More

    ಒಂದೇ ದಿನದಲ್ಲಿ ಪರೀಕ್ಷಾ ವರದಿ ನೀಡಿ – ಸಚಿವ ಶೆಟ್ಟರ್ ಸಲಹೆ

    ಬೆಳಗಾವಿ: ಸೋಂಕು ತಪಾಸಣೆಗೆ ಗಂಟಲು, ಮೂಗು ದ್ರವ ಮಾದರಿ ಸಂಗ್ರಹಿಸಿದ 24 ಗಂಟೆಯೊಳಗೆ ವರದಿ ನೀಡಲು ಕ್ರಮ ವಹಿಸಬೇಕು. ಇದರಿಂದ ಸೋಂಕು ಹರಡುವಿಕೆ ನಿಯಂತ್ರಿಸುವುದು ಸಾಧ್ಯವಾಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಹಾಗೂ ರಾಜ್ಯದಲ್ಲಿ ಆಕ್ಸಿಜನ್ ಪೂರೈಕೆ ಉಸ್ತುವಾರಿಯೂ ಆಗಿರುವ ಸಚಿವ ಜಗದೀಶ ಶೆಟ್ಟರ್ ಸಲಹೆ ನೀಡಿದರು.

    ಜಿಲ್ಲೆಯಲ್ಲಿ ಆಕ್ಸಿಜನ್ ಲಭ್ಯತೆಗೆ ಸಂಬಂಧಿಸಿದಂತೆ ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಉನ್ನತ ಅಧಿಕಾರಿಗಳೊಂದಿಗೆ ಅವರು ಸಭೆ ನಡೆಸಿ ಚರ್ಚಿಸಿ, ಮೂರ್ನಾಲ್ಕು ದಿನಗಳಲ್ಲಿ ಆಕ್ಸಿಜನ್ ಸಮಸ್ಯೆ ನಿವಾರಣೆಯಾಗಲಿದೆ ಎಂದು ತಿಳಿಸಿದರು.

    ಸಿಬ್ಬಂದಿ ನೇಮಕಕ್ಕೆ ಅನುಮತಿ: ಬಿಮ್ಸ್‌ನಲ್ಲಿ ಅಗತ್ಯವಿರುವ ವೈದ್ಯರು, ತಂತ್ರಜ್ಞರು ಹಾಗೂ ವೈದ್ಯಕೀಯ ಸಿಬ್ಬಂದಿ ನೇಮಕಾತಿಗೆ ಸರ್ಕಾರ ಈಗಾಗಲೇ ಅನುಮತಿ ನೀಡಿದೆ. ಹೀಗಾಗಿ ಶೀಘ್ರವೇ ನೇೀಮಕಾತಿ ಪ್ರಕ್ರಿಯೆ ಪೂರ್ಣಗೊಳಿಸಬೇಕು. ಬಿಮ್ಸ್‌ಗೆ ಇನ್ನೂ ಹೆಚ್ಚಿನ ಆಕ್ಸಿಜನ್ ಹಾಗೂ ಸಿಬ್ಬಂದಿ ಒದಗಿಸಿದರೆ ಗರಿಷ್ಠ 822 ಬೆಡ್ ಸೌಲಭ್ಯ ನೀಡಬಹುದು ಎಂದರು.

    ಈ ವೇಳೆ ಬಿಮ್ಸ್ ನಿರ್ದೇಶಕ ಡಾ.ವಿನಯ ದಾಸ್ತಿಕೊಪ್ಪ ಮಾತನಾಡಿ, ಈಗಾಗಲೇ ಹತ್ತು ವೈದ್ಯರನ್ನು ಹಾಗೂ ವೈದ್ಯಕೀಯ ಸಿಬ್ಬಂದಿಯನ್ನು ತಾತ್ಕಾಲಿಕವಾಗಿ ನೇಮಿಸಿಕೊಳ್ಳಲಾಗಿದೆ ಎಂದು ಸಚಿವರಿಗೆ ವಿವರಿಸಿದರು. ಮೇ 10ರಿಂದ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಪೊಲೀಸ್ ಆಯುಕ್ತರು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸಚಿವ ಜಗದೀಶ ಶೆಟ್ಟರ್ ಸೂಚನೆ ನೀಡಿದರು.

    ಸಭೆಯಲ್ಲಿ ಸಂಸದೆ ಮಂಗಲಾ ಅಂಗಡಿ, ನಗರ ಪೊಲೀಸ್ ಆಯುಕ್ತ ಡಾ. ಕೆ.ತ್ಯಾಗರಾಜನ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ದರ್ಶನ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಅಪರ ಜಿಲ್ಲಾಧಿಕಾರಿ ಯೋಗೇಶ್ವರ, ಮಹಾನಗರ ಪಾಲಿಕೆ ಆಯುಕ್ತ ಜಗದೀಶ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಬಾಲಕೃಷ್ಣ ತುಕ್ಕಾರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಎಸ್.ವಿ.ಮುನ್ಯಾಳ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

    ಟ್ಯಾಂಕರ್ ದುರಸ್ತಿಯಾದರೆ ಪೂರೈಕೆ ಸುಗಮ ಜಿಲ್ಲೆಯ ಆಕ್ಸಿಜನ್ ಪೂರೈಕೆ ಟ್ಯಾಂಕರ್ ಅಪಘಾತಕ್ಕೊಳಗಾಗಿದ್ದರಿಂದ ತಾತ್ಕಾಲಿಕವಾಗಿ ಪರ್ಯಾಯ ವ್ಯವಸ್ಥೆ ಮಾಡಲಾಗಿದ್ದು, ಟ್ಯಾಂಕರ್ ಸರಿಯಾದ ಬಳಿಕ ಸಾಗಣೆಗೆ ಸಮಸ್ಯೆ ಇಲ್ಲ ಎಂದು ಜಿಲ್ಲಾಧಿಕಾರಿ ಡಾ. ಕೆ.ಹರೀಶಕುಮಾರ ತಿಳಿಸಿದರು.

    ಕೊಲ್ಲಾಪುರದಿಂದ 20 ಕೆಎಲ್ ಆಕ್ಸಿಜನ್ ಪೂರೈಕೆಯಾಗುತ್ತಿತ್ತು. ಆದರೆ, ಕೈಗಾರಿಕಾ ಆಕ್ಸಿಜನ್ ಸಾಗಣೆಗೆ ನಿರ್ಬಂಧ ವಿಧಿಸಿರುವುದರಿಂದ ಸ್ವಲ್ಪಮಟ್ಟಿಗೆ ಕೊರತೆ ಕಂಡುಬರುತ್ತಿದೆ. ಆದರೂ ಜಿಲ್ಲೆಯಲ್ಲಿ ಆಕ್ಸಿಜನ್ ಸಂಗ್ರಹಣೆ ಸಾಮರ್ಥ್ಯ ಕ್ರಮೇಣವಾಗಿ ಹೆಚ್ಚಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಜಿಲ್ಲೆಯಲಿ ಸೋಂಕಿನ ಪ್ರಮಾಣ ಶೇ. 28ರಷ್ಟಿದೆ. ಲಸಿಕೆಗೆ ಬೇಡಿಕೆ ಹೆಚ್ಚಾಗಿದ್ದು, ಸರ್ಕಾರದ ಮಾರ್ಗಸೂಚಿ ಪ್ರಕಾರ 2ನೇ ಡೋಸ್ ಮಾತ್ರ ನೀಡಲಾಗುತ್ತಿದೆ ಎಂದು ಡಿಸಿ ವಿವರಿಸಿದರು.

    Array

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts