More

    ಏಕಾಏಕಿ ಅಂಗಡಿ, ಮುಂಗಟ್ಟುಗಳು ಬಂದ್!

    ಹುಬ್ಬಳ್ಳಿ: ಬುಧವಾರ ರಾತ್ರಿ ನೈಟ್ ಕರ್ಫ್ಯೂ ಬಳಿಕ ಗುರುವಾರ ಬೆಳಗ್ಗೆ ಎಂದಿನಂತೆ ಅಂಗಡಿ- ಮುಂಗಟ್ಟುಗಳ ಬಾಗಿಲು ತೆರೆದಿದ್ದ ವ್ಯಾಪಾರಿಗಳಿಗೆ ಪೊಲೀಸರು ಶಾಕ್ ನೀಡಿದರು. ಯಾವುದೇ ಸೂಚನೆ ನೀಡದೇ ಏಕಾಏಕಿ ಅಂಗಡಿ ಬಾಗಿಲುಗಳನ್ನು ಮುಚ್ಚಿಸಿದರು. ಇದರಿಂದ ವ್ಯಾಪಾರಿಗಳು ಹಾಗೂ ಗ್ರಾಹಕರು ಕಂಗಾಲಾದರು.

    ವೀಕೆಂಡ್ ಕರ್ಫ್ಯೂ (ಶನಿವಾರ, ಭಾನುವಾರ) ಜಾರಿಯ ಹಿನ್ನೆಲೆಯಲ್ಲಿ ಗುರುವಾರವೇ ಜವಳಿ, ಚಿನ್ನ, ಮತ್ತಿತರ ವಸ್ತುಗಳ ಖರೀದಿಗಾಗಿ ಸಾವಿರಾರು ಗ್ರಾಹಕರು ಮಾರುಕಟ್ಟೆಗೆ ಆಗಮಿಸಿದ್ದರು. ಪಕ್ಕದ ಜಿಲ್ಲೆಗಳಾದ ಗದಗ, ಹಾವೇರಿ, ಉತ್ತರ ಕನ್ನಡ, ಬಾಗಲಕೋಟೆ ಮತ್ತಿತರ ಜಿಲ್ಲೆಗಳಿಂದ ಜನ ವಾಣಿಜ್ಯ ನಗರಿಗೆ ಖರೀದಿಗೆ ಬಂದಿದ್ದರು.

    ಏಪ್ರಿಲ್ ಅಂತ್ಯ ಹಾಗೂ ಮೇನಲ್ಲಿ ಮದುವೆ ಮುಹೂರ್ತಗಳು ಹೆಚ್ಚಾಗಿರುವ ಕಾರಣ ಹಳ್ಳಿಗಳಿಂದ ಜನ ಸ್ವಂತ ಹಾಗೂ ಬಾಡಿಗೆ ವಾಹನ ಪಡೆದು ಜವಳಿ, ಚಿನ್ನ ಖರೀದಿಗೆ ಆಗಮಿಸಿದ್ದರು. ಕೊಪ್ಪಿಕರ ರಸ್ತೆ, ದಾಜಿಬಾನಪೇಟೆ, ದುರ್ಗದ ಬೈಲ್, ಹಳೇ ಹುಬ್ಬಳ್ಳಿ, ಜನತಾ ಬಜಾರ್​ನಲ್ಲಿ ಅಂಗಡಿಗಳಿಗೆ ತೆರಳಿ ಖರೀದಿ ಆರಂಭಿಸಿದ್ದರು. ಅಷ್ಟರಲ್ಲಿ ಲಾಠಿ ಹಿಡಿದು ಆಗಮಿಸಿದ ಪೊಲೀಸರು ಗ್ರಾಹಕರನ್ನು ಹೊರಗೆ ಕಳುಹಿಸಿ ಅಂಗಡಿ ಬಾಗಿಲು ಬಂದ್ ಮಾಡಿಸಿದರು. ಇದರಿಂದಾಗಿ ರಸ್ತೆಗಳಲ್ಲಿ ಭಾರಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಒಮ್ಮಿಂದೊಮ್ಮೆಲೇ ಎಲ್ಲೆಡೆ ಜನ ಗುಂಪು ಗುಂಪಾಗಿ ಸೇರಿದರು. ಗುಂಪು ಚದುರಿಸಬೇಕಾದವರೇ ಗುಂಪುಗೂಡಲು ಅವಕಾಶ ಮಾಡಿಕೊಟ್ಟಂತಾಗಿತ್ತು. ನವನಗರದಲ್ಲಿಯೂ ಅಂಗಡಿ- ಮುಂಗಟ್ಟುಗಳನ್ನು ಬಂದ್ ಮಾಡಿಸಲಾಯಿತು. ಆದರೆ, ಹಾಲು- ಮೊಸರಿನ ಅಂಗಡಿಗಳನ್ನು ಮುಚ್ಚಿಸಿದ್ದು, ಸ್ಥಳೀಯರ ಆಕ್ಷೇಪಕ್ಕೆ ಕಾರಣವಾಯಿತು.

    ಮುಂದಿನ ವಾರ ನನ್ನ ಮಗಳ ಮದ್ವಿ ಐತಿ, ತಾಳಿ ಬೇಕಿತ್ರೀ..
    ‘ಮುಂದಿನ ವಾರ ನನ್ನ ಮಗಳ ಮದ್ವಿ ಐತ್ರಿ. ಬಂಗಾರದ ಅಂಗಡ್ಯಾಗ ತಾಳಿ ಮಾಡಾಕ ಹಾಕ್ಸಿದ್ದೆ. ಅಂಗಡ್ಯಾವ ಇವತ್ ಕೊಡ್ತೇನು ಬರ್ರಿ ಅಂದಿದ್ದ. ಅದಕ ಕುಂದಗೋಳದಿಂದ ಬಂದಿದ್ದೆ. ಇಲ್ಲಿ ನೋಡಿದ್ರ ಅಂಗಡಿ ಬಂದ್ ಮಾಡಿಸ್ಯಾರ. ನನ್ ಮಗಳ ಮದ್ವಿಗ ತಾಳೀ ಬೇಕ್ರೀ ಪೊಲೀಸ್ರ.. ಕೊಡಸ್ರೀ ಅಂತಾ ಮಹಿಳೆಯೊಬ್ಬರು ದುರ್ಗದ ಬೈಲ್ ಬಳಿ ಮನವಿ ಮಾಡುತ್ತಿದ್ದ ದೃಶ್ಯ ಕಂಡು ಬಂದಿತು.

    ದಿಢೀರ್ ಮುಚ್ಚಿಸಿದ್ದಕ್ಕೆ ಕೆಸಿಸಿಐ ಆಕ್ಷೇಪ
    ಹುಬ್ಬಳ್ಳಿ:
    ಅವಳಿ ನಗರದಲ್ಲಿ ವ್ಯಾಪಾರ ವಹಿವಾಟುಗಳನ್ನು ಗುರುವಾರ ಬೆಳಗ್ಗೆ ಏಕಾಏಕಿ ಬಂದ್ ಮಾಡಿದ್ದನ್ನು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಆಕ್ಷೇಪಿಸಿದೆ. ಯಾವುದೇ ಮುನ್ಸೂಚನೆ ನೀಡದೇ ವ್ಯವಹಾರವನ್ನು ಬಂದ್ ಮಾಡುವುದರಿಂದ ದಿನಗೂಲಿ ಕೆಲಸದವರಿಗೆ ಹಾಗೂ ಸಣ್ಣ ವ್ಯಾಪಾರಸ್ಥರಿಗೆ ಭಾರಿ ಆರ್ಥಿಕ ಹೊರೆಯಾಗಿ ಜೀವನ ನಡೆಸುವುದು ದುಸ್ತರವಾಗುತ್ತದೆ. ವ್ಯಾಪಾರ ಬಂದ್ ಮಾಡುವುದರಿಂದ ತೆರಿಗೆ ರೂಪದಲ್ಲಿ ಸಂಗ್ರಹವಾಗುವ ಸರ್ಕಾರದ ಆದಾಯಕ್ಕೂ ಖೋತಾ ಆಗಲಿದೆ. ಜಿಲ್ಲಾಡಳಿತ ಇಂತಹ ಸಂದರ್ಭದಲ್ಲಿ ವ್ಯಾಪಾರ ವಹಿವಾಟಿಗೆ ತೊಂದರೆಯಾಗದಂತೆ, ಸಾರ್ವಜನಿಕರಿಗೆ ಅನುಕೂಲವಾಗುವ ರೀತಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಂಸ್ಥೆಯು ಒತ್ತಾಯಿಸಿದೆ.

    ಹುಬ್ಬಳ್ಳಿ ಶಹರ ಪೊಲೀಸ್ ಠಾಣೆಗೆ ಮುತ್ತಿಗೆ
    ಜಿಲ್ಲಾಧಿಕಾರಿ ಅವರ ಸೂಚನೆ ಮೇರೆಗೆ ಪೊಲೀಸರು ಅಗತ್ಯ ವಸ್ತು ಮತ್ತು ತುರ್ತು ಸೇವೆ ಹೊರತುಪಡಿಸಿ ಉಳಿದೆಲ್ಲ ಅಂಗಡಿಗಳನ್ನು ದಿಢೀರ್ ಆಗಿ ಬಂದ್ ಮಾಡಿಸಿದ್ದರಿಂದ ಆಕ್ರೋಶಗೊಂಡ ವ್ಯಾಪಾರಿಗಳು ಶಹರ ಪೊಲೀಸ್ ಠಾಣೆಗೆ ಮಧ್ಯಾಹ್ನ ಮುತ್ತಿಗೆ ಹಾಕಿದರು. ಮುನ್ಸೂಚನೆ ನೀಡದೇ ಏಕೆ ಅಂಗಡಿ ಬಂದ್ ಮಾಡಿಸಿದ್ದೀರಿ ಎಂದು ಪ್ರಶ್ನಿಸಿದರು. ಸರ್ಕಾರದ ಆದೇಶ ಪಾಲಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಶಹರ ಠಾಣೆ ಇನ್​ಸ್ಪೆಕ್ಟರ್ ಆನಂದ ಒನಕುದ್ರೆ ಹಾಗೂ ಸಿಬ್ಬಂದಿ ಹೇಳಿ ಪರಿಸ್ಥಿತಿ ತಿಳಿಗೊಳಿಸಿದರು. ಅಗತ್ಯ ವಸ್ತುಗಳು ಹಾಗೂ ಕಟ್ಟಡ ನಿರ್ಮಾಣ ಸಾಮಗ್ರಿಗಳ ಮಾರಾಟ ಮಳಿಗೆಗಳನ್ನು ಹೊರತು ಪಡಿಸಿ ಉಳಿದೆಲ್ಲ ವಾಣಿಜ್ಯ ಮಳಿಗೆಗಳನ್ನು ತೆರೆಯಕೂಡದು ಎಂದು ಕೋವಿಡ್ ಮಾರ್ಗಸೂಚಿಯಲ್ಲಿ ಸ್ಪಷ್ಟ ಪಡಿಸಲಾಗಿದೆ ಎಂದು ಪೊಲೀಸರು ಮನವರಿಕೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts