More

    ಕಂದವಾರ ಕೆರೆ ಸುತ್ತಲಿನ ನಿವಾಸಿಗಳಿಗೆ ನೊಣಗಳ ಕಾಟ

    ಚಿಕ್ಕಬಳ್ಳಾಪುರ: ಎಚ್.ಎನ್.ವ್ಯಾಲಿ ಯೋಜನೆಯ ನೀರಿನಿಂದ ನಗರದ ಕಂದವಾರ ಕೆರೆ ಮೈದುಂಬಿದೆ, ಈ ಸಂತಸದ ನಡುವೆ ಸ್ಥಳೀಯರು ನಿತ್ಯ ನೊಣಗಳು, ಸೊಳ್ಳೆಗಳ ಕಾಟಕ್ಕೆ ಹೈರಾಣಾಗಿದ್ದಾರೆ.

    ಕೆರೆಯ ಸುತ್ತಲಿನ ಮನೆಯ ಗೋಡೆ, ಕಾಂಪೌಂಡ್, ಗಿಡಗಳು ಸೇರಿ ಎಲ್ಲೆಂದರಲ್ಲಿ ನೊಣಗಳು, ಸೊಳ್ಳೆ ಕೂರುತ್ತಿವೆ. ಜನರ ಮುಖಕ್ಕೂ ರಾಚುತ್ತಿದೆ. ಇವುಗಳ ಸಂಖ್ಯೆ ದಿನೇದಿನೆ ಹೆಚ್ಚಾಗುತ್ತಿರುವುದು ಸ್ಥಳೀಯರ ತಲೆ ನೋವಿಗೆ ಕಾರಣವಾಗಿದೆ. ನೊಣ, ಸೊಳ್ಳೆ ಓಡಿಸುವುದೇ ನಿವಾಸಿಗಳಿಗೆ ದಿನದ ಕೆಲಸವಾಗುತ್ತಿದೆ.

    ಇಲ್ಲಿನ ಕಂದವಾರ ಕೆರೆಗೆ ಬೆಂಗಳೂರಿನ ಹೆಬ್ಬಾಳ ಮತ್ತು ನಾಗವಾರ ವ್ಯಾಲಿಯ ತ್ಯಾಜ್ಯ ಸಂಸ್ಕರಿಸಿದ ನೀರನ್ನು ಹರಿಸಲಾಗಿದೆ. ಈ ಹಿಂದೆ ಬೀಡುಬಿಟ್ಟು ಖಾಲಿ ಮೈದಾನದಂತಾಗಿದ್ದ ಕೆರೆ ಈಗ ಭರ್ತಿಯಾಗಿದ್ದು ಸಮೃದ್ಧವಾಗಿ ಗಮನ ಸೆಳೆಯುತ್ತಿದೆ. ಆದರೆ, ಇಲ್ಲಿನ ನೀರಿನ ಹಸಿರು ಬಣ್ಣವು, ಕ್ರಿಮಿ ಕೀಟಗಳು ಕಾಟ ಹಾವಳಿ ಹೆಚ್ಚಾಗಿರುವುದು ಹಲವು ಅನುಮಾನಗಳನ್ನು ಸೃಷ್ಟಿಸಿದೆ.

    ಹಿಂದೆ ಮಳೆಗಾಲದಲ್ಲಿ ಸುತ್ತಲಿನ ರಾಜಕಾಲುವೆಯಿಂದ ನೈಸರ್ಗಿಕವಾಗಿ ಹರಿದು ಬಂದು ಹೆಚ್ಚಿನ ಪ್ರಮಾಣದಲ್ಲಿ ನೀರು ಸೇರಿದ್ದರೂ ಯಾವುದೇ ರೀತಿಯ ಸಮಸ್ಯೆಗಳು ಇರುತ್ತಿರಲಿಲ್ಲ. ಆದರೆ, ಈಗ ವ್ಯಾಪಕವಾಗಿ ನೊಣಗಳು ಆವರಿಸಿಕೊಳ್ಳುತ್ತಿದ್ದು ಇವುಗಳನ್ನು ಓಡಿಸಲು ದೊಡ್ಡ ಹರಸಾಹಸ ಮಾಡುವಂತಾಗಿದೆ. ಊಟಕ್ಕೂ ಅಡ್ಡಿಯಾಗಿದ್ದರೆ, ನಿದ್ರಾಭಂಗಕ್ಕೂ ಕಾರಣವಾಗಿದೆ, ಇನ್ನು ಸ್ಥಳೀಯರು ಈ ಹಾವಳಿಯಿಂದ ತಪ್ಪಿಸಿಕೊಳ್ಳಲು ಮನೆ ಬಾಗಿಲನ್ನು ಸದಾ ಮುಚ್ಚಿಕೊಂಡಿರುತ್ತಾರೆ.

    ಇತ್ತೀಚೆಗೆ ನೊಣಗಳ ಕಾಟಕ್ಕೆ ಇರಲು ಆಗುತ್ತಿಲ್ಲ. ಎಲ್ಲೆಂದರಲ್ಲಿ ಕೂರುತ್ತಿವೆ. ಮೊದಲು ಯಾವುದೇ ಸಮಸ್ಯೆ ಇರಲಿಲ್ಲ. ಇತ್ತೀಚೆಗೆ ಹೆಚ್ಚಾಗಿದೆ.
    ಎಂ.ಆರ್.ವೀರೇಂದ್ರ, ಸ್ಥಳೀಯ ನಿವಾಸಿ

    ತ್ಯಾಜ್ಯ ನೀರು ಕಾರಣ? : ಇಲ್ಲಿ ನೊಣಗಳ ಸಮಸ್ಯೆಗೆ ತ್ಯಾಜ್ಯ ಸಂಸ್ಕರಿಸಿದ ನೀರನ್ನು ಕೆರೆಗೆ ಹರಿಸಿರುವುದೇ ಪ್ರಮುಖ ಕಾರಣ ಎನ್ನುವುದು ಸ್ಥಳೀಯರ ಆರೋಪ. ಬೆಂಗಳೂರಿನ ಹೆಬ್ಬಾಳ ಮತ್ತು ನಾಗವಾರ ವ್ಯಾಲಿ ಕೆರೆಗೆ ಕೈಗಾರಿಕೆ, ವೈದ್ಯಕೀಯ ತ್ಯಾಜ್ಯ ಸೇರ್ಪಡೆಯಿಂದ ಮಾರಕ ವೈರಾಣುಗಳು ನೀರಿನಲ್ಲಿ ಸೇರಿವೆ. ಆದರೂ ಸಂಸ್ಕರಿಸಿ ನೀರು ಹರಿಸಲಾಗುತ್ತಿದೆ. ಬಣ್ಣ ಮತ್ತು ವಾಸನೆಗೆ ನೊಣಗಳು ಹೆಚ್ಚಾಗಿ ಇಲ್ಲಿ ಸೇರುತ್ತಿವೆ ಎನ್ನುವುದು ಸ್ಥಳೀಯರ ಆರೋಪ. ಆದರೆ, ಇದನ್ನು ನೀರಾವರಿ ಇಲಾಖೆಯ ಅಧಿಕಾರಿಗಳು ಅಲ್ಲಗಳೆಯುತ್ತಿದ್ದಾರೆ. ಎಚ್.ಎನ್.ವ್ಯಾಲಿ ಯೋಜನೆಯಿಂದ ಈಗಾಗಲೇ 14 ಕೆರೆಗಳಿಗೆ ನೀರು ಹರಿಸಿದ್ದು ಎಲ್ಲೂ ಸಮಸ್ಯೆ ಕಂಡು ಬಂದಿಲ್ಲ. ಒಂದು ವೇಳೆ ಈ ಸಮಸ್ಯೆಗೆ ವ್ಯಾಲಿ ನೀರು ಕಾರಣವಾಗಿದ್ದರೆ ಬೇರೆ ಬೇರೆ ಕಡೆಗಳಲ್ಲೂ ದೂರುಗಳು ಬರಬೇಕಾಗಿತ್ತು ಎನ್ನುತ್ತಾರೆ.

    ಎಚ್.ಎನ್.ವ್ಯಾಲಿ ನೀರಿನಿಂದ ಯಾವುದೇ ಸಮಸ್ಯೆ ಇಲ್ಲ. ಹಿಂದೆ ನೊಣಗಳ ಕಾಟದ ಬಗ್ಗೆ ದೂರು ಕೇಳಿ ಬಂದಾಗ ಪರಿಹಾರ ಕ್ರಮ ಕೈಗೊಳ್ಳಲಾಗಿದೆ. ಪುನಃ ಸ್ಥಳಕ್ಕೆ ಭೇಟಿ ಪರಿಶೀಲಿಸಲಾಗುವುದು.
    ನರೇಂದ್ರ ಬಾಬು, ಕಾರ್ಯಪಾಲಕ ಅಭಿಯಂತರ, ಸಣ್ಣ ನೀರಾವರಿ ಇಲಾಖೆ

    ಫಾಗಿಂಗ್ ವ್ಯರ್ಥ : ಇತ್ತೀಚೆಗೆ ನೊಣಗಳ ಕಾಟ ಹಿನ್ನೆಲೆಯಲ್ಲಿ ಕಂದವಾರ ಬಡಾವಣೆ, ಕಂದವಾರ ಬಾಗಿಲಿನಲ್ಲಿ ಫಾಗಿಂಗ್ ಕೈಗೊಳ್ಳಲಾಗಿತ್ತು. ಕೀಟನಾಶಕಗಳನ್ನು ಸಿಂಪಡಿಸಲಾಗಿತ್ತು. ಆದರೂ ಪ್ರಯೋಜನವಾಗಿಲ್ಲ. ಮತ್ತೆ ಮತ್ತೆ ಕಾಣಿಸಿಕೊಳ್ಳುತ್ತಿವೆ. ನೊಣ ಕಚ್ಚಿದ ಸಂದರ್ಭದಲ್ಲಿ ಕೆಲವರಿಗೆ ಊತ ಕಂಡು ಬಂದಿದ್ದು ಅವುಗಳ ಸಹವಾಸಕ್ಕೆ ಹೋಗುತ್ತಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts