More

    ಎಪಿಎಂಸಿ ವಹಿವಾಟು ಸಂಪೂರ್ಣ ಬಂದ್

    ಹುಬ್ಬಳ್ಳಿ: ಕೃಷಿ ಉತ್ಪನ್ನ ಮಾರುಕಟ್ಟೆ ಶುಲ್ಕವನ್ನು (ಎಪಿಎಂಸಿ ಸೆಸ್) ಏಕಾಏಕಿ 1 ರೂ.ಗೆ ಹೆಚ್ಚಿಸಿರುವ ಆದೇಶವನ್ನು ರಾಜ್ಯ ಸರ್ಕಾರ ಹಿಂಪಡೆಯಬೇಕು ಎಂದು ಆಗ್ರಹಿಸಿ ಹುಬ್ಬಳ್ಳಿ ಎಪಿಎಂಸಿ ವ್ಯಾಪಾರಸ್ಥರು ಸೋಮವಾರ ವಹಿವಾಟು ಬಂದ್ ಮಾಡಿ ಪ್ರತಿಭಟನೆ ನಡೆಸಿದರು.

    ಸೋಮವಾರ ಬೆಳಗ್ಗೆ ಎಪಿಎಂಸಿ ವ್ಯಾಪಾರಸ್ಥರ ಸಂಘದಲ್ಲಿ ಸೇರಿದ ನೂರಾರು ವರ್ತಕರು ಒಂದು ದಿನ ಸಾಂಕೇತಿಕವಾಗಿ ವ್ಯಾಪಾರ ವಹಿವಾಟು ಬಂದ್ ಮಾಡಿ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲು ನಿರ್ಧರಿಸಿದರು.

    ಈ ಸಂದರ್ಭದಲ್ಲಿ ಮಾತನಾಡಿದ ವ್ಯಾಪಾರಸ್ಥರ ಸಂಘದ ಅಧ್ಯಕ್ಷ ಬಸವರಾಜ ಯಕಲಾಸಪುರ, ಚನ್ನು ಹೊಸಮನಿ, ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆ ಅಧ್ಯಕ್ಷ ಮಹೇಂದ್ರ ಲದ್ದಡ, ಪ್ರಭುಲಿಂಗಪ್ಪ ಅಂಕಲಕೋಟಿ, ಡಿ. 23ರಂದು ಬೆಂಗಳೂರಿನಲ್ಲಿ ರಾಜ್ಯದ ಎಲ್ಲ ಜಿಲ್ಲೆಗಳ ವರ್ತಕರು ಸಭೆ ಸೇರಿ ಮುಂದಿನ ಹೋರಾಟದ ರೂಪುರೇಷೆ ಸಿದ್ಧಪಡಿಸಲಿದ್ದಾರೆ. ಅದಕ್ಕಿಂತ ಮೊದಲು ಒಂದು ದಿನ ವ್ಯಾಪಾರ ವಹಿವಾಟು ಬಂದ್ ಮಾಡಿ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆ ನೀಡಲಾಗುತ್ತಿದೆ ಎಂದರು. ಹಲವು ಹೋರಾಟ, ಪ್ರತಿಭಟನೆಗಳ ನಂತರ ರಾಜ್ಯ ಸರ್ಕಾರ ಎಪಿಎಂಸಿ ಸೆಸ್ ಅನ್ನು ಶೇ.0.35ಕ್ಕೆ ನಿಗದಿಪಡಿಸಿತ್ತು. ಆದರೆ, ಡಿ. 15ರಿಂದ ಏಕಾಏಕಿ ಅದನ್ನು ಶೇ.1ಕ್ಕೆ ಹೆಚ್ಚಿಸಲಾಗಿದೆ. ಇದು ಸಮಂಜಸವಲ್ಲ ಎಂದು ವರ್ತಕರು ದೂರಿದರು. ‘ಸೆಸ್ ಅಳಿಸಿ ಎಪಿಎಂಸಿ ಉಳಿಸಿ, ಎಪಿಎಂಸಿಗೆ ಏಕರೂಪ ಕಾಯ್ದೆ ಜಾರಿ ಮಾಡಿ’ ಎಂದು ಘೋಷಣೆ ಕೂಗಿದರು. ಆಲೂಗಡ್ಡೆ, ಉಳ್ಳಾಗಡ್ಡಿ, ಆಹಾರ ಧಾನ್ಯ, ಹಣ್ಣು- ತರಕಾರಿ ಸೇರಿ ಎಲ್ಲ ವರ್ತಕರು ಪ್ರತಿಭಟನೆಯಲ್ಲಿ ಭಾಗಿಯಾಗಿ ಧಾರವಾಡ ಜಿಲ್ಲಾಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದರು. ಧಾರವಾಡ ಜಿಲ್ಲೆಯ ಯಾವ ಎಪಿಎಂಸಿಯಲ್ಲೂ ವಹಿವಾಟು ನಡೆಯಲಿಲ್ಲ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts