಣಸಿದ್ದಪ್ಪ, ಅವಿನಾಶ್, ಬಿ.ಎನ್. ವಿನಾಯಕ, ಜೈಮುನಿ, ಲಕ್ಷ್ಮೀದೇವಿ, ಶ್ರುತಿ ಇನಾಂದಾರ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts