More

    ಕಠಿಣ ಕ್ರಮಕ್ಕೆ ಮುಂದಾಗಿ

    ಧಾರವಾಡ: ಜಿಲ್ಲೆಯಲ್ಲಿನ ಎಲ್ಲ ಕಂಟೇನ್ಮೆಂಟ್ ಪ್ರದೇಶಗಳಲ್ಲಿ ಅಗತ್ಯ ಸೇವೆಗಳಲ್ಲಿರುವ ಜನರನ್ನು ಹೊರತುಪಡಿಸಿ ಉಳಿದವರು ಹೊರಬರದಂತೆ ಕಟ್ಟುನಿಟ್ಟಿನ ಕ್ರಮ ಜರುಗಿಸುವ ಕಾರ್ಯವನ್ನು ಘಟನಾ ಕಮಾಂಡರ್​ಗಳು ಇನ್ನಷ್ಟು ಚುರುಕುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ಸೂಚನೆ ನೀಡಿದರು.

    ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಆರೋಗ್ಯ ಕಾರ್ಯಪಡೆ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕಂಟೇನ್ಮೆಂಟ್ ಪ್ರದೇಶದ ನಿವಾಸಿಗಳಿಗೆ ಹಾಲು, ತರಕಾರಿ, ಔಷಧ ಸೇರಿ ಅಗತ್ಯ ವಸ್ತುಗಳ ಪೂರೈಕೆ ಸಮರ್ಪಕವಾಗಿ ರಬೇಕು. ಹೋಂ ಕ್ವಾರಂಟೈನ್ ನಿಯಮ ಉಲ್ಲಂಘಿಸುವ ವ್ಯಕ್ತಿಗಳ ವಿರುದ್ಧ ಕ್ರಮ ಜರುಗಿಸುವ ಕಾರ್ಯ ತ್ವರಿತಗೊಳ್ಳಬೇಕು ಎಂದರು.

    ಕಂಟೈನಮೆಂಟ್ ಪ್ರದೇಶಗಳಿಗೆ ನೇಮಿಸಿರುವ ಘಟನಾ ಕಮಾಂಡರ್​ಗಳ ಜವಾಬ್ದಾರಿ ಮಹತ್ವದ್ದಾಗಿದೆ. ನಿಗದಿತ ಪ್ರದೇಶ ವ್ಯಾಪ್ತಿಯಲ್ಲಿ ವಾಸಿಸುವ ಖಾಸಗಿ ಮತ್ತು ಸರ್ಕಾರಿ ವೈದ್ಯರು, ನರ್ಸಿಂಗ್, ಅರೆ ವೈದ್ಯಕೀಯ ಸಿಬ್ಬಂದಿ, ಬ್ಯಾಂಕ್​ಗಳು, ಸರ್ಕಾರಿ ನೌಕರರು, ಎಸ್ಸೆಸ್ಸೆಲ್ಸಿ ಮತ್ತು ಇತರ ಪರೀಕ್ಷೆಗಳಿಗೆ ಹಾಜರಾಗುವ ಅಭ್ಯರ್ಥಿಗಳು, ತುರ್ತು ಆರೋಗ್ಯ ಚಿಕಿತ್ಸೆ ಹೊಂದಿರುವ ಜನರನ್ನು ಹೊರತುಪಡಿಸಿ ಉಳಿದ ನಾಗರಿಕರು ಅನಗತ್ಯ ಸಂಚರಿಸುವುದನ್ನು ಸಂಪೂರ್ಣ ನಿರ್ಬಂಧಿಸಬೇಕು ಎಂದರು.

    ಈಗಾಗಲೇ ಹೋಂ ಕ್ವಾರಂಟೈನ್​ನಲ್ಲಿರುವ ಜನರು ನಿಯಮ ಉಲ್ಲಂಘಿಸುತ್ತಿರುವ ಪ್ರಕರಣಗಳ ಮಾಹಿತಿ ನಿತ್ಯ ತಂತ್ರಾಂಶದ ಮೂಲಕ ದೊರೆಯುತ್ತಿದೆ. ಮೊದಲ ಬಾರಿ ನಿಯಮ ಉಲ್ಲಂಘಿಸಿದ ವ್ಯಕ್ತಿಗೆ ಎಚ್ಚರಿಕೆ, 2ನೇ ಬಾರಿ ಸಾಂಸ್ಥಿಕ ಕ್ವಾರಂಟೈನ್, 3ನೇ ಬಾರಿ ನಿಯಮ ಉಲ್ಲಂಘಿಸಿದರೆ ಪ್ರಕರಣ ದಾಖಲಿಸಬೇಕು ಎಂದರು.

    ಜಿಪಂ ಸಿಇಒ ಡಾ. ಬಿ.ಸಿ. ಸತೀಶ ಮಾತನಾಡಿ, ನೆಗಡಿ, ಕೆಮ್ಮು, ತೀವ್ರ ಜ್ವರ (ಐಎಲ್​ಐ) ಪ್ರಕರಣಗಳ ಕುರಿತು ನಿತ್ಯ ಕೆಪಿಎಂಇ ಪೋರ್ಟಲ್​ನಲ್ಲಿ ಮಾಹಿತಿ ಒದಗಿಸದ ಆಸ್ಪತ್ರೆಗಳಿಗೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಖುದ್ದಾಗಿ ಭೇಟಿ ನೀಡಿ ಕ್ರಮ ಜರುಗಿಸಬೇಕು ಎಂದರು.

    ಪಾಲಿಕೆ ಆಯುಕ್ತ ಡಾ. ಸುರೇಶ ಇಟ್ನಾಳ, ಅಪರ ಜಿಲ್ಲಾಧಿಕಾರಿ ಶಿವಾನಂದ ಕರಾಳೆ, ಉಪವಿಭಾಗಾಧಿಕಾರಿ ಮಹ್ಮದ್ ಜುಬೇರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಯಶವಂತ ಮದೀನಕರ್, ಇತರರು ಇದ್ದರು.

    ಜಿಲ್ಲೆಯಲ್ಲಿ ನಾಲ್ಕು ಕರೊನಾ ಪಾಸಿಟಿವ್ ದೃಢ: ಜಿಲ್ಲೆಯಲ್ಲಿ ಸೋಮವಾರ 4 ಕೋವಿಡ್ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ ಎಂದು ಜಿಲ್ಲಾಧಿಕಾರಿ ದೀಪಾ ಚೋಳನ್ ತಿಳಿಸಿದ್ದಾರೆ. ಜೂ. 14ರಂದು ನವಲಗುಂದ ತಾಲೂಕು ಮೊರಬ ಗ್ರಾಮದಲ್ಲಿ ಸೋಂಕು ದೃಢಪಟ್ಟು ಅದೇ ದಿನ ಮೃತಪಟ್ಟ ವ್ಯಕ್ತಿಯ ಸಂಪರ್ಕ ಹೊಂದಿದ್ದ ಅದೇ ಗ್ರಾಮದ 72 ವರ್ಷದ ಮಹಿಳೆ, 43 ಹಾಗೂ 30 ವರ್ಷದ ಪುರುಷರಿಗೆ ಸೋಂಕು ತಗುಲಿದೆ. ಇದಲ್ಲದೆ ಕೆಮ್ಮು, ನೆಗಡಿ, ತೀವ್ರ ಜ್ವರದಿಂದ ಬಳಲುತ್ತಿದ್ದ ಧಾರವಾಡ ವಿಜಯನಗರದ 35 ವರ್ಷದ ಮಹಿಳೆಗೆ ಸೋಂಕು ದೃಢಪಟ್ಟಿದೆ ಎಂದು ತಿಳಿಸಿದ್ದಾರೆ. ಸೋಂಕು ತಗುಲಿ ಆಸ್ಪತ್ರೆಗೆ ದಾಖಲಾಗಿದ್ದ ಇಬ್ಬರು ಗುಣವಾಗಿ ಬಿಡುಗಡೆ ಹೊಂದಿದ್ದಾರೆ. 27 ವರ್ಷದ ಮಹಿಳೆ ಹಾಗೂ 4 ವರ್ಷದ ಬಾಲಕಿ ಗುಣವಾಗಿದ್ದು, ಈವರೆಗೆ ಒಟ್ಟು 76 ಜನರು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ ಎಂದು ತಿಳಿಸಿದ್ದಾರೆ.

    ಸೋಂಕು ಶಂಕಿತರ ಸಂಖ್ಯೆ ಇಳಿಮುಖ: ಧಾರವಾಡ ಜಿಲ್ಲೆಯಲ್ಲಿ ಭಾನುವಾರ ಸಂಜೆಯಿಂದ 24 ತಾಸಿನಲ್ಲಿ 30 ಶಂಕಿತರು ಪತ್ತೆಯಾಗಿದ್ದು, ಅವರ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ಶಂಕಿತರ ಜತೆಗೆ ನಿಗಾವಹಿಸಿದವರ ಸಂಖ್ಯೆಯಲ್ಲೂ ಏರಿಕೆಯಾಗಿದೆ. ಭಾನುವಾರ ಇದ್ದ 23577 ನಿಗಾವಹಿಸಿದವರ ಸಂಖ್ಯೆ ಸೋಮವಾರ 23636ಕ್ಕೆ ಏರಿಕೆಯಾಗಿದೆ. ಈವರೆಗೆ ಜಿಲ್ಲೆಯಲ್ಲಿ 22439 ಶಂಕಿತ ವ್ಯಕ್ತಿಗಳ ಗಂಟಲ ದ್ರವ ಮಾದರಿಯನ್ನು ಪ್ರಯೋಗಾಲಯಕ್ಕೆ ಕಳುಹಿಸಿದ್ದು, 22,245 ಜನರ ವರದಿ ನೆಗೆಟಿವ್ ಬಂದಿವೆ. 202 ಪ್ರಕರಣಗಳು ಪಾಸಿಟಿವ್ ಬಂದಿದ್ದು, 123 ಜನರಿಗೆ ಕಿಮ್್ಸ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 76 ಜನರು ಚೇತರಿಕೆಯಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ, ಮೂವರು ಮೃತಪಟ್ಟಿದ್ದಾರೆ. ಇನ್ನೂ 68 ವರದಿಗಳು ಬರಬೇಕಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts