More

    ಉ.ಕ. ಜಿಲ್ಲೆಯಲ್ಲಿ 231 ಗ್ರಾಪಂಗೆ ಚುನಾವಣೆ

    ಕಾರವಾರ: ಗ್ರಾಮ ಪಂಚಾಯಿತಿ ಚುನಾವಣೆಗೆ ದಿನಾಂಕ ನಿಗದಿಯಾಗಿದ್ದು, ಹಳ್ಳಿ ರಾಜಕೀಯ ಚುರುಕು ಪಡೆದುಕೊಂಡಿದೆ. ಜಿಲ್ಲೆಯಲ್ಲಿ 231 ಗ್ರಾ.ಪಂ.ಗಳಿದ್ದು, 1,394 ಮತಗಟ್ಟೆಗಳಿವೆ. 4.38 ಲಕ್ಷ ಪುರುಷರು, 4.26 ಲಕ್ಷ ಮಹಿಳೆಯರು. ಸೇರಿ ಒಟ್ಟು 8.65 ಲಕ್ಷ ಮತದಾರಿದ್ದಾರೆ. ಜಿಲ್ಲಾಡಳಿತ ಈಗಾಗಲೇ ಚುನಾವಣೆಗೆ ಅಗತ್ಯ ಸಿದ್ಧತೆ ಮಾಡಿಕೊಂಡಿದೆ.

    ಜಿಲ್ಲೆಯ ಕರಾವಳಿಯ 5 ತಾಲೂಕುಗಳ 105 ಗ್ರಾಪಂಗಳಿಗೆ ಡಿ. 7ರಿಂದ ನಾಮಪತ್ರ ಸಲ್ಲಿಕೆ ಪ್ರಾರಂಭವಾಗಲಿದೆ. 11ರಂದು ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕವಾಗಿದ್ದು, 12 ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. 14ರಂದು ಉಮೇದುವಾರಿಕೆ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. ಡಿ. 22 ರಂದು ಮತದಾನ, ಅಗತ್ಯವಿದ್ದಲ್ಲಿ 24ರಂದು ಮರು ಮತದಾನ ನಡೆಯಲಿದೆ.

    ಘಟ್ಟದ ಮೇಲಿನ 6 ತಾಲೂಕುಗಳ 126 ಗ್ರಾಪಂಗಳಿಗೆ ಡಿ. 11ರಿಂದ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಲಾಗಿದೆ. 16 ರಂದು ಕೊನೆಯ ದಿನವಾಗಿದ್ದು, 17ರಂದು ನಾಮಪತ್ರ ಪರಿಶೀಲನೆ ನಡೆಯಲಿದೆ. 19ರಂದು ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಾಗಿದೆ. 27ರಂದು ಮತದಾನ ನಡೆಯಲಿದೆ. ಅಗತ್ಯವಿದ್ದಲ್ಲಿ 29ರಂದು ಮರು ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ.

    ಪಕ್ಷಗಳ ಉತ್ಸಾಹ:
    ಹಿಂದಿನ ಅವಧಿಗಳಿಗಿಂತ ಈ ಬಾರಿ ರಾಜಕೀಯ ಪಕ್ಷಗಳು ಗ್ರಾಪಂ ಚುನಾವಣೆಗೆ ಹೆಚ್ಚು ಆಸಕ್ತಿ ತೋರುತ್ತಿವೆ. ನೇರವಾಗಿ ಪಕ್ಷಗಳ ಹೆಸರಿನಲ್ಲಿ ಸ್ಪರ್ಧೆ ಇಲ್ಲದಿದ್ದರೂ ಬೆಂಬಲಿತ ಅಭ್ಯರ್ಥಿಗಳನ್ನು ಎಲ್ಲೆಡೆ ನಿಲ್ಲಿಸುವ ಬಗ್ಗೆ ಕಾಂಗ್ರೆಸ್ ಹಾಗೂ ಬಿಜೆಪಿ ಭಾರಿ ತಯಾರಿ ನಡೆಸಿವೆ.

    ಚುನಾವಣೆಯ ದಿನಾಂಕ:
    ಮೊದಲ ಹಂತದ ಮತದಾನ (ಡಿ. 22)
    ತಾಲೂಕು ಗ್ರಾಪಂಗಳ ಸಂಖ್ಯೆ
    ಕಾರವಾರ 18
    ಅಂಕೋಲಾ 21
    ಕುಮಟಾ 22
    ಹೊನ್ನಾವರ 28
    ಭಟ್ಕಳ 16
    ಎರಡನೇ ಹಂತದ ಮತದಾನ (ಡಿ.27)
    ಶಿರಸಿ 32
    ಸಿದ್ದಾಪುರ 23
    ಯಲ್ಲಾಪುರ 15
    ಮುಂಡಗೋಡ 16
    ಹಳಿಯಾಳ 20
    ದಾಂಡೇಲಿ 04
    ಜೊಯಿಡಾ 16

    ಪ್ರತ್ಯೇಕ ವೆಬ್​ಸೈಟ್
    ಇದೇ ಮೊದಲ ಬಾರಿಗೆ ಗ್ರಾಪಂ ಚುನಾವಣೆಯ ಸಂಪೂರ್ಣ ವಿವರಗಳನ್ನು ಆನ್​ಲೈನ್​ನಲ್ಲಿ ಅಪ್​ಡೇಟ್ ಮಾಡುವ ವ್ಯವಸ್ಥೆಯನ್ನು ಚುನಾವಣೆ ಆಯೋಗ ಮಾಡಿದೆ. ಇದಕ್ಕಾಗಿಯೇ ಒಂದು ಸಾಫ್ಟ್​ವೇರ್ ತಯಾರಿಸಲಾಗಿದ್ದು, ಇದರ ಬಗ್ಗೆ ಇನ್ನಷ್ಟು ತರಬೇತಿಯನ್ನು ಚುನಾವಣಾಧಿಕಾರಿಗಳಿಗೆ ನೀಡಲಾಗುವುದು.

    ಮಂಕಿ ಗೊಂದಲ
    ಹೊನ್ನಾವರ ತಾಲೂಕಿನ ಮಂಕಿ, ಹಳೇಮಠ ಗ್ರಾಪಂಗಳು, ಅನಂತವಾಡಿ ಹಾಗೂ ಚಿತ್ತಾರ ಗ್ರಾಪಂಗಳ ತಲಾ ಎರಡು ಕಂದಾಯ ಗ್ರಾಮಗಳನ್ನು ಸೇರಿಸಿ ಮಂಕಿ ಪಟ್ಟಣ ಪಂಚಾಯಿತಿ ರಚನೆಗೆ ಸರ್ಕಾರ ನ. 27ರಂದು ನಡೆದ ಕ್ಯಾಬಿನೆಟ್ ಸಭೆಯಲ್ಲಿ ಆಡಳಿತಾತ್ಮಕ ಅನುಮೋದನೆ ನೀಡಿದೆ. ಆದರೆ, ಆಯೋಗ ಸೋಮವಾರ ಘೊಷಿಸಿರುವ ಚುನಾವಣೆ ನಡೆಯಲಿರುವ ಗ್ರಾಪಂಗಳ ಪಟ್ಟಿಯಲ್ಲಿ ಈ ಗ್ರಾಪಂಗಳನ್ನೂ ಸೇರಿಸಲಾಗಿದೆ. ‘ಪಪಂಗಳಾಗಿ ಗ್ರಾಪಂಗಳಿಗೆ ಹಾಗೂ ವಾರ್ಡ್​ಗಳಿಗೆ ಚುನಾವಣೆ ನಡೆಯುವ ಸಾಧ್ಯತೆ ಇಲ್ಲ. ನವೆಂಬರ್ 7ರಂದು ಅಧಿಕೃತ ಅಧಿಸೂಚನೆ ಹೊರಡಿಸುವ ಸಂದರ್ಭದಲ್ಲಿ ಈ ಬಗ್ಗೆ ಸ್ಪಷ್ಟತೆ ನೀಡಲಾಗುವುದು’ ಎಂದು ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ ಕೆ. ಮಾಹಿತಿ ನೀಡಿದ್ದಾರೆ.

    ಗ್ರಾಪಂ ಚುನಾವಣೆಯನ್ನು ಕಾಂಗ್ರೆಸ್ ಗಂಭೀರವಾಗಿ ಪರಿಗಣಿಸಿದೆ. ಪ್ರತಿ ಬೂತ್​ಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಕ್ರಮ ವಹಿಸಲಾಗಿದೆ. ಸಮಿತಿಗಳನ್ನು ರಚಿಸಿ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲು ಸೂಚಿಸಲಾಗಿದೆ.
    | ಭೀಮಣ್ಣ ನಾಯ್ಕ ಕಾಂಗ್ರೆಸ್ ಜಿಲ್ಲಾಧ್ಯಕ್ಷ

    ಪಂಚಾಯಿತಿಗಳ ಗೆಲುವು ಮುಂಬರುವ ಎಲ್ಲ ಚುನಾವಣೆಗಳಿಗೆ ಅಡಿಪಾಯ ಎಂದು ಬಿಜೆಪಿ ಪರಿಗಣಿಸಿದೆ. ಇದರಿಂದ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳನ್ನು ಎಲ್ಲೆಡೆ ನಿಲ್ಲಿಸಿ ಗೆಲ್ಲಿಸುವ ನಿಟ್ಟಿನಲ್ಲಿ ತಯಾರಿ ನಡೆದಿದೆ. ಡಿ. 3ರಂದು ಪಕ್ಷದ ರಾಜ್ಯಾಧ್ಯಕ್ಷ ನಳಿನಕುಮಾರ್ ಕಟೀಲ್ ಅವರು ಶಿರಸಿ ಹಾಗೂ ಹೊನ್ನಾವರದಲ್ಲಿ ಗ್ರಾಮ ಸ್ವರಾಜ್ ಯಾತ್ರೆ ಸಮಾವೇಶದಲ್ಲಿ ಭಾಷಣ ಮಾಡಲಿದ್ದಾರೆ.
    | ನಾಗರಾಜ ನಾಯಕ ಬಿಜೆಪಿ ಜಿಲ್ಲಾ ವಕ್ತಾರ

    ಗ್ರಾಮ ಪಂಚಾಯಿತಿ ಚುನಾವಣೆಗೆ ಪ್ರತಿ ಗ್ರಾಪಂಗೆ ಒಬ್ಬ ‘ಎ’ ಶ್ರೇಣಿಯ ಅಧಿಕಾರಿಯನ್ನು ಚುನಾವಣಾಧಿಕಾರಿ, ಇನ್ನೊಬ್ಬ ಅಧಿಕಾರಿಯನ್ನು ಸಹಾಯಕ ಚುನಾವಣಾಧಿಕಾರಿಯಾಗಿ ನೇಮಕ ಮಾಡುವ ಕಾರ್ಯ ಮುಗಿದಿದೆ. ಅವರಿಗೆ ಮೊದಲ ಹಂತದಲ್ಲಿ ತರಬೇತಿ ನೀಡಲಾಗಿದೆ. ಶೀಘ್ರದಲ್ಲಿ ಎರಡನೇ ಹಂತದ ತರಬೇತಿ ನಡೆಯಲಿದೆ. ಆಯಾ ಗ್ರಾಪಂಗಳಲ್ಲೇ ನಾಮಪತ್ರ ಸ್ವೀಕೃತಿ ಕಾರ್ಯ ನಡೆಯಲಿದೆ.
    | ಡಾ. ಹರೀಶ ಕುಮಾರ ಕೆ. ಜಿಲ್ಲಾಧಿಕಾರಿ ಉತ್ತರ ಕನ್ನಡ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts