More

    ಓದಿನ ಮನೆ ಎಂಬ ವಿನೂತನ ಪ್ರಯೋಗ

    ಧಾರವಾಡ: ಇನ್ನು ಕೆಲ ದಿನಗಳಲ್ಲಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಪ್ರಾರಂಭವಾಗಲಿದ್ದು, ವಿದ್ಯಾರ್ಥಿಗಳಲ್ಲಿನ ಪರೀಕ್ಷಾ ಭಯ ಹೋಗಲಾಡಿಸಿ ಯಾವ ರೀತಿಯಲ್ಲಿ ಸಿದ್ಧತೆ ಮಾಡಿಕೊಳ್ಳಬೇಕು ಎಂಬುದನ್ನು ತಿಳಿಸುವ ಉದ್ದೇಶದಿಂದ ನಗರದಲ್ಲಿ ‘ಓದಿನ ಮನೆ’ ಎಂಬ ವಿಭಿನ್ನ ರೀತಿಯ ಕಲಿಕಾ ಕಾರ್ಯಾಗಾರ ಆಯೋಜಿಸಲಾಗಿದೆ.

    ಇಲ್ಲಿನ ಮಾಳಮಡ್ಡಿ ವನವಾಸಿ ಶ್ರೀರಾಮ ಮಂದಿರದಲ್ಲಿ ಮಾ. 4ರಂದು ಪ್ರಾರಂಭವಾಗಿರುವ ಈ ಕಾರ್ಯಾಗಾರ ಮಾ. 8ರವರೆಗೆ ನಿತ್ಯ ಸಂಜೆ 6 ಗಂಟೆಯಿಂದ 8.30ರವರೆಗೆ ನಡೆಯಲಿದೆ. 5 ದಿನಗಳಲ್ಲಿ ಎಲ್ಲ ವಿಷಯಗಳ ಕುರಿತು ಮಾರ್ಗದರ್ಶನ ನೀಡುವ ಜತೆಗೆ ವಿದ್ಯಾರ್ಥಿಗಳಲ್ಲಿ ವಿಶ್ವಾಸ ತುಂಬುವ ಕೆಲಸ ಮಾಡುವ ವಿನೂತನ ಪ್ರಯೋಗ ಇದಾಗಿದೆ.

    ನಗರದ ವಿನಾಯಕ ಜೋಶಿ ಅವರ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಈ ಓದಿನ ಮನೆ ಯೋಜನೆಗೆ ಅನೇಕ ಶಿಕ್ಷಣ ಪ್ರೇಮಿಗಳು ಕೈ ಜೋಡಿಸಿದ್ದಾರೆ. ನುರಿತ ಶಿಕ್ಷಕರ ಮಾರ್ಗದರ್ಶನದಲ್ಲಿ ಉತ್ತಮ ಅಂಕಗಳಿಸುವ ಹಾಗೂ ಕಲಿಕೆಯಲ್ಲಿ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತವಾಗಿ ಸೂಕ್ತ ಮಾರ್ಗದರ್ಶನ ನೀಡಲಾಗುತ್ತಿದೆ.

    ಕನ್ನಡ ಹಾಗೂ ಆಂಗ್ಲ ಮಾಧ್ಯದ ಎಲ್ಲ ವಿಷಯಗಳ ಕುರಿತು ಪುನರಾವರ್ತನೆ ಜತೆಗೆ ಪರೀಕ್ಷೆಗೆ ತೆರಳಿದ ಸಂದರ್ಭದಲ್ಲಿ ಭಯವಿಲ್ಲದೆ ಪರೀಕ್ಷೆ ಎದುರಿಸುವ ಬಗೆ, ಪರೀಕ್ಷೆ ಸಂದರ್ಭದಲ್ಲಿ ಓದುವ ಬಗೆ ಕುರಿತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಲು ಈ ವಿನೂತನ ಯೋಜನೆ ಪ್ರಾರಂಭಿಸಿದ್ದಾರೆ. ಈಗಾಲೇ 40 ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, ಆಸಕ್ತ ವಿದ್ಯಾರ್ಥಿಗಳೂ ಭಾಗವಹಿಸಬಹುದು.

    ಇಂತಹ ಕಾರ್ಯಾಗಾರಗಳಿಂದ ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಹೆಚ್ಚುವುದಲ್ಲದೆ, ಎಸ್ಸೆಸ್ಸೆಲ್ಸಿ ಫಲಿತಾಂಶದಲ್ಲಿ ಸಹ ಸಾಕಷ್ಟು ಸುಧಾರಣೆ ಕಾಣಲಿದೆ. ಈ ರೀತಿಯ ಕಾರ್ಯಾಗಾರಗಳನ್ನು ಶಿಕ್ಷಣ ಪ್ರೇಮಿಗಳು ಆಯಾ ಬಡಾವಣೆಗಳಲ್ಲಿ ಪ್ರಾರಂಭ ಮಾಡಿದರೆ ಸುತ್ತಲಿನ ಪ್ರದೇಶದ ವಿದ್ಯಾರ್ಥಿಗಳಿಗೆ ಸಾಕಷ್ಟು ಅನುಕೂಲವಾಗಲಿದೆ. ಈ ಪ್ರಯೋಗದಿಂದ ಫಲಿತಾಂಶದಲ್ಲಿ ತಕ್ಕ ಮಟ್ಟಿನಲ್ಲಿ ಸುಧಾರಣೆ ಕಾಣಬಹುದು ಎಂಬ ಭರವಸೆ ಇದೆ ಎನ್ನುತ್ತಾರೆ ಕಾರ್ಯಾಗಾರ ಆಯೋಜಕ ವಿನಾಯಕ ಜೋಶಿ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts