More

    ಕಣ್ಮನ ಸೆಳೆಯುತ್ತಿದೆ ವಸ್ತು ಪ್ರದರ್ಶನ: ಸಿದ್ಧಗಂಗಾ ಮಠದ ಜಾತ್ರೆ ವೈಭವ, 178 ಮಳಿಗೆಗಳ ಸ್ಥಾಪನೆ

    ತುಮಕೂರು: ಸಿದ್ಧಗಂಗಾ ಮಠದ ಸಿದ್ದಲಿಂಗೇಶ್ವರ ಜಾತ್ರಾ ವಿಶೇಷ ಎನಿಸಿರುವ ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ನೋಡುಗರ ಕಣ್ಮನ ಸೆಳೆಯುತ್ತಿದೆ.

    ಧಾರ್ಮಿಕ ಆಚರಣೆಯಲ್ಲಿ ರೈತರಿಗೂ ನೆರವಾಗಲಿ ಎಂಬ ದೂರದೃಷ್ಟಿಯಿಂದ ಡಾ.ಶಿವಕುಮಾರ ಸ್ವಾಮೀಜಿ 1964ರಲ್ಲಿ ವಸ್ತು ಪ್ರದರ್ಶನ ಆರಂಭಿಸಿದ್ದರು. ಸಣ್ಣ ಪ್ರಮಾಣದಲ್ಲಿ ಆರಂಭವಾದ ಪ್ರದರ್ಶನ ಇಂದು ಲಕ್ಷಾಂತರ ಜನರ ಆಕರ್ಷಣೀಯ ಕೇಂದ್ರ ಎನಿಸಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರದ 18 ಹಾಗೂ 160 ಖಾಸಗಿ ಸಂಘ ಸಂಸ್ಥೆಗಳು ಸೇರಿ 178 ಮಳಿಗೆಗಳನ್ನು ತೆರೆಯುವ ಮೂಲಕ ನಾಡಿನಾದ್ಯಂತ ಪ್ರಸಿದ್ಧ ಜನೋಪಯೋಗಿ ವಸ್ತು ಪ್ರದರ್ಶನವೆಂಬ ಹೆಗ್ಗಳಿಕೆ ಇದೆ.

    ಕೃಷಿ, ಆರೋಗ್ಯ, ತೋಟಗಾರಿಕೆ, ಅರಣ್ಯ, ರೇಷ್ಮೆ, ನೀರಾವರಿ, ಶಿಕ್ಷಣ, ಪಶುಪಾಲನೆ, ಮೀನುಗಾರಿಕೆ, ಮಹಿಳೆ ಮತ್ತು ಮಕ್ಕಳ ಕಲ್ಯಾಣ, ಸಿದ್ಧಗಂಗಾ ಆಸ್ಪತ್ರೆ ಸೇರಿ ವಿವಿಧ ಇಲಾಖೆಗಳು, ಖಾಸಗಿ ಸಂಸ್ಥೆಗಳು ಈ ವಸ್ತು ಪ್ರದರ್ಶನದಲ್ಲಿ ಮಳಿಗೆ ತೆರೆದು ಇಲಾಖೆಯ ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡುತ್ತಿವೆ.

    ಕೃಷಿ ಇಲಾಖೆ ಕ್ಷೇತ್ರದ ಹೊಸ ಸಂಶೋಧನೆಗಳ ಪರಿಚಯ, ವಿವಿಧ ಕೃಷಿ ಬೆಳೆಗಳ ಪ್ರಾತ್ಯಕ್ಷಿಕೆಗಳ ಪ್ರತ್ಯಕ್ಷ ದರ್ಶನದ ಮೂಲಕ ಮಾಹಿತಿ ಒದಗಿಸಿ ಉತ್ತೇಜಿಸುವ ಮೂಲಕ ಪ್ರೋತ್ಸಾಹಿಸುವ ಕಾರ್ಯ ಮಾಡಿದೆ.

    ವಸ್ತು ಪ್ರದರ್ಶನದ ಅಂಗವಾಗಿ ಬಯಲು ರಂಗಮಂದಿರದಲ್ಲಿ ಪ್ರತಿನಿತ್ಯ ಸಂಜೆ ನಾಡಿನ ಹೆಸರಾಂತ ಕಲಾವಿದರುಗಳಿಂದ ಸುಗಮ ಸಂಗೀತ, ವಚನಗಾಯನ, ಭರತನಾಟ್ಯ, ಯಕ್ಷಗಾನ, ನಾಟಕ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಸಾಂಗವಾಗಿ ನಡೆಯುತ್ತಿವೆ.

    ವಸ್ತು ಪ್ರದರ್ಶನದ ಕಾರ್ಯದರ್ಶಿಯಾಗಿ 45 ವರ್ಷದ ಅನುಭವವಿದೆ. 1977ರಲ್ಲಿ 50 ಪೈಸೆ ಪ್ರವೇಶ ಶುಲ್ಕ ನಿಗದಿಪಡಿಸಲಾಗಿತ್ತು. ನಂತರ 1 ರೂ. ನಿಗದಿಪಡಿಸಿದ್ದೆವು. ಆಗ ಶಿವಕುಮಾರ ಸ್ವಾಮೀಜಿ ಬಂದು ಯಾರನ್ನು ಕೇಳಿ 1 ರೂ. ಪ್ರವೇಶ ಶುಲ್ಕ ಮಾಡಿದ್ದೀರಿ ಎಂದು ನಮ್ಮನ್ನು ತರಾಟೆಗೆ ತೆಗೆದುಕೊಂಡಿದ್ದರು. ವರನಟ ಡಾ.ರಾಜ್‌ಕುಮಾರ್ ವಸ್ತುಪ್ರದರ್ಶನಕ್ಕೆ ಭೇಟಿ ನೀಡಿದ್ದರು.
    ಬಿ.ಗಂಗಾಧರಯ್ಯ, ಕಾರ್ಯದರ್ಶಿ, ಕೃಷಿ ಮತ್ತು ಕೈಗಾರಿಕಾ ವಸ್ತು ಪ್ರದರ್ಶನ ಸಮಿತಿ

    ಹೂವುಗಳಲ್ಲಿ ಅರಳಿದ ಶ್ರೀಗಳ ಗದ್ದುಗೆ: ವಸ್ತು ಪ್ರದರ್ಶನದಲ್ಲಿ ತೋಟಗಾರಿಕೆ ಇಲಾಖೆ ವತಿಯಿಂದ ತೆರೆದಿರುವ ಮಳಿಗೆಯಲ್ಲಿ ನಿರ್ಮಾಣ ಮಾಡಲಾಗಿರುವ ಲಿಂಗೈಕ್ಯ ಡಾ.ಶಿವಕುಮಾರ ಸ್ವಾಮೀಜಿ ಅವರ ಗದ್ದುಗೆ ಪ್ರಮುಖ ಆಕರ್ಷಣೆಯಾಗಿದೆ.
    ಗುಲಾಬಿ, ಸೇವಂತಿ ಸೇರಿ ವಿವಿಧ ಬಗೆಯ ಬಣ್ಣ ಬಣ್ಣದ ಹೂವುಗಳಿಂದ ನಿರ್ಮಾಣಗೊಂಡಿರುವ ಶ್ರೀಗಳ ಗದ್ದುಗೆ ನೋಡುಗರನ್ನು ಕೈಬೀಸಿ ಕರೆಯುತ್ತಿದೆ. 500 ಕೆಜಿ ವಿವಿಧ ಬಗೆಯ ಹೂವುಗಳಿಂದ ಮೂರ್ನಾಲ್ಕು ದಿನ 22 ಸಿಬ್ಬಂದಿ ಸೇರಿ ನಿರ್ಮಾಣ ಮಾಡಿರುವ ಗದ್ದುಗೆಯ ಕಲಾಕೃತಿ ಇಡೀ ವಸ್ತು ಪ್ರದರ್ಶನದ ಕೇಂದ್ರ ಬಿಂದುವಾಗಿದೆ.

    ಶ್ರೀಸಿದ್ದಲಿಂಗ ಸ್ವಾಮೀಜಿ, ಇಂಧನ ಸಚಿವ ವಿ.ಸುನಿಲ್‌ಕುಮಾರ್, ಸಕ್ಕರೆ ಖಾತೆ ಸಚಿವ ಶಂಕರ ವಿ.ಪಾಟೀಲ್ ಮುನೇನಕೊಪ್ಪ, ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ್, ಕರ್ನಾಟಕ ಗ್ರಾಮೀಣ ಮೂಲ ಸೌಕರ್ಯ ಅಭಿವೃದ್ಧಿ ನಿಯಮಿತದ ಅಧ್ಯಕ್ಷ ಎಂ.ರುದ್ರೇಶ್ ಭಾಗವಹಿಸುವರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts