More

    ಕಚೇರಿಗೆ ಬೀಗ ಜಡಿದು ಪ್ರತಿಭಟನೆ

    ಶಿರಹಟ್ಟಿ: ಹಳದಿರೋಗ ಬಾಧೆಯಿಂದ ಹೆಸರು ಬೆಳೆ ರಕ್ಷಿಸಲು ಅಗತ್ಯವಿರುವ ಮೆಥಾನಿಲ್ ಕೀಟನಾಶಕವನ್ನು ವಿತರಿಸುತ್ತಿಲ್ಲ ಎಂದು ಆರೋಪಿಸಿ ರೈತರು ಕೃಷಿ ಇಲಾಖೆ ಕಚೇರಿಗೆ ಗುರುವಾರ ಬೀಗ ಜಡಿದು ಪ್ರತಿಭಟನೆ ನಡೆಸಿದರು.

    ರೈತ ಸೋಮನಗೌಡ ಮರಿಗೌಡ್ರ ಮಾತನಾಡಿ, ಮುಂಗಾರು ಹಂಗಾಮಿನ ಹೆಸರು ಬೆಳೆಗೆ ಹಳದಿರೋಗ ತಗುಲಿದೆ. ರೋಗ ನಿಯಂತ್ರಣಕ್ಕೆ ಮೆಥಾನಿಲ್ ಕೀಟನಾಶಕ ಪಡೆಯಲು ರೈತ ಸಂಪರ್ಕ ಕೇಂದ್ರಕ್ಕೆ ಬಂದರೆ, ಕೀಟನಾಶಕ ಪೂರೈಕೆಯಾಗಿಲ್ಲ. ಈ ಬಗ್ಗೆ ಇಲಾಖೆ ಮೇಲಧಿಕಾರಿಗೆ ತಿಳಿಸಿದ್ದೇವೆ ಎಂದು ಸಿಬ್ಬಂದಿ ಹೇಳುತ್ತಿದ್ದಾರೆ. ಕಳೆದೊಂದು ತಿಂಗಳಿಂದ ಹಳದಿರೋಗ ಬಾಧೆಗೆ ಹೆಸರು ಬೆಳೆ ತುತ್ತಾಗಿರುವ ಸಂಗತಿ ಅಧಿಕಾರಿಗೆ ಗೊತ್ತಿದ್ದರೂ ಈವರೆಗೂ ಕೀಟನಾಶಕ ದಾಸ್ತಾನು ಮಾಡದಿರುವುದು ಉದಾಸೀನ ಧೋರಣೆಯೇ ಕಾರಣ. ಅಲ್ಲದೆ, ಮೆಕ್ಕೆಜೋಳಕ್ಕೆ ಸದ್ಯ ಯೂರಿಯಾ ಗೊಬ್ಬರದ ಅಗತ್ಯವಿದೆ. ಅದೂ ಕೂಡ ಎಲ್ಲಿಯೂ ಲಭ್ಯವಾಗುತ್ತಿಲ್ಲ. ಹೀಗಾದರೆ ಅನ್ನದಾತರ ಕಷ್ಟ ಕೇಳೋರು ಯಾರು ? ಎಂದು ಪ್ರಶ್ನಿಸಿದರು.

    ಕೀಟನಾಶಕ ಬಂದ ಮೇಲೆಯೇ ಬೀಗ ತೆಗೆಯುತ್ತೇವೆ ಎಂದು ರೈತರಾದ ಯಲ್ಲಪ್ಪ ಹಾಲಪ್ಪನವರ, ಮಲ್ಲಪ್ಪ ಮುಶ್ಯಪ್ಪನವರ, ದೇವಪ್ಪ ಗೂಳಪ್ಪನವರ, ಪರಶು ತೋಪಿನ, ವೆಂಕಟೇಶ ಲಮಾಣಿ ಇತರು ಪಟ್ಟು ಹಿಡಿದರು.

    ಪ್ರತಿಕ್ರಿಯಿಸಿದ ಕೃಷಿ ಸಹಾಯಕ ನಿರ್ದೇಶಕ ಚಂದ್ರಶೇಖರ ನರಸಮ್ಮನವರ, ಅನುದಾನ ಬಿಡುಗಡೆಯಾಗದ ಕಾರಣ ಪೆನ್​ವಲ್​ರೇಟ್ ಪುಡಿ ಬಂದಿಲ್ಲ. ಈ ಬಗ್ಗೆ ಜಿಲ್ಲಾ ಜಂಟಿ ನಿರ್ದೇಶಕರ ಗಮನಕ್ಕೆ ತರಲಾಗಿದೆ. ಗುರುವಾರ ಸಂಜೆ ವೇಳೆಗೆ ಕಚೇರಿಗೆ ಪೂರೈಕೆಯಾಗುತ್ತದೆ. ಬಂದ ತಕ್ಷಣ ವಿತರಣೆಗೆ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದರು. ಅಲ್ಲದೆ, ಇಲಾಖೆ ಕಾರ್ಯಕ್ಕೆ ರೈತರು ಸಹಕರಿಸಬೇಕು ಎಂದು ಮನವಿ ಮಾಡಿದರು. ಅಧಿಕಾರಿಯ ಭರವಸೆ ಮೇರೆಗೆ ರೈತರು ಪ್ರತಿಭಟನೆ ಹಿಂಪಡೆದರು.</p

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts