More

    ಎರಡು ತಿಂಗಳಿಂದ ನೀಲಗಿರಿ ತೋಪಿನಲ್ಲಿ ವಾಸ್ತವ್ಯ!, ಕರೊನಾ ತಂದಿಟ್ಟ ಕರುಣಾಜನಕ ಜೀವನ ಸರ್ವೋದಯ ಸರ್ವೀಸ್ ಸೊಸೈಟಿ ಆಶ್ರಯ

    ವಿಜಯಪುರ: ಬಡವರ ಪಾಲಿಗಂತೂ ಶಾಪವಾಗಿಯೇ ಕಾಡಿದ ಕರೊನಾದಿಂದ ಕಂಗೆಟ್ಟ ಕುಟುಂಬವೊಂದು ಮನೆ ಬಾಡಿಗೆ ಕಟ್ಟಲು ಸಾಧ್ಯವಾಗದೆ ಎರಡು ತಿಂಗಳಿಂದ ನೀಲಗಿರಿ ತೋಪಿನಲ್ಲಿ ಸೊಳ್ಳೆಪರದೆಯನ್ನೇ ಮನೆಯಾಗಿಸಿಕೊಂಡು ಬದುಕು ಸವೆಸಿದ ಕರುಣಾಜನಕ ಕಥೆಯಿದು.

    ಹೌದು!..ವಿಜಯಪುರದ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ ಕುಟುಂಬವೊಂದು ಬಾಡಿಗೆ ಕಟ್ಟಲು ಸಾಧ್ಯವಾಗದೆ ಮನೆ ಖಾಲಿ ಮಾಡಿತ್ತು. ನಂತರ ಎಲ್ಲ ಕಡೆ ಅಲೆದಾಡಿ ಕೆಲಸ ಸಿಗದಿದ್ದಾಗ ಅಂತಿಮವಾಗಿ ಸೇರಿದ್ದು ನೀಲಗಿರಿ ತೋಪನ್ನು.

    ಪಟ್ಟಣದ 1ನೇ ವಾರ್ಡ್ ಜಯಮಹಲ್ ಲೇ ಔಟ್ ಬಳಿಯಿರುವ ನೀಲಗಿರಿ ತೋಪಿನಲ್ಲಿ ಆಶ್ರಯ ಪಡೆದಿದ್ದ ಮಂಜಮ್ಮ ಎಂಬ ಮಹಿಳೆ, ತನ್ನ ಇಬ್ಬರು ಹೆಣ್ಣು ಮಕ್ಕಳು ಹಾಗೂ ಒಬ್ಬ ಮಗನೊಂದಿಗೆ ಜೀವನ ದೂಡುತ್ತಿದ್ದರು. ಸೊಳ್ಳೆ ಪರದೆಯನ್ನೆ ಮನೆಯಾಕಾರದಲ್ಲಿ ಆಶ್ರಯ ಮಾಡಿಕೊಂಡು ವಾಸ ಮಾಡುತ್ತಿರುವ ಬಗ್ಗೆ ಜ.27ರ ಸಂಜೆ ಸಿಕ್ಕಿದ ಮಾಹಿತಿ ಮೇರೆಗೆ ಅನಾಥ ಕುಟುಂಬಕ್ಕೆ ಆಶ್ರಯ ದೊರಕಿಸಿಕೊಡಲಾಗಿದೆ. ಆ ಮಹಿಳೆಯ ಕುಟುಂಬವೀಗ ಸರ್ವೋದಯ ಸರ್ವೀಸ್ ಸೊಸೈಟಿ ಆಶ್ರಯಕ್ಕೆ ಬಂದಿದೆ. ಮಕ್ಕಳ ಸಹಾಯವಾಣಿ ಹಾಗೂ ಸಾವಿತ್ರಿ ಬಾ ಫುಲೆ ಚಾರಿಟಬಲ್ ಟ್ರಸ್ಟ್ ಹಾಗೂ ಸ್ಥಳೀಯರ ಸಹಕಾರದಿಂದ ಈ ತಾತ್ಕಾಲಿಕ ಆಶ್ರಯ ಸಾಧ್ಯವಾಗಿದೆ.
    ಮನೆ ಕೆಲಸ ಮಾಡಿಕೊಂಡು ಮೂವರು ಮಕ್ಕಳನ್ನು ಸಾಕುವ ಜವಾಬ್ದಾರಿ ಹೊತ್ತಿದ್ದ ಮಹಿಳೆ ಪೌಷ್ಟಿಕ ಆಹಾರ, ಮೂಲಸೌಲಭ್ಯವಿಲ್ಲದೆ ಬಳಲಿದ್ದ ದೃಶ್ಯ ಎಂಥವರ ಮನಸ್ಸನ್ನು ಕಲುಕುವಂತಿತ್ತು ಎಂಬುದು ಸ್ಥಳೀಯರ ನೋವಿನ ಮಾತಾಗಿದೆ.

    ಆರಂಭದಲ್ಲಿ ನಕಾರ: ಕುಟುಂಬವನ್ನು ಮನವೊಲಿಸಲು ಪ್ರಯತ್ನಿಸಿದಾಗ ಆರಂಭದಲ್ಲಿ ಎಲ್ಲಿಗೂ ಹೋಗಲಿಕ್ಕೆ ಒಪ್ಪದೇ ಮಹಿಳೆ ಮಕ್ಕಳನ್ನು ಕರೆದುಕೊಂಡು ಪರಾರಿಯಾಗಲು ಯತ್ನಿಸಿದರು ಎನ್ನಲಾಗಿದೆ. ಆದರೆ ಸ್ಥಳೀಯರ ಸಹಕಾರದಿಂದ ಮನವೊಲಿಸಲಾಯಿತು ಎನ್ನಲಾಗಿದೆ.
    ಸಾವಿತ್ರಿ ಬಾ ಫುಲೆ ಚಾರಿಟಬಲ್ ಟ್ರಸ್ಟ್ ಸಂಸ್ಥಾಪಕಿ ಎಸ್.ರವಿಕಲಾ ಹಾಗೂ ಸರ್ವೋದಯ ಸರ್ವೀಸ್ ಸೊಸೈಟಿಯ ಈರಣ್ಣ, ಸಹಕಾರದಿಂದ ಚಂದೇನಹಳ್ಳಿ ಗೇಟ್‌ನಲ್ಲಿರುವ ಸರ್ವೋದಯ ಸರ್ವೀಸ್ ಸೊಸೈಟಿಗೆ ದಾಖಲಿಸಲಾಗಿದೆ, ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಎಲ್ಲರಿಗೂ ಆರೋಗ್ಯ ತಪಾಸಣೆ ಮಾಡಿಸಿದ್ದು ಎಲ್ಲರೂ ಆರೋಗ್ಯವಾಗಿದ್ದಾರೆ ಎನ್ನಲಾಗಿದೆ. ಹಲವು ತಿಂಗಳಿಂದ ಹೊಟ್ಟೆತುಂಬ ಊಟವನ್ನೇ ಕಾಣದ ಕುಟುಂಬ ಸೊಸೈಟಿಯಲ್ಲಿ ತೃಪ್ತಿಯಿಂದ ಊಟ ಮಾಡಿದ್ದು ನೆರೆದಿದ್ದವರ ಕಣ್ಣಾಲಿಗಳನ್ನು ಒದ್ದೆಯಾಗಿಸಿತು ಎಂದು ಸಿಬ್ಬಂದಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts