More

    ಉನ್ನತ ಶಿಕ್ಷಣಕ್ಕೆ ಹೊಸ ನೀತಿ ಪೂರಕ

    ಕಲಬುರಗಿ: ಹೊಸ ಶಿಕ್ಷಣ ನೀತಿ ಸಮರ್ಪಕ ಅನುಷ್ಠಾನದಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳು ಪ್ರಮುಖ ಪಾತ್ರ ವಹಿಸಬೇಕಾಗಿದೆ ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಅಧ್ಯಕ್ಷ ಪ್ರೊ.ಡಿ.ಪಿ.ಸಿಂಗ್ ಹೇಳಿದರು.
    ಕಡಗಂಚಿ ಹತ್ತಿರದ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದಲ್ಲಿ ಬುಧವಾರ ಆಯೋಜಿಸಿದ್ದ 5ನೇ ಘಟಿಕೋತ್ಸವ (ಆನ್ಲೈನ್)ದಲ್ಲಿ ಘಟಿಕೋತ್ಸವ ಭಾಷಣ ಮಾಡಿದ ಅವರು, ಹೊಸ ಶಿಕ್ಷಣ ನೀತಿಯನ್ನು ಶಿಕ್ಷಣ, ಸಾಕ್ಷರತೆ, ಸಂಖ್ಯಾಜ್ಞಾನ, ವಿಮರ್ಶಾತ್ಮಕ ಚಿಂತನೆ, ಸಮಸ್ಯೆ ಪರಿಹರಿಸುವ ಉನ್ನತ ಮಟ್ಟದ ಅಡಿಪಾಯ, ಸಾಮಥ್ರ್ಯ ಅಭಿವೃದ್ಧಿ ಜತೆಗೆ ಸಾಮಾಜಿಕ, ನೈತಿಕ, ಭಾವನಾತ್ಮಕ ಸಾಮಥ್ರ್ಯ ಮತ್ತು ಅಂತಃಶಕ್ತಿ ಅಭಿವೃದ್ಧಿ ತತ್ವದಡಿ ರೂಪಿಸಲಾಗಿದೆ ಎಂದು ವಿವರಿಸಿದರು.
    ಹೊಸ ನೀತಿಯಡಿ ಎಲ್ಲರ ಪಾಲುದಾರಿಕೆಯೊಂದಿಗೆ ಗುಣಮಟ್ಟದ ಶಿಕ್ಷಣ ನೀಡಲು ಉನ್ನತ ಶಿಕ್ಷಣ ಸಂಸ್ಥೆಗಳು, ವಿಶ್ವವಿದ್ಯಾಲಯಗಳು ಮುಂದೆ ಬರಬೇಕು. ಹೀಗಾಗಿ ಶಿಕ್ಷಣ ಸಂಸ್ಥೆಗಳನ್ನು ಹೊಸದಾಗಿ ಕಟ್ಟುವ, ಕ್ರೋಡೀಕರಿಸುವ ಅಗತ್ಯವಿದೆ ಎಂದು ಪ್ರತಿಪಾದಿಸಿದರು.
    ಮಲ್ಟಿ ಡಿಸಿಪ್ಲಿನರಿ ವಿಶ್ವವಿದ್ಯಾಲಯ, ಕಾಲೇಜು ಸ್ಥಾಪನೆ, ಸಾಂಸ್ಥಿಕ ಸ್ವಾಯತ್ತತೆ ಉತ್ತೇಜನ, ಉತ್ತಮ ಮಾನ್ಯತೆ ಮತ್ತು ದಾಖಲೆ ಹೊಂದಿರುವ ಸಂಸ್ಥೆಗಳಿಗೆ ಸ್ವಾಯತ್ತತೆಯೊಂದಿಗೆ ಪ್ರಶಸ್ತಿ, ಪುರಸ್ಕಾರ ನೀಡಿಕೆ, ಶೈಕ್ಷಣಿಕ ಮತ್ತು ವೃತ್ತಿಪರ ಶಿಕ್ಷಣ ಸಂಯೋಜನೆ, ವಿದ್ಯಾರ್ಥಿಗಳ ಅನುಭವ ವೃದ್ಧಿಸಲು ಪಠ್ಯಕ್ರಮ, ಮೌಲ್ಯಮಾಪನ ಮತ್ತು ವಿದ್ಯಾರ್ಥಿ ಸಹಕಾರ ಪುನರುಜ್ಜೀವನ ನಿರೀಕ್ಷಿಸಲಾಗಿದೆ ಎಂದರು.
    ಪ್ರಾಚೀನ ಶೈಕ್ಷಣಿಕ ವ್ಯವಸ್ಥೆಯಿಂದ ಅನೇಕ ಅಥವಾ ಉದಾರ ಕಲೆಗಳ ಕಲ್ಪನೆ ಬೆಳಕಿಗೆ ತರುವ ಮತ್ತು ಅದನ್ನು 21ನೇ ಶತಮಾನದ ಶಿಕ್ಷಣ ವ್ಯವಸ್ಥೆಗೆ ವರ್ಗಾ ಯಿಸುವ ತತ್ವದ ಆಧಾರದ ಮೇಲೆ ಹೊಸ ಶಿಕ್ಷಣ ನೀತಿ ರೂಪಿಸಲಾಗಿದೆ. ಸಮಾಜದೊಂದಿಗೆ ಕೊಡು-ಕೊಳ್ಳುವಿಕೆ, ಸಂವಹನ, ಚರ್ಚೆ , ಸಂವಾದದಂತಹ ಮೃದು ಕೌಶಲಗಳನ್ನು ಬೆಳೆಸುವುದು ಮತ್ತು ಆಯ್ದ ಕ್ಷೇತ್ರಗಳಲ್ಲಿ ಕಠಿಣ ಪರಿಣತಿ ಸಾಧ್ಯವಾಗಿಸುವುದು ಈ ನೀತಿಯ ಉದ್ದೇಶ ಎಂದು ತಿಳಿಸಿದರು.
    ವಿದ್ಯಾರ್ಥಿಗಳು ಉನ್ನತ ಗುರಿ ಹೊಂದುವುದರ ಜತೆಗೆ ಇತರರನ್ನು ಪ್ರೇರೇಪಿಸಬೇಕು. ನಿಮ್ಮಲ್ಲಿನ ಕುತೂಹಲ ಮನೋಭಾವ ಯಾವುದೇ ಗೊಂದಲಕ್ಕೆ ಎಡೆಮಾಡಿಕೊಡಬಾರದು. ಪ್ರಯಾಣದಲ್ಲಿ ಸತ್ಯಾನ್ವೇಷಣೆ ಎಂದಿಗೂ ಕೊನೆಗೊಳ್ಳಬಾರದು. ರಾಷ್ಟ್ರ ನಿಮ್ಮನ್ನು ನೆಚ್ಚಿದೆ, ಅವಲಂಬಿಸಿದೆ. ಪ್ರಜಾಪ್ರಭುತ್ವ ನಿಮಗೆ ಏನೆಲ್ಲ ನೀಡಿದೆ. ಹೀಗಾಗಿ ಪ್ರಜಾಪ್ರಭುತ್ವ ವ್ಯವಸ್ಥೆ ಮತ್ತು ಅದರ ಸಂಸ್ಥೆಗಳನ್ನು ರಕ್ಷಿಸುವುದು ನಿಮ್ಮ ಆದ್ಯ ಕರ್ತವ್ಯ ಎಂದು ಸಲಹೆ ನೀಡಿದರು.
    ಕನ್ನಡ ಅಧ್ಯಯನ ಸಂಸ್ಥೆ ಅಧ್ಯಕ್ಷ ಡಾ.ವಿಕ್ರಮ ವಿಸಾಜಿ ರಚಿಸಿದ ಎಲ್ಲ ಸೀಮೆಗಳ ದಾಟುವ ಛಲವೆ, ಸತ್ಯಸಂಧತೆಗೆ ಬಾಗುವ ಮನವೆ, ಜ್ಞಾನದ ವಿಜ್ಞಾನದ ರಥ ಎಳೆಯುವ ನೊಗವೆ, ವಿಶ್ವದ ಬೆಳಕಿಗೆ ಬೆಳಕಾಗುವ ನೆಲವೆ ಎಂಬ ಸಿಯುಕೆ ಕುರಿತ ಗೀತೆಯನ್ನು ವಿವಿ ಸಂಗೀತ ವಿಭಾಗದ ಡಾ.ಜಗದೇವಿ ಜಂಗಮಶೆಟ್ಟಿ ಮತ್ತು ತಂಡದವರು ಅಚ್ಚುಕಟ್ಟಾಗಿ ಪ್ರಸ್ತುತ ಪಡಿಸಿದರು.
    ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಡಾ.ಮ.ಗು. ಬಿರಾದಾರ ಖುದ್ದಾಗಿ ಗೌರವ ಡಾಕ್ಟರೇಟ್ ಪಡೆದುಕೊಂಡರು. ಉಳಿದವರಿಗೆ ಅವರಿದ್ದಲ್ಲಿಗೆ ಹೋಗಿ ಪ್ರದಾನ ಮಾಡಲಾಗುವುದು ಎಂದು ಕುಲಪತಿ ಪ್ರೊ.ಮಹೇಶ್ವರಯ್ಯ ತಿಳಿಸಿದರು. ವಿವಿ ಪರೀಕ್ಷಾ ನಿಯಂತ್ರಣಾಧಿಕಾರಿ ಪ್ರೊ.ಬಿ.ಆರ್. ಕೆರೂರ, ಕುಲಸಚಿವ ಪ್ರೊ.ಮಷ್ತಾಖ ಅಹ್ಮದ್ ಐ ಪಟೇಲ್ ಇತರರಿದ್ದರು.

    ಶಿಕ್ಷಣ ಸಂಸ್ಥೆಗಳಲ್ಲಿ ಪರಿಸರ ಸ್ನೇಹಿ, ಸುಸ್ಥಿರ ಕ್ಯಾಂಪಸ್ ಅಭಿವೃದ್ಧಿಪಡಿಸಲು ಮತ್ತು ಮಾನವೀಯ ಮೌಲ್ಯ, ವೃತ್ತಿಪರ ನೀತಿಗಳನ್ನು ಒಳಗೊಳ್ಳುವಂತೆ ಮಾಡಲು ಮಾರ್ಗಸೂಚಿ ರೂಪಿಸಲು ಸೂಕ್ತ ಕ್ರಮ ಕೈಗೊಳ್ಳಲಾಗಿದೆ.
    | ಪ್ರೊ.ಡಿ.ಪಿ.ಸಿಂಗ್
    ಅಧ್ಯಕ್ಷ, ಯುಜಿಸಿ ದೆಹಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts