More

    ಒಪ್ಪಂದ ಉಲ್ಲಂಘಿಸಿದ್ದೇ ಇಂದಿನ ಸ್ಥಿತಿಗೆ ಕಾರಣ

    ಸಾಗರ: ಮಲ್ಲಿಕಾರ್ಜುನ ಹಕ್ರೆ ಅವರನ್ನು ತಾಪಂ ಅಧ್ಯಕ್ಷರನ್ನಾಗಿ ಆಯ್ಕೆ ಮಾಡುವ ಸಂದರ್ಭದಲ್ಲಿ ಕೆಲವು ಒಪ್ಪಂದಗಳಾಗಿದ್ದು, ಈ ಒಪ್ಪಂದಗಳನ್ನು ಪಾಲನೆ ಮಾಡದ ಕಾರಣ ಸದಸ್ಯರು ಅವರ ವಿರುದ್ಧ ತಿರುಗಿ ಬಿದ್ದು, ಅವಿಶ್ವಾಸ ಮಂಡನೆ ಪರಿಸ್ಥಿತಿ ನಿರ್ವಣವಾಯಿತು. ಈ ಎಲ್ಲ ಬೆಳವಣಿಗೆಗಳನ್ನು ವರಿಷ್ಠರ ಗಮನಕ್ಕೆ ತರಲಾಗಿದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಆರ್. ಜಯಂತ್ ಹೇಳಿದರು.

    ಹಕ್ರೆ ಅವರ ಇಂತಹ ನಡವಳಿಕೆಯನ್ನು ಕಾಂಗ್ರೆಸ್ ಪಕ್ಷ ಒಪ್ಪುವುದಿಲ್ಲ. ಅವರು ತಮ್ಮ ನಡವಳಿಕೆಯನ್ನು ಪರಾಮರ್ಶೆ ಮಾಡಿಕೊಳ್ಳಬೇಕು ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

    ತಾಪಂ ಅಧ್ಯಕ್ಷರ ಚುನಾವಣೆ ಸಮಯದಲ್ಲಿ ಮಲ್ಲಿಕಾರ್ಜುನ ಹಕ್ರೆ ಅವರನ್ನು ಅಭ್ಯರ್ಥಿ ಮಾಡುವ ಸಂದರ್ಭದಲ್ಲಿ ಹಿರಿಯರ ಸಮ್ಮುಖದಲ್ಲಿ ಕೆಲವು ಷರತ್ತುಗಳನ್ನು ವಿಧಿಸಲಾಗಿತ್ತು. 3 ವರ್ಷ ಅವಧಿ ಪೂರ್ಣಗೊಳಿಸಿದ ನಂತರ ರಾಜಿನಾಮೆ ನೀಡಿ ಬೇರೆಯವರಿಗೆ ಅವಕಾಶ ಕಲ್ಪಿಸಬೇಕು ಎನ್ನುವುದು ಮೂರು ಷರತ್ತುಗಳಲ್ಲಿ ಒಂದಾಗಿತ್ತು. ಆದರೆ ಅಧಿಕಾರ ದಾಹಕ್ಕೆ ಬಿದ್ದ ಹಕ್ರೆ, ರಾಜಿನಾಮೆ ನೀಡಿ ಬೇರೆಯವರಿಗೆ ಅವಕಾಶ ಕಲ್ಪಿಸಲಿಲ್ಲ ಎಂದು ಆರೋಪಿಸಿದರು.

    ಮಲ್ಲಿಕಾರ್ಜುನ ಹಕ್ರೆ ತಮ್ಮ ಜಾತಿಯ ಕೆಲವೇ ಜನರನ್ನು ಸೇರಿಸಿಕೊಂಡು ಅಧಿಕಾರಕ್ಕೋಸ್ಕರ ಮಠಗಳನ್ನೂ ದುರ್ಬಳಕೆ ಮಾಡಿಕೊಂಡಿದ್ದಾರೆ. ಅವಿಶ್ವಾಸ ಗೊತ್ತುವಳಿ ಮಂಡನೆ ಸಭೆಯಲ್ಲಿ ಅಧ್ಯಕ್ಷತೆ ವಹಿಸಿದ್ದ ಉಪಾಧ್ಯಕ್ಷರ ಮೂಲಕ ಮೂವರು ಸದಸ್ಯರನ್ನು ಅಮಾನತು ಮಾಡಿಸಿದ ಕ್ರಮ ಪ್ರಜಾಪ್ರಭುತ್ವ ವ್ಯವಸ್ಥೆಯ ದುರಂತ. ಅವರ ಈ ಕುತಂತ್ರ ಅವರ ಕೆಲವು ಹಿಂಬಾಲಕರಿಗೆ ರಂಜನೆ ನೀಡಬಹುದಷ್ಟೆ ಎಂದು ಕುಟುಕಿದರು.

    ಒಪ್ಪಂದದಂತೆ ರಾಜೀನಾಮೆ ಕೊಡಿ ಎಂದು ಬೆಂಬಲಿತ ಸದಸ್ಯರು ಹಕ್ರೆ ಅವರನ್ನು ಎರಡು ವರ್ಷದಿಂದ ಒತ್ತಾಯಿಸುತ್ತಿದ್ದಾರೆ. ಕಾಗೋಡು ತಿಮ್ಮಪ್ಪ ಅವರೂ ಸಹ ರಾಜಿನಾಮೆ ನೀಡಲು ಸೂಚಿಸಿದ್ದಾರೆ. ಆದರೆ ಅಧಿಕಾರ ಬಿಡಲು ಸಿದ್ದರಾಗದ ಹಕ್ರೆ ಅವರು, ಸದಸ್ಯ ಬಲ ಇಲ್ಲದೆ ಇದ್ದರೂ ಅಧಿಕಾರ ಉಳಿಸಿಕೊಳ್ಳುವ ಪ್ರಯತ್ನಕ್ಕೆ ಕೈ ಹಾಕಿದರು.

    ಮೊಂಡುತನದಿಂದ ಮುಖಭಂಗ: ಷರತ್ತುಗಳ ಪ್ರಕಾರ ಮೂರು ವರ್ಷ ಅವಧಿ ಮುಗಿಸಿ ರಾಜೀನಾಮೆ ನೀಡುವ ಬದಲಿಗೆ ಹಠ ಸಾಧನೆಗೆ ಬಿದ್ದುದ್ದರಿಂದ ಹಕ್ರೆ ಮುಖಭಂಗ ಅನುಭವಿಸಬೇಕಾಯಿತು ಎಂದು ಜಿಪಂ ಮಾಜಿ ಸದಸ್ಯ ರತ್ನಾಕರ ಹೊನಗೋಡು ಟೀಕಿಸಿದರು.

    ಈ ಹಿಂದೆ ಸದಸ್ಯ ಬಲ ಇಲ್ಲದೆ ಇದ್ದರೂ ನಾಮನಿರ್ದೇಶನ ಸದಸ್ಯರನ್ನು ಇರಿಸಿಕೊಂಡು ಸಭೆ ಮಾಡುತ್ತೇನೆ ಎಂದು ಮೊಂಡುತನ ತೋರಿದ್ದ ಹಕ್ರೆ ಅಲ್ಲೂ ಮುಖಭಂಗ ಅನುಭವಿಸಿದ್ದರು ಎಂದರು.

    ಸಾಗರ ತಾಪಂನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬಹುಮತ ಇಲ್ಲದಿದ್ದರೂ ಮಲ್ಲಿಕಾರ್ಜುನ ಹಕ್ರೆ ಅವರನ್ನು ಕೆಲವು ಷರತ್ತು ವಿಧಿಸಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿತ್ತು. ಮೂವರು ಪಕ್ಷೇತರರು, ಇಬ್ಬರು ಜೆಡಿಎಸ್ ಸದಸ್ಯರು ಕಾಂಗ್ರೆಸ್​ಗೆ ಬೆಂಬಲ ನೀಡಿದ್ದರಿಂದ ಹಕ್ರೆ ಅಧ್ಯಕ್ಷರಾಗಲು ಸಾಧ್ಯವಾಗಿತ್ತು. ಅವರು ಬೆಂಬಲ ನೀಡುವ ಮೊದಲೆ ಪಕ್ಷದಲ್ಲಿ ಆಂತರಿಕ ಒಪ್ಪಂದವಾಗಿ ಮೂರು ವರ್ಷದ ನಂತರ ಇಬ್ಬರು ಪಕ್ಷೇತರ ಶಾಸಕರಿಗೆ ತಲಾ ಒಂದು ವರ್ಷ ಅಧ್ಯಕ್ಷ ಸ್ಥಾನ ನೀಡುವ ಮಾತುಕತೆ ನಡೆದಿತ್ತು ಎಂದು ವಿವರಿಸಿದರು.

    ತಾಲೂಕಿನ ಜನ ಎಲ್ಲವನ್ನೂ ಗಮನಿಸುತ್ತಿರುತ್ತಾರೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಅದಕ್ಕೆ ತಕ್ಕಂತೆ ನಡೆದುಕೊಳ್ಳಬೇಕಾದದ್ದೂ ಕೂಡ ನಮ್ಮ ಜವಾಬ್ದಾರಿಯಾಗಿರುತ್ತದೆ ಎಂದರು.

    ಎಪಿಎಂಸಿ ಸದಸ್ಯ ಭರ್ಮಪ್ಪ ಅಂದಾಸುರ, ಪ್ರಮುಖರಾದ ಎಚ್.ಎನ್.ದಿವಾಕರ್, ಚಂದ್ರಕಾಂತ್ ಆರೋಡಿ ಸುದ್ದಿಗೋಷ್ಠಿಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts