More

    ಒಬಿಸಿ ಪಟ್ಟಿಗೆ ವೀರಶೈವ ಲಿಂಗಾಯತರನ್ನು ಸೇರಿಸಿ

    ಚಿಕ್ಕಮಗಳೂರು: ವೀರಶೈವ ಲಿಂಗಾಯತ ಸಮುದಾಯದ ಎಲ್ಲ ಪಂಗಡಗಳನ್ನು ಒಳಗೊಂಡಂತೆ ಕೇಂದ್ರದ ಹಿಂದುಳಿದ ವರ್ಗಗಳ (ಒಬಿಸಿ) ಪಟ್ಟಿಯಲ್ಲಿ ಪ್ರವರ್ಗ 3ಬಿಯನ್ನು ಸೇರಿಸುವಂತೆ ಒತ್ತಾಯಿಸಿ ಆ.1ರಂದು ನಗರದಲ್ಲಿ ಬೃಹತ್ ಮೆರವಣಿಗೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಎಚ್.ಎಂ.ಲೋಕೇಶ್ ಹೇಳಿದರು.

    ನಗರದ ಜಗದ್ಗುರು ಶ್ರೀ ರೇಣುಕಾಚಾರ್ಯ ಸಮುದಾಯ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ವರ್ಗ, ವರ್ಣ, ಜಾತಿರಹಿತ ಸಮ ಸಮಾಜದ ಪರಿಕಲ್ಪನೆಯನ್ನು ಸಮಾಜಕ್ಕೆ ನೀಡಿದ ಬಸವಾದಿ ಶರಣರ ಮಾರ್ಗದಲ್ಲಿಯೇ ವೀರಶೈವ ಲಿಂಗಾಯತರು ಸಾಗಿದ್ದಾರೆ. ಎಲ್ಲರನ್ನೂ ಒಪ್ಪಿಕೊಂಡು ಜಾತಿ, ಧರ್ಮ ಭೇದವಿಲ್ಲದೆ ಶಿಕ್ಷಣ, ವಸತಿ ಹಾಗೂ ದಾಸೋಹ ನೀಡುವ ಮೂಲಕ ರಾಷ್ಟ್ರದ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸಿದವರು. ಇಂದು ಸಾಮಾಜಿಕ ನ್ಯಾಯಕ್ಕಾಗಿ ನಾವೇ ಹೋರಾಟ ಮಾಡುವ ಸ್ಥಿತಿ ಎದುರಾಗಿರುವುದು ವಿಪರ್ಯಾಸ ಎಂದರು.

    ಸಂವಿಧಾನದಲ್ಲಿ ಹಿಂದುಳಿದ ವರ್ಗಗಳಿಗೆ ಅವಕಾಶ ಕಲ್ಪಿಸಲಾಗಿದೆ. ಅದಕ್ಕನುಗುಣವಾಗಿ 1990ರ ದಶಕದಲ್ಲಿ ಕೇಂದ್ರ ಸರ್ಕಾರದ ಶಿಕ್ಷಣ ಸಂಸ್ಥೆಗಳು, ಉದ್ಯೋಗಗಳಲ್ಲಿ ಇತರೆ ಹಿಂದುಳಿದ ವರ್ಗಗಳಿಗೆ ಒಬಿಸಿ ಅವಕಾಶ ಕಲ್ಪಿಸಿದೆ. ಸಾಮಾನ್ಯವಾಗಿ ರಾಜ್ಯ ಹಿಂದುಳಿದ ಪಟ್ಟಿಯಲ್ಲಿರುವ ಜಾತಿ, ಪಂಗಡಗಳನ್ನು ಕೇಂದ್ರದ ಹಿಂದುಳಿದ ವರ್ಗಗಳ ಒಬಿಸಿ ಪಟ್ಟಿಗೆ ಸೇರಿಸಲಾಗುತ್ತದೆ. ರಾಜ್ಯದಲ್ಲಿ 60 ವರ್ಷಗಳಿಂದ ವೀರಶೈವ ಲಿಂಗಾಯತ ಸಮುದಾಯ ರಾಜ್ಯದ ಇತರೆ ಹಿಂದುಳಿದ ವರ್ಗದ ಪಟ್ಟಿಯಲ್ಲಿದ್ದರೂ ಈ ವರ್ಗವನ್ನು ಕೇಂದ್ರದ ಹಿಂದುಳಿದ ವರ್ಗಗಳ ಒಬಿಸಿ ಪಟ್ಟಿಗೆ ಸೇರಿಸದಿರುವುದು ದುರದೃಷ್ಟಕರ ಎಂದು ಹೇಳಿದರು.

    3ನೇ ಹಿಂದುಳಿದ ವರ್ಗಗಳ ಚಿನ್ನಪ್ಪ ರೆಡ್ಡಿ ಆಯೋಗವು ಈಗಾಗಲೆ ರಾಜ್ಯ ಮತ್ತು ಕೇಂದ್ರದ ಹಿಂದುಳಿದ ವರ್ಗಗಳ ಮೀಸಲಾತಿ ಪಟ್ಟಿಯಲ್ಲಿ ಸೇರಿರುವ ತಿಗಳ, ಈಡಿಗ, ಒಕ್ಕಲಿಗ, ದೇವಾಂಗ, ಬಲಿಜ ಸಮುದಾಯಗಳಿಗಿಂತ ವೀರಶೈವ ಲಿಂಗಾಯತ ಸಮುದಾಯ ಹಿಂದುಳಿದಿದ್ದರೂ ಕೇಂದ್ರದ ಹಿಂದುಳಿದ ವರ್ಗಗಳ ಒಬಿಸಿ ಪಟ್ಟಿಯಿಂದ ಹೊರಗಿಟ್ಟಿರುವುದಕ್ಕೆ ಯಾವ ಕಾರಣಗಳೂ ಇಲ್ಲ. ಇದರಿಂದ ನಮ್ಮ ಸಮಾಜದ ಪ್ರತಿಭಾವಂತರು ಅವಕಾಶ ವಂಚಿತರಾಗಿದ್ದಾರೆ ಎಂದು ವೀರಶೈವ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ವನಮಾಲಾ ಹೇಳಿದರು. ಐಎಎಸ್, ಐಪಿಎಸ್, ಐಎಫ್​ಎಸ್, ಐಆರ್​ಎಸ್​ಗಳಲ್ಲಿ, ರಾಷ್ಟ್ರೀಕೃತ ಬ್ಯಾಂಕ್ ಮತ್ತಿತರ ಉದ್ಯೋಗಾವಕಾಶಗಳಲ್ಲಿ ವೀರಶೈವ ಲಿಂಗಾಯತ ಸಮುದಾಯದವರು ಬೆರಳೆಣಿಕೆಯಷ್ಟಿದ್ದಾರೆ. ಶೈಕ್ಷಣಿಕ ಸಂಸ್ಥೆಗಳಾದ ಕೇಂದ್ರೀಯ ವಿದ್ಯಾಲಯ, ನವೋದಯ ಶಾಲೆಗಳಲ್ಲೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅವಕಾಶ ಸಿಗುವುದು ವಿರಳವಾಗಿದೆ. ಈ ಸಂಬಂಧ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಆ.1 ರಂದು ನಗರದ ತಾಲೂಕು ಕಚೇರಿಯಿಂದ ಬೆಳಗ್ಗೆ 11ಕ್ಕೆ ಮೆರವಣಿಗೆ ನಡೆಸಲಾಗುವುದು ಎಂದು ತಿಳಿಸಿದರು.

    ವೀರಶೈವ ಮಹಾಸಭಾ ತಾಲೂಕು ಅಧ್ಯಕ್ಷ ಸಿ.ಎಸ್.ಏಕಾಂತರಾಮು, ತರೀಕೆರೆ ತಾಲೂಕು ಅಧ್ಯಕ್ಷ ಗಿರೀಶ್, ಎಚ್.ಎಂ.ರೇಣುಕಾರಾಧ್ಯ, ನಿಶಾಂತ್, ಚೇತನ್, ಎಎಸ್​ಎಸ್ ಆರಾಧ್ಯ, ಮಧು, ವೀರೇಶ್, ಪ್ರಸಾದ್, ಲೋಕೇಶ್, ಪದಾಧಿಕಾರಿಗಳು ಸಭೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts