More

    ಏಪ್ರಿಲ್‌ನಿಂದ ನೀರಿನ ಕರ ವಸೂಲಿ

    ಸುರಪುರ : ಪಟ್ಟಣದಲ್ಲಿ ದಿನದ ೨೪ ಗಂಟೆ ನೀರಿನ ಬಿಲ್ ವಸೂಲಿಗಾಗಿ ಟೆಂಡರ್ ಪಡೆದ ಗುತ್ತಿಗೆದಾರರು ತಿಂಗಳಿಗೆ ೫೭ ಸಾವಿರ ರೂ. ಪಾವತಿಸಬೇಕು ಎಂದು ಪೌರಾಯುಕ್ತ ಪ್ರೇಮ್ ಚಾರ್ಲ್ಸ್ ಹೇಳಿದರು.

    ನಗರಸಭೆಯಲ್ಲಿ ಗುರುವಾರ ಕರೆದಿದ್ದ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಅವರು, ಯಾವುದೇ ನೆಪ ಹೇಳದೆ ಬಿಲ್ ಪಾವತಿಸಬೇಕು. ಪಟ್ಟಣದಲ್ಲಿ ೯೫೦೦ ನಲ್ಲಿಗಳ ಗುರಿ ಇದ್ದರೂ ೧೧,೦೦೦ ಟ್ಯಾಪ್‌ಗಳನ್ನು ಹಾಕಲಾಗಿದೆ. ಎಲ್ಲ ನಲ್ಲಿಗಳಿಗೆ ರೀಡಿಂಗ್ ಮಷಿನ್ ಅಳವಡಿಸಲಾಗಿದೆ. ೧೦೦೦ ಲೀಟರ್ ನೀರಿಗೆ ೭, ೯, ೧೧ ರೂ.ಗಳಂತೆ ದರ ನಿಗದಿಪಡಿಸಲಾಗಿದೆ. ತಿಂಗಳಿಗೆ ೫೭ರಿಂದ ೧೦೦ ರೂ. ಒಳಗೆ ಬಿಲ್ ಬರಲಿದೆ. ಹೆಚ್ಚು ನೀರು ಬಳಸಿದವರು ಮಾತ್ರ ಸ್ವಲ್ಪ ಹೆಚ್ಚಿನ ಹಣ ಭರಿಸಬೇಕಾಗುತ್ತದೆ ಎಂದರು.

    ರಾಜ್ಯದಲ್ಲಿ ನೀರಿನ ಬಿಲ್ ವಸೂಲಿ ಮಾಡುವ ಏಜೆನ್ಸಿಗಳಿದ್ದು, ಬಿಲ್ಲಿಂಗ್, ಮಷಿನ್, ಪೇಪರ್, ಕಂಪ್ಯೂಟರ್ ಅವರದೇ ಆಗಿರುತ್ತದೆ. ನಗರಸಭೆಯಲ್ಲಿ ಒಂದು ಕೊಠಡಿ ಮಾತ್ರ ನೀಡಿ ನಮ್ಮಲ್ಲಿ ತರಬೇತಿ ಪಡೆದವರಿಗೆ ಒಂದು ಟ್ಯಾಪ್(೧೦೦೦ ಲೀ. ನೀರು)ಗೆ ೫ ರೂ. ನೀಡುತ್ತೇವೆ ಎಂದು ತಿಳಿಸಿದರು.

    ನಗರಸಭೆಯ ನಾಲ್ಕು ಯೋಜನೆಗಳಡಿ ೯ ಕೋಟಿ ರೂ. ವೆಚ್ಚದಲ್ಲಿ ಸಿಸಿ ರಸ್ತೆ, ಚರಂಡಿ ಕಾಮಗಾರಿ ಕೈಗೊಳ್ಳಲಾಗುತ್ತಿದೆ. ೨೪ ಕೋಟಿ ರೂ.ಗಳಲ್ಲಿ ನಗರಸಭೆ ಕಟ್ಟಡ ನಿರ್ಮಾಣಕ್ಕೆ ೫ ಕೋಟಿ, ೧.೫೦ ಲಕ್ಷ ಮೂರು ಸಮುದಾಯ ಭವನ, ೫೦ ಲಕ್ಷ ರೂ. ಮಾರುಕಟ್ಟೆ ನಿರ್ಮಾಣಕ್ಕೆ ಬಳಸಲಾಗುತ್ತಿದೆ. ಎಸ್‌ಸಿ, ಎಸ್‌ಟಿ ಅನುದಾನದಲ್ಲಿ ಹೊಲಿಗೆ ಯಂತ್ರ, ಹಿಟ್ಟಿನ ಗಿರಣಿ, ಅಂಗವಿಕಲರಿಗೆ ಸ್ಥಳ ನೀಡುವುದಾಗಿ ಹೇಳಿದರು.

    ವಾರ್ಡ್ ೪ರಲ್ಲಿ ಮಹರ್ಷಿ ವಾಲ್ಮೀಕಿ ಮೂರ್ತಿ ಸ್ಥಾಪಿಸಲಾಗಿದೆ. ಅದನ್ನು ಬದಲಾಯಿಸುವಂತೆ ಒತ್ತಡ ಕೇಳಿ ಬಂದಿತ್ತು. ಆಡಳಿತಾಧಿಕಾರಿಯಾಗಿರುವ ಜಿಲ್ಲಾಧಿಕಾರಿಗಳಿಗೆ ವಿಷಯ ತಿಳಿಸಿ ಸಭೆ ಕರೆಯಲಾಗಿತ್ತು. ಸಭೆಯಲ್ಲಿ ಸದಸ್ಯರೆಲ್ಲರೂ ಮೂರ್ತಿ ಬದಲಾವಣೆಗೆ ಒಪ್ಪಿಗೆ ಸೂಚಿಸಿದ್ದಾರೆ. ೧೧ ಜನರ ಸಮಿತಿ ರಚಿಸಲಾಗಿದ್ದು, ಅವರೇ ಮೂರ್ತಿಯ ಕೆತ್ತನೆ ಮತ್ತು ರೂಪುರೇಷೆ ಕುರಿತು ತೀರ್ಮಾನ ಕೈಗೊಳ್ಳಲಿದ್ದಾರೆ. ಅನುದಾನ ಅನುಮೋದನೆಗಾಗಿ ಡಿಸಿಗೆ ಕಳಿಸಲಾಗುತ್ತದೆ. ಆದೇಶ ಬಂದ ನಂತರ ಮೂರ್ತಿ ಪ್ರತಿಷ್ಠಾಪಿಸುವುದಾಗಿ ತಿಳಿಸಿದರು.

    ಸದಸ್ಯರಾದ ವೇಣುಮಾಧವ ನಾಯಕ, ಸೋಮನಾಥ ನಾಯಕ ಡೊಣ್ಣಿಗೇರಿ, ಶಿವಕುಮಾರ, ವಿಷ್ಣು ಗುತ್ತೇದಾರ್, ಮಾನಪ್ಪ ಚಳ್ಳಿಗಿಡ, ಜುಮ್ಮಣ್ಣ ಕೆಂಗುರಿ, ನಾಸೀರ್ ಕುಂಡಾಲೆ, ಅಹ್ಮದ್ ಶರೀಫ್, ಕಮ್ರುದ್ದೀನ್, ಮಹಿಬೂಬ್ ಸಾಬ್, ಸುವರ್ಣ ಎಲಿಗಾರ, ನಗರಸಭೆ ವ್ಯವಸ್ಥಾಪಕ ಯಲ್ಲಪ್ಪ ನಾಯಕ ಡೊಣ್ಣಿಗೇರಾ, ಗುರುಸ್ವಾಮಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts