More

    ಏಕದೇವಾರಾಧನೆ ಬಹುತ್ವ ನಾಶದ ಹುನ್ನಾರ – ಡಾ.ರಾಮಚಂದ್ರಪ್ಪ ಸೌಹಾರ್ದ ಮಾನವ ಸರಪಳಿ

    ದಾವಣಗೆರೆ : ಭಾರತದಲ್ಲಿ ಒಂದು ದೇವರ ಆರಾಧನೆಯನ್ನು ರಾಷ್ಟ್ರದ ದೇವರು ಎಂಬುದಾಗಿ ಬಿಂಬಿಸಲಾಗುತ್ತಿದ್ದು ಇದು ಬಹುತ್ವ ನಾಶದ ಹುನ್ನಾರವಾಗಿದೆ ಎಂದು ನಿವೃತ್ತ ಪ್ರಾಧ್ಯಾಪಕ ಡಾ.ಎ.ಬಿ.ರಾಮಚಂದ್ರಪ್ಪ ಆತಂಕ ವ್ಯಕ್ತಪಡಿಸಿದರು.
    ಸಮಾನ ಮನಸ್ಕ ಸಂಘಟನೆಗಳೊಂದಿಗೆ ಸೌಹಾರ್ದ ಪರಂಪರೆ ಅಭಿಯಾನದಡಿ ಹುತಾತ್ಮರ ದಿನಾಚರಣೆ ಅಂಗವಾಗಿ ನಗರದ ಜಯದೇವ ವೃತ್ತದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸೌಹಾರ್ದ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಭಾರತ ಬಹುತ್ವದ, ಬಹುಸಂಸ್ಕೃತಿಯ ದೇಶ. ಆದರೆ ಇಲ್ಲಿ ಜಾತಿ-ಧರ್ಮದ ಹೆಸರಲ್ಲಿ ಏಕತ್ವದ ಹಾಗೂ ದ್ವೇಷದ ಬೀಜಗಳನ್ನು ಬಿತ್ತಲಾಗುತ್ತಿದೆ. ಸಾಮರಸ್ಯ-ಶಾಂತಿಯ ನೆಲದಲ್ಲಿ ಒಂದು ಧರ್ಮ, ಏಕ ದೇವರನ್ನು ನಂಬಿಸುವ ಜತೆಗೆ ಸಂವಿಧಾನವನ್ನೇ ಅತಂತ್ರಗೊಳಿಸುವ ಪ್ರಯತ್ನ ಪ್ರಭುತ್ವದಿಂದ ನಡೆಯುತ್ತಿದೆ ಎಂದು ದೂರಿದರು.
    ಭಾರತದ ತ್ರಿವರ್ಣ ಧ್ವಜವನ್ನು ತಾಲಿಬಾನ್ ಧ್ವಜ ಎಂಬುದಾಗಿ ಕೆಲ ರಾಜಕಾರಣಿಗಳು ಉದ್ದಟತನದಿಂದ ಮಾತನಾಡುತ್ತಿದ್ದಾರೆ. ಬಯಾಕ್‌ಲಾಗ್ ಹುದ್ದೆಗಳ ಮೀಸಲಾತಿ ರದ್ದುಪಡಿಸುವಂತೆ ಯುಜಿಸಿಯು ಹೊಸ ಆದೇಶ ಮಾಡಿರುವುದು ಕೂಡ ಸಂವಿಧಾನ ವಿರೋಧಿಯಾಗಿದೆ. ನಾವು ಶಾಂತಿ-ಸೌಹಾರ್ದ ಪರ ಇರುವವರು. ಹೀಗಾಗಿ ಧಾರ್ಮಿಕ ಮೂಲಭೂತವಾದ ಮೊಳೆಯಲು ಬೆಳೆಯುವುದಿಲ್ಲ ಎಂದರು.
    ಮುಖಂಡ ಇಮ್ತಿಯಾಜ್ ಹುಸೇನ್ ಮಾತನಾಡಿ 2014ರ ನಂತರವೇ ಭಾರತ ಜನ್ಮ ತಾಳಿದೆ ಎಂಬಂತೆ ಬಿಂಬಿಸಲಾಗುತ್ತಿದೆ. ಧಾರ್ಮಿಕ ನಶೆಯನ್ನು ಉತ್ತುಂಗದತ್ತ ಕೊಂಡೊಯ್ಯುವ ವಾತಾವರಣ ಸೃಷ್ಟಿಸಲಾಗುತ್ತಿದೆ. ಇದರ ವಿರುದ್ಧವಾಗಿ ಸಮಾನ ಮನಸ್ಕರು ಒಂದಾಗಬೇಕಿದೆ ಎಂದು ಹೇಳಿದರು.
    ವಕೀಲ ಬಿ.ಎಂ. ಹನುಮಂತಪ್ಪ ಮಾತನಾಡಿ ಮಹಾತ್ಮ ಗಾಂಧೀಜಿ ಹುತಾತ್ಮರಾದ ದಿನದಂದು ಸೌಹಾರ್ದ ಮಾನವ ಸರಪಳಿ ಕರ್ಯಕ್ರಮ ಆಚರಿಸುತ್ತಿದ್ದೇವೆ. ದೇಶದ ಶಾಂತಿ-ನೆಮ್ಮದಿಯ ದಿನಗಳಿಗಾಗಿ ನಾವು ಒಂದಾಗದಿದ್ದರೆ ದೇಶಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ ಎಂದು ಹೇಳಿದರು.
    ಎಐಟಿಯುಸಿ ರಾಜ್ಯ ಕಾರ್ಯದರ್ಶಿ ಆವರಗೆರೆ ಚಂದ್ರು ಮಾತನಾಡಿ ದೇಶದ ಶ್ರಮಿಕ ವರ್ಗ, ರೈತರ ಬಗ್ಗೆ ಮಾತನಾಡದ ಸರ್ಕಾರಗಳು ಕೇವಲ ಅಧಿಕಾರದತ್ತ ಕಣ್ಣು ಹಾಯಿಸಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.
    ಇದೇ ವೇಳೆ ಜಯದೇವ ವೃತ್ತದಲ್ಲಿ ಮಾನವ ಸರಪಳಿ ರಚಿಸಿದ ಮುಖಂಡರು, ಯುದ್ಧ ನಿಲ್ಲಿಸಿ ಶಾಂತಿ ಸ್ಥಾಪಿಸಿ, ಏಕತೆ ನಮ್ಮ ಶಕ್ತಿ, ಬಹುಸಂಸ್ಕೃತಿ ನಮ್ಮ ಶಕ್ತಿ, ಆಹಾರದ ಮೇಲಿನ ದಾಳಿ ನಿಲ್ಲಿಸಿ, ಸಮಸಮಾಜಕ್ಕೆ ದುಡಿಯುವುದೇ ದೇಶಭಕ್ತಿ ಮೊದಲಾದ ಘೋಷಣೆಗಳನ್ನು ಕೂಗಿದರು.
    ವಕೀಲರ ಸಂಘದ ಅಧ್ಯಕ್ಷ ಎಲ್.ಎಚ್.ಅರುಣ್‌ಕುಮಾರ್, ಕಬ್ಬು ಬೆಳೆಗಾರರ ಸಂಘದ ತೇಜಸ್ವಿ ಪಟೇಲ್, ರಾಜ್ಯ ರೈತ ಸಂಘದ ಹೊನ್ನೂರು ಮುನಿಯಪ್ಪ, ಕೆ.ಎಚ್.ಆನಂದರಾಜು, ಪರಶುರಾಂ, ಸತೀಶ್ ಅರವಿಂದ್, ಆವರಗೆರೆ ರುದ್ರಮುನಿ, ಕರಿಬಸಪ್ಪ, ಎಚ್. ಮಲ್ಲೇಶಪ್ಪ, ಬಾಷಾಸಾಬ್, ಇ. ಶ್ರೀನಿವಾಸ್, ಶಿವನಕೆರೆ ಬಸವಲಿಂಗಪ್ಪ, ನೇತ್ರಾವತಿ, ರಕ್ಷಿತಾ, ಸರೋಜಾ, ಶ್ರೀನಿವಾಸಮೂರ್ತಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts