More

    ಎತ್ತು ಮಾರಲು ಮುಂದಾದ ರೈತ

    ಮಲ್ಲು ಕಳಸಾಪುರ ಲಕ್ಷ್ಮೇಶ್ವರ

    ಮುಂಗಾರಿನಲ್ಲಿ ಅತಿಯಾದ ಮಳೆಯಿಂದ ಶೇಂಗಾ, ಹೆಸರು, ಅಲಸಂದಿ ಬೆಳೆ ಕೊಳೆತು ಹಾಳಾಗಿದ್ದರಿಂದ ದನಕರುಗಳಿಗೆ ಹೊಟ್ಟು- ಮೇವಿನ ಕೊರತೆಯಾಗಿದೆ. ಕರೊನಾ ಸಂಕಷ್ಟದ ಜತೆಗೆ ಹಿಂಗಾರಿನಲ್ಲಿ ಕೃಷಿ ಚಟುವಟಿಕೆ ಕ್ಷೀಣಿಸಿವೆ. ಇದರಿಂದ ಬೇಸತ್ತ ರೈತರು ತಮ್ಮ ಜೀವನಾಡಿ ಎತ್ತುಗಳನ್ನು ಮಾರಾಟ ಮಾಡುತ್ತಿರುವುದು ಪಟ್ಟಣದ ಶುಕ್ರವಾರದ ಜಾನುವಾರು ಸಂತೆಯಲ್ಲಿ ಕಂಡುಬರುತ್ತಿದೆ.

    ರೈತರು ಇತ್ತೀಚಿನ ವರ್ಷಗಳಲ್ಲಿ ಬಿಟಿ ಹತ್ತಿ, ಮೆಣಸಿನಕಾಯಿ, ಉಳ್ಳಾಗಡ್ಡಿ ಮತ್ತಿತರ ವಾಣಿಜ್ಯ ಬೆಳೆಗಳತ್ತ ವಾಲಿರುವುದು ಕೂಡ ಮೇವಿನ ಅಭಾವಕ್ಕೆ ಕಾರಣವಾಗಿದೆ. ಸದ್ಯದ ಪರಿಸ್ಥಿತಿಯಲ್ಲಿ ಶೇಂಗಾ ಹೊಟ್ಟು, ಜೋಳದ ಮೇವು ಸಿಗುತ್ತಿಲ್ಲ. ಕಡಿಮೆ ಗುಣಮಟ್ಟದ 1 ಟ್ರ್ಯಾಕ್ಟರ್ ಶೇಂಗಾ ಹೊಟ್ಟಿಗೆ 12ರಿಂದ 15 ಸಾವಿರ ರೂ. ದರವಿದೆ. ದನಕರುಗಳ ಆರೋಗ್ಯದ ಮೇಲೆ ಪರಿಣಾಮ ಬೀರುವ ಗೋವಿನಜೋಳ ಮೇವೇ ಸದ್ಯ ಗತಿಯಾಗಿದೆ.

    ಖರೀದಿಗಿಂತ ಮಾರುವವರೇ ಹೆಚ್ಚು: ಮುಂಗಾರಿನ ಕೃಷಿ ಚಟುವಟಿಕೆ ಆರಂಭಕ್ಕೂ ಮುನ್ನ 6 ತಿಂಗಳವರೆಗೆ 2 ಎತ್ತುಗಳನ್ನು ಸಾಕಲು ಅಂದಾಜು 50 ಸಾವಿರ ರೂ. ನೀಡಿ ಹೊಟ್ಟು- ಮೇವು ಖರೀದಿಸಬೇಕು. ಹಣ ಇಲ್ಲದಿರುವುದು ಮೇಲಾಗಿ ಎತ್ತುಗಳ ನಿರ್ವಹಣೆಗೆ ಒಬ್ಬರು ಬೇಕಾಗಿದ್ದರಿಂದ ಮಾರುತ್ತಿದ್ದಾರೆ. ಮುಂಗಾರಿನಲ್ಲಿ 10 ಸಾವಿರ ರೂ. ಹೆಚ್ಚಾದರೂ ಖರೀದಿಸಬಹುದು ಎನ್ನುತ್ತಾರೆ ರೈತರು. ಇದರಿಂದ ಮಾರುಕಟ್ಟೆಯಲ್ಲಿ ಕೊಳ್ಳುವವರಿಗಿಂತ ಮಾರುವವರೇ ಹೆಚ್ಚಾಗಿದ್ದರಿಂದ ಎತ್ತುಗಳ ಬೆಲೆ ಕಡಿಮೆಯಾಗಿದೆ.

    ಎತ್ತುಗಳ ಕಾಲು, ಸುಳಿ, ಹಲ್ಲುಗಳ ಆಧಾರದಲ್ಲಿ ಬೆಲೆ ನಿಗದಿಯಾಗುತ್ತದೆ. ರೈತರು ಮುಂಗಾರಿನಲ್ಲಿ 60 ಸಾವಿರ ರೂ.ಗೆ ಖರೀದಿಸಿದ ಎತ್ತುಗಳನ್ನು ಈಗ 40 ಸಾವಿರ ರೂ. ಗೆ, 80 ಸಾವಿರ ರೂ. ಕಿಮ್ಮತ್ತಿನ ಎತ್ತುಗಳನ್ನು 65ರಿಂದ 70 ಸಾವಿರ ರೂ. ಗೆ ಮಾರುತ್ತಿದ್ದಾರೆ. ಇದರ ಮಧ್ಯೆ ಹೊಟ್ಟು- ಮೇವು ವ್ಯವಸ್ಥೆ ಇರುವ ಕೆಲವರು ಕಡಿಮೆ ಬೆಲೆಗೆ ಸಿಗುತ್ತವೆ ಎಂಬ ಉದ್ದೇಶದಿಂದ ದನಕರುಗಳ ಖರೀದಿಗೆ ಮುಂದಾಗಿದ್ದಾರೆ.

    800-1,000 ದನಕರುಗಳು: ಲಕ್ಷೆ್ಮೕಶ್ವರದಲ್ಲಿ ನಡೆಯುವ ಶುಕ್ರವಾರದ ಜಾನುವಾರು ಸಂತೆಗೆ ಮಾರಾಟಕ್ಕಾಗಿ ಲಕ್ಷೆ್ಮೕಶ್ವರ, ಕುಂದಗೋಳ, ಶಿಗ್ಗಾಂವಿ, ಸವಣೂರ, ರಾಣೆಬೆನ್ನೂರ, ಶಿರಹಟ್ಟಿ, ಗದಗ ತಾಲೂಕುಗಳಿಂದ ಎತ್ತು, ಆಕಳು, ಎಮ್ಮೆ ಸೇರಿ 800 ರಿಂದ 1,000 ಜಾನುವಾರುಗಳು ಬರುತ್ತವೆ. ಇವುಗಳ ಖರೀದಿಗಾಗಿ ಹಾವೇರಿ, ಧಾರವಾಡ, ಗದಗ ಜಿಲ್ಲೆಗಳಿಂದ ವ್ಯಾಪಾರಸ್ಥರು, ದಲ್ಲಾಳಿಗಳು ಬರುತ್ತಾರೆ. ದಲ್ಲಾಳಿಗಳಿಗೆ ನಿಗದಿತ ಕಮಿಷನ್ ಇಲ್ಲ. ಆದರೂ ರೈತರು ಮತ್ತು ವ್ಯಾಪಾರಸ್ಥರಿಂದ ಒಂದು ಜಾನುವಾರಿಗೆ 200 ರಿಂದ 1,000 ರೂ. ವರೆಗೆ ಕಮಿಷನ್ ಗಿಟ್ಟಿಸಿಕೊಳ್ಳುತ್ತಾರೆ.

    ಮುಂಗಾರಿನಲ್ಲಿ ಮಳೆಯಿಂದ ಶೇಂಗಾ ಬೆಳೆ ಹಾಳಾಗಿದ್ದರಿಂದ ಹೊಟ್ಟಿನ ವ್ಯವಸ್ಥೆಯಾಗಲಿಲ್ಲ. ಮುಂದಿನ ಹಂಗಾಮಿನವರೆಗೂ ಎತ್ತುಗಳನ್ನು ಜೋಪಾನ ಮಾಡುವುದು ಕಷ್ಟ. ಅವುಗಳ ಚಾಕರಿ ಮಾಡಲು ಒಬ್ಬರು ಬೇಕು. ಜೀವನ ನಡೆಸಲು ಕೂಲಿ ಮಾಡಬೇಕು. ಅನಿವಾರ್ಯವಾಗಿ ಎತ್ತುಗಳನ್ನು ಮಾರುತ್ತೇನೆ. ಹಂಗಾಮಿನಲ್ಲಿ ಬೆಲೆ ಸ್ವಲ್ಪ ಹೆಚ್ಚಾದರೂ ಖರೀದಿಸುತ್ತೇನೆ.
    | ಬಸವರಾಜ ಬಳಗಾನೂರ, ಲಕ್ಷ್ಮೇಶ್ವರ ರೈತ

    ಹೊಟ್ಟು- ಮೇವಿನ ಕೊರತೆಯಿಂದ ಎತ್ತುಗಳು ಕಡಿಮೆ ಬೆಲೆಗೆ ಸಿಗುತ್ತವೆ. ಹಿಂಗಾರಿನಲ್ಲಿ ಬಿಳಿ ಜೋಳ ಬೆಳೆದಿದ್ದು, ಹಸಿರು ಮೇವು ತಂದು ಮೇಯಿಸಿದರೆ ಮುಂಗಾರಿಗೆ ಹೊಲ ಬದುಕು ಮಾಡಲು ಬರುತ್ತವೆ. ಕಡಿಮೆ ಬೆಲೆಯಲ್ಲಿ ಎತ್ತುಗಳನ್ನು ಖರೀದಿಸುತ್ತಿದ್ದೇನೆ.
    | ಈರಣ್ಣ ಬಿಂಕದಕಟ್ಟಿ, ಲಕ್ಷ್ಮೇಶ್ವರ ರೈತ

    ಕರೊನಾ ಹಿನ್ನೆಲೆಯಲ್ಲಿ 4 ತಿಂಗಳು ಕಾಲ ಜಾನುವಾರು ಸಂತೆ ಸ್ಥಗಿತಗೊಳಿಸಲಾಗಿತ್ತು. ಕಳೆದ ಮೂರ್ನಾಲ್ಕು ವಾರಗಳಿಂದ ಲಕ್ಷೆ್ಮೕಶ್ವರಕ್ಕೆ ಸುತ್ತಲಿನ ತಾಲೂಕುಗಳಿಂದ 500ಕ್ಕೂ ಹೆಚ್ಚು ದನಕರುಗಳನ್ನು ತರುತ್ತಿದ್ದಾರೆ. ಮಾರಾಟವಾಗುವ ಜಾನುವಾರುಗಳಿಗೆ ಮಾತ್ರ 5 ರೂ. ಶುಲ್ಕ ವಿಧಿಸುತ್ತೇವೆ. ಈ ಶುಕ್ರವಾರ 20 ಜಾನುವಾರುಗಳ ಶುಲ್ಕ ಪಡೆಯಲಾಗಿದೆ.
    | ಎನ್.ಎ. ಲಕ್ಕುಂಡಿ ಎಪಿಎಂಸಿ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts