More

    ಎಂ.ಬಿ. ಪಾಟೀಲರಿಂದ ಗಾಣಿಗರಿಗೆ ಅನ್ಯಾಯ ! ಮಲ್ಲಿಕಾರ್ಜುನ ಲೋಣಿ ಗಂಭೀರ ಆರೋಪ

    ವಿಜಯಪುರ: ಮಾಜಿ ಸಚಿವ ಎಂ.ಬಿ.ಪಾಟೀಲ ಹೊಂದಾಣಿಕೆ ರಾಜಕಾರಣದ ಮೂಲಕ ಸಣ್ಣ ಸಮುದಾಯಗಳನ್ನು ರಾಜಕೀಯವಾಗಿ ಬೆಳೆಯಗೊಡದೆ ಸಾಮಾಜಿಕ ನ್ಯಾಯದ ಕಗ್ಗೊಲೆ ಮಾಡುತ್ತಿದ್ದಾರೆಂದು ವಿಧಾನ ಪರಿಷತ್‌ನ ಪರಾಜಿತ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ಆಪಾದಿಸಿದರು.
    ನಡೆದಾಡುವ ದೇವರು ಸಿದ್ಧೇಶ್ವರ ಸ್ವಾಮಿ ಅವರ ಜೊತೆ ಗುರುತಿಸಿಕೊಂಡು, ಬಸವೇಶ್ವರ ಅವರ ಹೆಸರು ತೆಗೆದುಕೊಡು ರಾಜಕಾರಣ ಮಾಡುತ್ತೀರಲ್ಲ. ಅವರ ಒಂದಂಶವಾದರೂ ನೀವು ಪಾಲಿಸುತ್ತೀರಾ? ನೀವೇನು ಶ್ರೀರಾಮ ಚಂದ್ರರಾ? ನೀವೆಷ್ಟು ಹೀನ ರಾಜಕಾರಣಕ್ಕೆ ಇಳಿದಿದ್ದೀರಿ ಎಂದು ಆತ್ಮಾವಲೋಕನ ಮಾಡಿಕೊಳ್ಳಿ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಅವರು ಹರಿಹಾಯ್ದರು.
    ಗಾಣಿಗ ಸಮುದಾಯಕ್ಕೆ ತಾವೇನು ಅನ್ಯಾಯ ಮಾಡಿದ್ದೀರಿ ಎಂಬುದನ್ನು ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ದಾಖಲೆ ಸಮೇತ ತಿಳಿಸುವೆ. ನಮ್ಮ ಸಮುದಾಯದ ಎಸ್.ಕೆ. ಬೆಳ್ಳುಬ್ಬಿ, ಲಕ್ಷ್ಮಣ ಸವದಿ, ಬಿ.ಜಿ. ಪಾಟೀಲ ಹಲಸಂಗಿ, ಸಿದ್ದು ನ್ಯಾಮಗೌಡ ಅವರ ಬೆಳವಣಿಗೆಗೆ ಅಡ್ಡಿಯಾಗಿದ್ದೀರಿ. ಅಥಣಿ ಚುನಾವಣೆಯಲ್ಲಿ ಸವದಿ ಅವರನ್ನು ಸೋಲಿಸಲು ಏನೆಲ್ಲ ಪ್ರಯತ್ನ ಮಾಡಿದ್ದೀರಿ ಎಂಬುದನ್ನು ಬರುವ ದಿನಗಳಲ್ಲಿ ಬಹಿರಂಗಪಡಿಸುತ್ತೇನೆಂದರು.
    ವಿಧಾನ ಪರಿಷತ್ ಚುನಾವಣೆ ಸಂದರ್ಭ ಸೋಮನಾಥ ಬಾಗಲಕೋಟೆ ಅವರ ಮೂಲಕ ಭಾಷಣ ಮಾಡಿಸಿ ನಮ್ಮ ಸಮುದಾಯದ ದಾರಿ ತಪ್ಪಿಸುವ ಪ್ರಯತ್ನ ಮಾಡಿದಿರಿ. ಪರಸಪ್ಪ ತೇಲಿ, ಬಾಬು ಸಾಹುಕಾರ ಮೇತ್ರಿ ಇವರಿಗೆ ಎಂ.ಬಿ. ಪಾಟೀಲ ಅವರು ಅವಕಾಶ ಕೊಟ್ಟು ಉಪಕಾರ ಮಾಡಿದ್ದಾರೆಂದು ಸೋಮನಾಥ ಬಾಗಲಕೋಟೆ ಅವರಿಂದ ಹೇಳಿಸಿದಿರಿ. ಅದೇ ಸೋಮನಾಥ ಬಾಗಲಕೋಟೆ ಅವರನ್ನು ನಾನು ಕೇಳ ಬಯಸುವುದಿಷ್ಟೆ, ನಿಮ್ಮ ಸಮಾಜದ ಎಷ್ಟು ಜನರನ್ನು ಇವರು ಬೆಳೆಸಿದ್ದಾರೆಂಬುದು ಬಹಿರಂಗ ಚರ್ಚೆಗೆ ಬನ್ನಿ ಎಂದು ಸವಾಲೆಸೆದರು.
    ನಾನು ಗಾಣಿಗ ಸಮಾಜದ ರಾಜ್ಯ ಘಟಕದ ಅಧ್ಯಕ್ಷನಿದ್ದು ಎಂ.ಬಿ. ಪಾಟೀಲ ಅವರು ನಮ್ಮ ಸಮಾಜಕ್ಕೆ ಮಾಡಿದ ಅನ್ಯಾದ ಬಗ್ಗೆ ಮುಂದಿನ ದಿನಗಳಲ್ಲಿ ಸಮಾಜವನ್ನು ಎಚ್ಚರಿಸುವ ಕೆಲಸ ಮಾಡುವೆ. ನಮ್ಮ ಸಮಾಜ ಸಂಘಟನೆಯಲ್ಲಿ ಕೆಲವು ಪಟ್ಟ ಭದ್ರ ಹಿತಾಸಕ್ತಿಗಳು ಸಮಾಜ ಒಡೆಯುವ ಕೆಲಸ ಮಾಡುತ್ತಿವೆ. ಕೆಲವರು ಸಮಾಜದಲ್ಲಿ ಜಗಳ ಹಚ್ಚುವುದು, ಒಡಕು ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಈ ಬಗ್ಗೆ ಸಮಾಜದವರಿಗೆ ಮನವರಿಕೆ ಮಾಡುವೆ ಎಂದು ಲೋಣಿ ತಿಳಿಸಿದರು.
    ಎಂ.ಬಿ. ಪಾಟೀಲ ಅವರು ಗಾಣಿಗ, ಹಾಲುಮತ ಸಮಾಜ, ದಲಿತ, ಲಂಬಾಣಿ, ಮುಸ್ಲಿಂ ಸಮಾಜವನ್ನು ಮತಕ್ಕಾಗಿ ಬಳಸಿಕೊಳ್ಳುತ್ತಾರೆ. ಪ್ರಕಾಶ ರಾಠೋಡ ಅವರನ್ನು ಲೋಕಸಭೆ ಚುನಾವಣೆಗೆ ನಿಲ್ಲಿಸಿ ಚುನಾವಣೆ ಮಾಡಲಿಲ್ಲ. ಬಾಗವಾನ ಅವರ ಟಿಕೆಟ್ ತಪ್ಪಿಸಿ ಹೊಂದಾಣಿಕೆ ರಾಜಕಾರಣ ಮಾಡಿದರು. ಸಿಂದಗಿ ಉಪ ಚುನಾವಣೆಯಲ್ಲೂ ಪಕ್ಷದ ಪರ ಕೆಲಸ ಮಾಡಲಿಲ್ಲ. ನಾಗಠಾಣ ಕ್ಷೇತ್ರದಲ್ಲಿ ರಾಜು ಆಲಗೂರ ಅವರ ಟಿಕೆಟ್ ತಪ್ಪಿಸಿ ವಿಠಲ ಕಟಕಧೋಂಡ ಅವರನ್ನು ನಿಲಿಸಿ ಸೋಲಿಸಿದರು. ವಿಧಾನ ಪರಿಷತ್ ಚುನಾವಣೆಯಲ್ಲಿ ನನಗೂ ಅನ್ಯಾಯ ಮಾಡಿದರು. ಬಿ.ಜಿ. ಪಾಟೀಲ ಹಲಸಂಗಿ ಅವರಿಗೂ ಅನ್ಯಾಯ ಮಾಡಿ ತಮ್ಮ ಸಹೋದರನಿಗೆ ಟಿಕೆಟ್ ಕೊಡಿಸಿದರು. ಇದನ್ನು ಜನ ಗಮನಿಸುತ್ತಿದ್ದಾರೆಂದರು.
    ಅಶ್ಲೀಲ ವಿಡಿಯೋ ಪ್ರಕರಣ:
    ವಿಧಾನ ಪರಿಷತ್ ಚುನಾವಣೆ ಸಂದರ್ಭ ಕೊನೇ ಘಳಿಗೆಯಲ್ಲಿ ಅಶ್ಲೀಲ ಚಿತ್ರ ಬಿಡುಗಡೆ ಮಾಡಿದ ವಿಷಯಕ್ಕೆ ಸಂಬಂಧಿಸಿದಂತೆ ಡಿ.25 ರಂದು ಪೊಲೀಸ್ ಪ್ರಕರಣ ದಾಖಲಿಸಿದ್ದೇನೆ. ತನಿಖೆ ಬಳಿಕ ಯಾರು ತಪ್ಪಿತಸ್ಥರಿದ್ದಾರೋ ಅವರ ಮೇಲೆ ಮಾನ ನಷ್ಟ ಮೊಕದ್ದಮೆ ಹೂಡುತ್ತೇನೆಂದ ಲೋಣಿ, ಈ ವಿಷಯದಲ್ಲೂ ಮುಂದಿನ 2023ರ ವಿಧಾನ ಸಭೆ ಚುನಾವಣೆ ವೇಳೆ ಕೆಲವು ಮಹತ್ವ ದಾಖಲೆಗಳನ್ನು ಬಿಡುಗಡೆಗೊಳಿಸುವೆ ಎಂದರು.
    ವಿಧಾನ ಪರಿಷತ್ ಚುನಾವಣೆಗೆ ಮುನ್ನವೇ ನನ್ನ ಮಾನ ಹರಾಜು ಹಾಕುವುದಾಗಿ ಜಿಲ್ಲೆಯ ಪ್ರಭಾವಿ ರಾಜಕಾರಣಿ ನನ್ನ ಸಂಬಂಧಿಕರಿಗೆ ಬೆದರಿಕೆ ಹಾಕಿದ್ದರು. ಈ ಬಗ್ಗೆ ಸಾಕಷ್ಟು ಬಾರಿ ನಾನು ಸಹ ಪ್ರಸ್ತಾಪಿಸುತ್ತಲೇ ಬಂದಿದ್ದೆ. ಕೊನೇ ಘಳಿಗೆಯಲ್ಲಿ ಸದಸ್ಯರಿಗೆ ಅಶ್ಲೀಲ ಸಿಡಿ ಬಿಡುಗಡೆ ಮಾಡಿದರು. ವಿಡಿಯೋದಲ್ಲಿ ಇದು ಮಲ್ಲಿಕಾರ್ಜುನ ಲೋಣಿ ಅವರದ್ದೇ ಎಂದು ಬರೆದಿದ್ದಾರೆ. ಹೀಗಾಗಿ ದೂರು ದಾಖಲಿಸಿದ್ದೇನೆ. ಪೊಲೀಸ್ ಇಲಾಖೆ ಅವರು ಮಾಜಿ ಗೃಹ ಸಚಿವರು ಹಾಗೂ ಹಾಲಿ ರಾಷ್ಟ್ರೀಯ ಪಕ್ಷಗಳ ನಾಯಕರ ಒತ್ತಡಕ್ಕೆ ಮಣಿಯದೇ ಪ್ರಾಮಾಣಿಕವಾಗಿ ತನಿಖೆ ನಡೆಸಬೇಕೆಂದರು.
    ಮುಖಂಡರಾದ ಪ್ರದೀಪ ಪಾಟೀಲ, ಎಂ.ಎಚ್. ಪಠಾಣ, ವಿಠಲ ಕತ್ನಳ್ಳಿ, ಕಾಂತು ಇಂಚಗೇರಿ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts