More

    ಒತ್ತಡಕ್ಕೆ ಬಾಗೀತೆ ಸರ್ಕಾರ?

    ಮೃತ್ಯುಂಜಯ ಕಲ್ಮಠ ಗದಗ

    ಕರ್ನಾಟಕ ವನ್ಯಜೀವಿ ಮಂಡಳಿ ಸಭೆಯನ್ನು ಮಾ. 9ರಂದು ಏರ್ಪಡಿಸಲಾಗಿದ್ದು, ಸಭೆಯ ಅಜೆಂಡಾದಲ್ಲಿ ಕಪ್ಪತಗುಡ್ಡ ವನ್ಯಜೀವಿಧಾಮ ವಿಷಯ ಸೇರ್ಪಡೆಗೊಂಡಿರುವ ಮಾಹಿತಿ ಲಭ್ಯವಾಗಿದೆ.

    ಮುಖ್ಯಮಂತ್ರಿ ಯಡಿಯೂರಪ್ಪ, ಅರಣ್ಯ ಸಚಿವ ಆನಂದ ಸಿಂಗ್ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಹೀಗಾಗಿ, ಸಭೆಯಲ್ಲಿ ನಡೆಯುವಂತಹ ಚರ್ಚೆಗಳ ಮೇಲೆ ಜಿಲ್ಲೆಯ ಜನರ ಚಿತ್ತ ನೆಟ್ಟಿದೆ.

    ಉತ್ತರ ಕರ್ನಾಟಕದ ಸಹ್ಯಾದ್ರಿ ಎನಿಸಿರುವ ಕಪ್ಪತಗುಡ್ಡದಲ್ಲಿರುವ ಚಿನ್ನ ಮತ್ತು ಅದಿರು ಕೊಳ್ಳೆ ಹೊಡೆಯಲು ಗಣಿ ಕುಳಗಳು ಶತಾಯ ಗತಾಯ ಪ್ರಯತ್ನಿಸಿರುವುದು ತಿಳಿದಿರುವ ವಿಷಯ. ಹೀಗಾಗಿ, ಕಪ್ಪತಗುಡ್ಡವು ವನ್ಯಜೀವಿಧಾಮ ಆಗುವುದು ಬೇಡ, ಸಂರಕ್ಷಿತರ ಅರಣ್ಯ ಪ್ರದೇಶ ಎಂಬ ಯೋಜನೆಯೂ ಬೇಡ ಎಂದು ವಾದಿಸುತ್ತಿರುವ ಗಣಿ ಕುಳಗಳ ಜತೆಗೆ ಕೆಲ ಪ್ರಭಾವಿಗಳು ಕೈಜೋಡಿಸಿದ್ದು, ಆತಂಕಕಾರಿ ಬೆಳವಣಿಗೆಗಳು ನಡೆಯುತ್ತಿವೆ ಎನ್ನಲಾಗಿದೆ.

    ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಕಪ್ಪತಗುಡ್ಡವನ್ನು ವನ್ಯಜೀವಿ ಧಾಮ ಎಂದು ಘೊಷಿಸಿರುವ ಆದೇಶವನ್ನು ರದ್ದುಗೊಳಿಸಬೇಕೆಂದು ಗಣಿಗಾರಿಕೆ ಮಾಡಲು ಯತ್ನಿಸುತ್ತಿರುವವರು ಸರ್ಕಾರದ ಮಟ್ಟದಲ್ಲಿ ಇನ್ನಿಲ್ಲದ ಒತ್ತಡ ಹೇರಲಾಂಭಿಸಿದ್ದಾರೆ. ಕಪ್ಪತಗುಡ್ಡ ವನ್ಯಜೀವಿಧಾಮವಾಗಿ ಮುಂದುವರಿದರೆ ರೈತರನ್ನು ಒಕ್ಕಲೆಬ್ಬಿಸಲಾಗುತ್ತದೆ ಎಂದು ಹುಯಿಲೆಬ್ಬಿಸಿ ರೈತರ ತಲೆಕೆಡಿಸಿ ತಮ್ಮ ಬೇಳೆ ಬೇಯಿಸಿಕೊಳ್ಳುವ ಕೃತ್ಯ ಸ್ಥಳೀಯ ಮಟ್ಟದಲ್ಲಿಯೂ ನಡೆದಿದೆ. ಸ್ಥಳೀಯ ಕೆಲ ಮುಖಂಡರು ಬಾಡಿಗೆ ಹೋರಾಟಗಾರರೊಂದಿಗೆ ಕೈಜೋಡಿಸಿದ್ದರಿಂದ ವನ್ಯಜೀವಿ ಧಾಮ ವಿರೋಧಿ ಹೋರಾಟ ಆಗಾಗ ಸದ್ದು ಮಾಡುತ್ತಲೇ ಇದೆ.

    ಕಪ್ಪತಗುಡ್ಡವು ವನ್ಯಜೀವಿ ಧಾಮವಾಗಿ ಮಾರ್ಪಾಡಾದರೆ ಗುಡ್ಡದ ಸೆರಗಿನಲ್ಲಿ ಬರುವ ಜಮೀನುಗಳನ್ನು ಅರಣ್ಯ ಇಲಾಖೆ ವಶಪಡಿಸಿಕೊಳ್ಳಲಿದೆ. ವನ್ಯಜೀವಿಧಾಮ ಕಾಯ್ದೆ ಅನುಷ್ಠಾನಗೊಂಡರೆ ಇಲ್ಲಿನ ರೈತರ ಕತೆ ಮುಗಿದಂತೆ ಎಂದು ರೈತರನ್ನು ಹೆದರಿಸುವ ಕೆಲಸ ನಿತ್ಯವೂ ನಡೆಯುತ್ತಿದೆ. ತೆರೆಮರೆಯಲ್ಲಿ ನಿಂತುಕೊಂಡು ರೈತರಿಂದ ಪ್ರತಿಭಟನೆ ಮಾಡಿಸಲಾಗುತ್ತಿದ್ದು, ಗುಡ್ಡದ ಸೆರಗಿನ ಕೆಲ ಗ್ರಾಮಗಳ ಮುಖಂಡರು ಗಣಿ ಕುಳಗಳ ಕೈಗೊಂಬೆಯಂತೆ ವರ್ತಿಸುತ್ತಿದ್ದಾರೆ.

    ಸ್ವಾಮೀಜಿಗಳ ವಿರುದ್ಧ ಆರೋಪ: ಕಪ್ಪತಗುಡ್ಡದಲ್ಲಿ ನಡೆಯುತ್ತಿದ್ದ ಅಕ್ರಮ ಗಣಿಗಾರಿಕೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ನಂದಿವೇರಿಮಠ ಶ್ರೀ ಶಿವಕುಮಾರ ಸ್ವಾಮೀಜಿ ಅವರು ಮಠದಿಂದ ದೂರ ಉಳಿಯಬೇಕಾದ ಪ್ರಸಂಗ ಎದುರಾಗಿದೆ. ಶಿವಕುಮಾರ ಸ್ವಾಮೀಜಿ ಅವರು ಮಠದಲ್ಲಿ ಇರುವುದಿಲ್ಲ ಎಂಬ ಆರೋಪಗಳನ್ನು ಹೊರೆಸಿ ಅವರನ್ನು ಮಠಕ್ಕೆ ಕಾಲಿಡದಂತೆ ಮಾಡಲಾಗಿದೆ. ಈ ಪ್ರಕರಣದ ಹಿಂದೆ ಗಣಿ ಕುಳಗಳ ಷಡ್ಯಂತ್ರ ಅಡಗಿರುವ ಶಂಕೆಯೂ ವ್ಯಕ್ತವಾಗಿದೆ. ಈ ಕುರಿತು ಶಿವಕುಮಾರ ಸ್ವಾಮೀಜಿ ಅವರೇ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

    ಕಪ್ಪತಗುಡ್ಡ ರಕ್ಷಣೆಗೆ ಹೋರಾಟ ಮಾಡುತ್ತಿದ್ದ ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರು ಲಿಂಗೈಕ್ಯರಾದ ನಂತರ ಗಣಿ ಕುಳಗಳು ಅರ್ಧ ನಿಟ್ಟುಸಿರು ಬಿಟ್ಟಿದ್ದವು. ಇದೀಗ ನಂದಿವೇರಿಮಠದಿಂದ ಶಿವಕುಮಾರ ಸ್ವಾಮೀಜಿ ಹೊರದಬ್ಬಿಸಿ ರಣಕೇಕೆ ಹಾಕಿದ್ದಾರೆ. ಜಿಲ್ಲೆಯ ಅಲ್ಲಿಲ್ಲಿ ಹೋರಾಟ ಮಾಡುವಂತಹ ಪರಿಸರವಾದಿಗಳು, ಸಾರ್ವಜನಿಕರ ಹೋರಾಟಕ್ಕೆ ಮಹತ್ವ ಸಿಗುವುದಿಲ್ಲ ಎಂಬುದು ಗಣಿ ದೊರೆಗಳಿಗೆ ಮನವರಿಕೆಯಾಗಿದೆ. ಹೀಗಾಗಿ, ಅವಕಾಶವನ್ನು ಬಳಸಿಕೊಂಡು ವನ್ಯಜೀವಿಧಾಮ ಆದೇಶವನ್ನು ರದ್ದುಪಡಿಸಬೇಕೆಂಬ ಮನವಿಯನ್ನು ವನ್ಯಜೀವಿ ಮಂಡಳಿ ಸಭೆಯ ಮುಂದೆ ಬರುವಂತೆ ನೋಡಿಕೊಳ್ಳಲಾಗಿದೆ.

    ಗಣಿ ಕುಳಗಳ: ಕಪ್ಪತಗುಡ್ಡವನ್ನು ವನ್ಯಜೀವಿ ಧಾಮವನ್ನಾಗಿ ಮಾಡಿಬಿಟ್ಟರೆ ಕಪ್ಪತಗುಡ್ಡ ನಿಷಿದ್ಧ ಪ್ರದೇಶವಾಗುತ್ತದೆ. ಅನುಮತಿ ಇಲ್ಲದೇ ಕಾಲಿಡಲೂ ಆಗದಂತಹ ಸ್ಥಿತಿ ನಿರ್ವಣವಾಗುತ್ತದೆ. ವನ್ಯಜೀವಿಧಾಮ ಮಾಡಿದರೆ ಕಪ್ಪತಗುಡ್ಡದ ಜತೆಗೆ ಅದರ ಸುತ್ತಲಿನ ಇಂತಿಷ್ಟು ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಕೈಗಾರಿಕೆಗಳನ್ನು ಆರಂಭಿಸುವಂತಿಲ್ಲ. ಹೀಗಾಗಿ, ಗುಡ್ಡದ ಸೆರಗಿನಲ್ಲಿರುವ ಕಲ್ಲು ಗಣಿಗಾರಿಕೆ ಮಾಡುವಂತಹ ಕ್ರಷರ್​ಗಳನ್ನು ಬಂದ್ ಮಾಡುವಂತಹ ಪ್ರಸಂಗ ಎದುರಾಗಬಹುದು. ಅದಿರು ಗಣಿಗಾರಿಕೆ, ಚಿನ್ನ ಗಣಿಗಾರಿಕೆ, ಮಣ್ಣು ಗಣಿಗಾರಿಕೆ ಹಾಗೂ ಕಲ್ಲಿನ ಕ್ವಾರಿ ನಡೆಸುವವರು ಎಲ್ಲ ರೀತಿಯಿಂದಲೂ ಶಕ್ತರಾಗಿದ್ದು, ದೆಹಲಿ ಮಟ್ಟದಲ್ಲೂ ಪ್ರಭಾವ ಬೀರುವ ಸಾಮರ್ಥ್ಯ ಹೊಂದಿದ್ದಾರೆ ಎಂಬ ಆತಂಕ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

    ಜಿಲ್ಲೆಯ ಪಾಲಿಗೆ ನಿರ್ಣಾಯಕ ಸಭೆ: ಜಿಲ್ಲೆಯ ಶಿರಹಟ್ಟಿ ತಾಲೂಕಿನ ಕಪ್ಪತಗುಡ್ಡ ಸೆರಗಿನಲ್ಲಿ ಕಲ್ಲಿನ ಕ್ವಾರಿ ನಡೆಸುತ್ತಿರುವ ಕೆಲ ಹಾಲಿ ಶಾಸಕರು, ಮಾಜಿ ಶಾಸಕರು ಸಹ ಕಪ್ಪತಗುಡ್ಡ ವನ್ಯಜೀವಿ ಧಾಮ ಆದೇಶ ರದ್ದು ಮಾಡಬೇಕೆಂದು ಪರೋಕ್ಷವಾಗಿ ಪ್ರಯತ್ನ ನಡೆಸಿದ್ದು, ಜನರನ್ನು ಎತ್ತಿಕಟ್ಟಿ ಪ್ರತಿಭಟನೆ ಮಾಡಿಸುತ್ತಿದ್ದಾರೆ ಎಂಬ ಗುಸುಗುಸು ಕೇಳಲಾರಂಭಿಸಿದೆ. ಕಪ್ಪತಗುಡ್ಡ ವನ್ಯಜೀವಿಧಾಮವನ್ನಾಗಿ ಮಾಡಿದರೆ ಸ್ಥಳೀಯರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಸರ್ಕಾರಕ್ಕೆ ಕೆಟ್ಟ ಹೆಸರು ತಂದುಕೊಳ್ಳಬಾರದು ಎಂದು ಮುಖ್ಯಮಂತ್ರಿ ಅವರಿಗೆ ಮನವರಿಕೆ ಮಾಡಿಕೊಡುವ ಕೆಲಸವೂ ನಡೆಯುತ್ತಿದೆ. ಹೀಗಾಗಿ, ಮಾ. 9ರಂದು ನಡೆಯಲಿರುವ ವನ್ಯಜೀವಿ ಮಂಡಳಿ ಸಭೆಯು ಜಿಲ್ಲೆಯ ಪಾಲಿಗೆ ನಿರ್ಣಾಯಕ ಎನಿಸಿದೆ.

    ಕಪ್ಪತಗುಡ್ಡ ರಕ್ಷಣೆ ಮಾಡುವುದು ನಮ್ಮ ಪ್ರಥಮ ಆದ್ಯತೆ. ಈ ವಿಷಯದಲ್ಲಿ ರಾಜಿ ಪ್ರಶ್ನೆಯೇ ಇಲ್ಲ. ಗುರುಗಳಾದ ಲಿಂ. ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರ ಹೋರಾಟದ ಫಲದಿಂದ ಕಪ್ಪತಗುಡ್ಡ ಉಳಿದಿದೆ. ಅದನ್ನು ಮುಂದುವರಿಸಿಕೊಂಡು ಹೋಗುವುದು ನಮ್ಮ ಜವಾಬ್ದಾರಿಯಾಗಿದೆ. ಕಪ್ಪತಗುಡ್ಡ ಉಳಿಸಿ ಬೆಳೆಸಲು ಸರ್ಕಾರ ಚಿಂತನೆ ಮಾಡಬೇಕು. ಜಿಲ್ಲೆಯ ಜನರ ಭಾವನೆಯನ್ನು ಅರ್ಥ ಮಾಡಿಕೊಂಡು ನಿರ್ಣಯ ಕೈಗೊಳ್ಳುವುದು ಒಳಿತು.

    | ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ

    ತೋಂಟದಾರ್ಯಮಠ ಗದಗ

    ಗಣಿಕುಳಗಳ ಒತ್ತಡಕ್ಕೆ ಸರ್ಕಾರ ಮಣಿಯಬಾರದು. ಕಪ್ಪತಗುಡ್ಡ ಉಳಿಸಲು ನಿರ್ಣಯ ಕೈಗೊಳ್ಳಬೇಕು. ಈ ವಿಷಯದಲ್ಲಿ ಸರ್ಕಾರ ಜನವಿರೋಧಿ ನೀತಿ ಅನುಸರಿಸಿದರೆ ತೋಂಟದಾರ್ಯ ಮಠದ ಶ್ರೀಗಳ ನೇತೃತ್ವದಲ್ಲಿ ಜನಾಂದೋಲನ ರೂಪಿಸಲು ಹಿಂಜರಿಯಲ್ಲ. ಉತ್ತರ ಕರ್ನಾಟಕದಲ್ಲಿ ಇರುವ ಅಪರೂಪದ ಸಂಪತ್ತು ಎನಿಸಿರುವ ಕಪ್ಪತಗುಡ್ಡ ಉಳಿಸಲು ಜನರು ಕೈಜೋಡಿಸಬೇಕು.

    | ಶ್ರೀ ಶಿವಕುಮಾರ ಸ್ವಾಮೀಜಿ

    ನಂದಿವೇರಿಮಠ, ಕಪ್ಪತಗುಡ್ಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts