More

    ಕಡ್ಲೇಬಾಳು ಜನತಾ ದರ್ಶನದಲ್ಲಿ 380 ಅರ್ಜಿಗಳಿಗೆ ಪರಿಹಾರ -ಐದು ದಶಕ ನಂತರ ಕಕ್ಕರಗೊಳ್ಳ ಕಾಲನಿಗೆ ಇ-ಸ್ವತ್ತು! – ಅಮೃತನಗರ ಕಂದಾಯ ಗ್ರಾಮ ಕನಸಿಗೆ ಬುನಾದಿ 

    ದಾವಣಗೆರೆ: ಕಕ್ಕರಗೊಳ್ಳದ ದಲಿತ ಕಾಲನಿ ನಿವಾಸಿ 79 ಕುಟುಂಬಗಳಿಗೆ ಐದು ದಶಕ ಬಳಿಕ (ಇ-ಸ್ವತ್ತು) ಸ್ಥಳದಲ್ಲೇ ಸ್ವಾಧೀನಪತ್ರ ಸಿಕ್ಕ ಸಂತೋಷ. ಅನೇಕ ವರ್ಷದಿಂದ ಮನೆ ಕಟ್ಟಿಕೊಂಡು ವಾಸಿಸುತ್ತಿದ್ದ 180 ಕುಟುಂಬಗಳಿಗೆ ಹಕ್ಕುಪತ್ರಗಳ ಸಿದ್ಧತೆ ಜತೆಗೆ, ಬಹುದಿನದ ಬೇಡಿಕೆಯಂತೆ ಕಂದಾಯ ಗ್ರಾಮವಾಗುವತ್ತ ಹೆಜ್ಜೆ ಇಟ್ಟ ಸಂತಸ ಅಮೃತನಗರ ಗ್ರಾಮಸ್ಥರದು.
    ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ನೇತೃತ್ವದಲ್ಲಿ ತಾಲೂಕಿನ ಕಡ್ಲೇಬಾಳು ಗ್ರಾಮದಲ್ಲಿ ಜಿಲ್ಲಾಡಳಿತ, ಜಿಪಂನಿಂದ ಸೋಮವಾರ ಆಯೋಜಿಸಿದ್ದ ಚೊಚ್ಚಲ ಜನತಾ ದರ್ಶನದ ವಿಶೇಷಗಳಿವು.
    ಕಡ್ಲೇಬಾಳು ಗ್ರಾಮದ 24 ಸರ್ವೇ ನಂಬರ್‌ನಲ್ಲಿದ್ದ ಬಹುಮಾಲೀಕತ್ವದ ಪಹಣಿಯನ್ನು ಏಕ ಮಾಲೀಕತ್ವದ ಪಹಣಿ ಮಾಡುವ ದಿಸೆಯಲ್ಲಿ, 25 ಮಂದಿ ಸರ್ವೇಯರ್‌ಗಳನ್ನು ನಿಯೋಜಿಸಿ ಪೋಡುಮುಕ್ತ ಅಭಿಯಾನಕ್ಕೆ ಜನತಾ ದರ್ಶನ ವೇದಿಕೆಯಾಯಿತು. ರುದ್ರಭೂಮಿಗೆ ಕಂದಾಯ ಇಲಾಖೆ, ಜಮೀನು ಹದ್ದುಬಸ್ತು ಮಾಡಿ ಹಸ್ತಾಂತರಿಸಿತು.
    ಮಾಳಗೊಂಡನಹಳ್ಳಿಯಲ್ಲಿ ಕೃಷಿ ವೇಳೆ ರೈತ ದುರ್ಗಪ್ಪ ಮೃತರಾಗಿದ್ದು, ಸಂತ್ರಸ್ತ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ ನೀಡಲಾಯಿತು. 57 ಜನರಿಗೆ ಪಿಂಚಣಿ, 18 ಮಂದಿಗೆ ದನದ ಕೊಟ್ಟಿಗೆ ನಿರ್ಮಾಣಕ್ಕೆ ಕಾರ್ಯಾದೇಶ, 12 ಅಂಗವಿಕಲರಿಗೆ ಹೊಲಿಗೆ ಯಂತ್ರ, 36 ಕುಟುಂಬಕ್ಕೆ ಶೌಚಗೃಹ ಕಟ್ಟಿಕೊಳ್ಳಲು ಮಂಜೂರಾತಿ ನೀಡಲಾಯಿತು.
    ಐವರು ಗರ್ಭಿಣಿಯರಿಗೆ ಸೀಮಂತ ಕಾರ್ಯ, ಆಯ್ದ ಮಕ್ಕಳಿಗೆ ಅನ್ನಪ್ರಾಶನ ಮಾಡಲಾಯಿತು. ಜನತಾ ದರ್ಶನ ಕಾರ್ಯಕ್ರಮದಲ್ಲಿ 1250ಕ್ಕೂ ಹೆಚ್ಚು ಅರ್ಜಿ ಬಂದಿದ್ದು 380 ಅರ್ಜಿ ವಿಲೇ ಮಾಡಲಾಗಿದೆ ಎಂದು ತಹಸೀಲ್ದಾರ್ ಎಂ.ಬಿ.ಅಶ್ವತ್ಥ್ ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts