More

    ಕತ್ತಿ ಹಿಡಿದ ವೈದ್ಯರು, ನರ್ಸ್!

    ಕಾರವಾರ: ಕೈಗಾದಿಂದ ಯಲ್ಲಾಪುರಕ್ಕೆ ತೆರಳುವ ಅತಿ ಇಕ್ಕಟ್ಟಾದ ಕಾಡು ರಸ್ತೆ. ಶುಕ್ರವಾರ ಮಳೆಯಿಂದ ರಸ್ತೆಗೆ ಅಡ್ಡಲಾಗಿ ಮರವೊಂದು ಬಿದ್ದಿತ್ತು. ಎರಡೂ ದಿಕ್ಕುಗಳಿಂದ ಬಂದ ಕೆಲವು ವಾಹನ ಸವಾರರು ದಿಕ್ಕು ತೋಚದೇ ನಿಂತಿದ್ದರು.

    ಅಷ್ಟರಲ್ಲಿ ಅಲ್ಲಿಗೆ ಆಂಬುಲೆನ್ಸ್ ಒಂದರಲ್ಲಿ ಬಂದ ಮೂರ್ನಾಲ್ಕು ಜನ ಕತ್ತಿ, ಕೊಡಲಿ ಹಿಡಿದು ಕೂಡಲೆ ಮರ ಕಡಿದರು. ಕೊಂಬೆಗಳನ್ನು ಸರಿಸಿ ದಾರಿ ಮಾಡಿ ಆಂಬುಲೆನ್ಸ್ ಕೊಂಡೊಯ್ದರು. ಇತರ ವಾಹನಗಳೂ ತೆರಳಲು ಅನುವು ಮಾಡಿಕೊಟ್ಟರು.

    ಅವರು ಯಾವುದೇ ಹೆದ್ದಾರಿ ಸಹಾಯವಾಣಿ ನೌಕರರಲ್ಲ. ಪಿಡಬ್ಲ್ಯುಡಿ, ಪಂಚಾಯತ್ ರಾಜ್ ಇಲಾಖೆಯ, ಅರಣ್ಯ ಅಥವಾ ನಗರ, ಗ್ರಾಮೀಣ ಸ್ಥಳೀಯ ಸಂಸ್ಥೆಗಳ ಕಾರ್ವಿುಕರಂತೂ ಅಲ್ಲವೇ ಅಲ್ಲ. ಅವರು ವೈದ್ಯರು, ನರ್ಸ್ ಹಾಗೂ ಆಂಬುಲೆನ್ಸ್ ಚಾಲಕ!

    ಅಚ್ಚರಿಯಾದರೂ ಸತ್ಯ. ಆರೋಗ್ಯ ಇಲಾಖೆಯ ನೆರವಿನಲ್ಲಿ ಸ್ಕೋಡ್​ವೇಸ್ ಎಂಬ ಸ್ವಯಂಸೇವಾ ಸಂಸ್ಥೆ ಜಿಲ್ಲೆಯ ಅಂದಾಜು 500 ಕುಗ್ರಾಮಗಳಿಗೆ ತೆರಳಿ ಆರೋಗ್ಯ ಸೇವೆ ನೀಡುತ್ತಿದೆ. ಈ ಸಂಚಾರ ಆಸ್ಪತ್ರೆಯ ಸಿಬ್ಬಂದಿ ಇಂಥ ಸವಾಲುಗಳನ್ನೂ ಎದುರಿಸಿ ಜನರಿಗೆ ಉಚಿತ ಔಷಧ, ಪ್ರಯೋಗಾಲಯ ಪರೀಕ್ಷೆ ಹಾಗೂ ಚಿಕಿತ್ಸೆ ನೀಡುತ್ತಿದ್ದಾರೆ.

    ಜಿಲ್ಲೆಯ ಜೊಯಿಡಾ, ಯಲ್ಲಾಪುರ, ಶಿರಸಿ, ಭಟ್ಕಳ, ಹೊನ್ನಾವರ, ಕುಮಟಾ ಹಾಗೂ ಅಂಕೋಲಾದಲ್ಲಿ ನಿಗದಿತ ದಿನದಲ್ಲಿ 70 ಕೇಂದ್ರಗಳಲ್ಲಿ ವಾರಕ್ಕೆ ಒಂದು ದಿನ ಹೋಗಿ ಸೇವೆ ನೀಡುತ್ತಿವೆ. ಸಂಚಾರ ಆರೋಗ್ಯ ಘಟಕದಲ್ಲಿ ಒಬ್ಬ ವೈದ್ಯ, ಒಬ್ಬರು ಸ್ಟಾಫ್ ನರ್ಸ್, ಲ್ಯಾಬ್ ಟೆಕ್ನಿಷಿಯನ್ ಸೇರಿ 6 ಸಿಬ್ಬಂದಿ ಇರುತ್ತಾರೆ. ಅಲ್ಲದೆ, ಕೈಗಾ ಹಾಗೂ ಸುತ್ತಲಿನ 16 ಕಿಮೀ ವ್ಯಾಪ್ತಿಯಲ್ಲೂ ಇನ್ನೊಂದು ವಾಹನ ಓಡಾಡುತ್ತಿದೆ.

    ಕುಗ್ರಾಮಗಳಿಗೆ ನಮ್ಮ ವಾಹನ ತೆರಳುವುದರಿಂದ ಇಂಥ ಸವಾಲು ಸಾಮಾನ್ಯ. ಇದರಿಂದ ಐದು ಅಡಿ ನೀರಿನಲ್ಲಿಯೂ ವಾಹನ ಓಡಿಸಬೇಕಾಗುತ್ತದೆ. ಎಲ್ಲ ವಾಹನಗಳಲ್ಲಿ ಕತ್ತಿ, ಕೊಡಲಿ, ಕರಗಸ, ಹಗ್ಗ ಮುಂತಾದ ಸಾಮಗ್ರಿ ಇಟ್ಟಿರುತ್ತೇವೆ. ಸಿಬ್ಬಂದಿಯೇ ಎಲ್ಲವನ್ನೂ ಮಾಡಿಕೊಳ್ಳುತ್ತಾರೆ.
    | ವೆಂಕಟೇಶ ನಾಯ್ಕ ಸ್ಕೋಡ್​ವೇಸ್ ನಿರ್ದೇಶಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts