More

    ಉದ್ಧರಿಸು ಜಗವ ಶ್ರೀ ಸಿದ್ಧಾರೂಢ..

    ಹುಬ್ಬಳ್ಳಿ: ಇಲ್ಲಿಯ ಪ್ರಸಿದ್ಧ ಸಿದ್ಧಾರೂಢಸ್ವಾಮಿ ಮಠದಲ್ಲಿ ಮಹಾಶಿವರಾತ್ರಿ ಮಹೋತ್ಸವ ಅಂಗವಾಗಿ ಶನಿವಾರ ಸಂಜೆ ಶ್ರೀ ಸಿದ್ಧಾರೂಢರ ಮಹಾರಥೋತ್ಸವ ಭಕ್ತಸಾಗರದ ಮಧ್ಯೆ ಭಕ್ತಿಭಾವ, ವಿಜೃಂಭಣೆಯಿಂದ ನಡೆಯಿತು.

    ಗೋಧೂಳಿ ಸಮಯದಲ್ಲಿ ಸರಿಯಾಗಿ ಸಂಜೆ 6ಕ್ಕೆ ಭಕ್ತರ ಆರಾಧ್ಯದೈವ ಶ್ರೀ ಸಿದ್ಧಾರೂಢರು, ಗುರುನಾಥರೂಢರ ಉತ್ಸವ ಮೂರ್ತಿ ಪ್ರತಿಷ್ಠಾಪಿಸಿ ಮಹಾರಥೋತ್ಸವಕ್ಕೆ ಚಾಲನೆ ನೀಡುತ್ತಿದ್ದಂತೆ ಜಯಘೋಷಗಳು ಮುಗಿಲು ಮುಟ್ಟಿದವು.

    ಜಾಂಝ ಪಥಕ್, ಡೊಳ್ಳು, ಕರಡಿ ಮಜಲು, ಭಜನೆ ಮುಂತಾದ ವಾದ್ಯಮೇಳಗಳ ಮಧ್ಯೆ ರಥ ಬೀದಿಯಲ್ಲಿ ತೇರು ಸಾಗುತ್ತಿದ್ದಂತೆ ಭಕ್ತರು, ಉತ್ತತ್ತಿ, ಲಿಂಬೆಹಣ್ಣು, ಬಾಳೆಹಣ್ಣು, ಬೆಂಡು ಬೆತ್ತಾಸುಗಳನ್ನು ಎಸೆದು ಇಷ್ಟಾರ್ಥ ಸಿದ್ಧಿಗೆ ಬೇಡಿಕೊಂಡರು.

    ಎಸೆದ ಹಣ್ಣು, ಸಿಹಿ ಪದಾರ್ಥಗಳು ಕೈಗೆ ಸಿಗುತ್ತಿದ್ದಂತೆ ಪ್ರಸಾದವಾಗಿ ಸ್ವೀಕರಿಸಿದ ಭಕ್ತರು ಧನ್ಯತೆ ಮೆರೆದರು. ಸಿದ್ಧಾರೂಢ ಮಹಾರಾಜ್ ಕೀ ಜೈ… ಗುರುನಾಥರೂಢ ಮಹಾರಾಜ್ ಕೀ ಜೈ… ಹರ್ ಹರ್ ಮಹಾದೇವ ಘೋಷಣೆಗಳು ಎಲ್ಲೆಡೆ ಮೊಳಗಿದವು.

    ಕಾರವಾರ ರಸ್ತೆಯ ಮುಖ್ಯ ಮಹಾದ್ವಾರದವರೆಗೆ ರಥ ಬಂದು ವಾಪಸ್ ಶ್ರೀಮಠದ ಬಳಿ ತೆರಳಿತು. ನಂತರ ಭಕ್ತರು, ಉಭಯ ಶ್ರೀಗಳ ಗದ್ದುಗೆ ದರ್ಶನ ಮಾಡಿ ಶ್ರೀಮಠದಲ್ಲಿ ಪ್ರಸಾದ ಸ್ವೀಕರಿಸಿದರು. ಹಣ್ಣು, ಟೆಂಗಿನಕಾಯಿ, ಮಾಲೆ, ಸಕ್ಕರೆ ಇತ್ಯಾದಿಗಳನ್ನು ಶ್ರೀಗಳ ಗದ್ದುಗೆಗೆ ಅರ್ಪಿಸಿದರು. ಲಕ್ಷಕ್ಕೂ ಅಧಿಕ ಭಕ್ತರು ಶನಿವಾರ ಶ್ರೀಮಠಕ್ಕೆ ಭೇಟಿ ನೀಡಿದರು.

    ಧಾರವಾಡ ಹಾಗೂ ಅಕ್ಕಪಕ್ಕದ ಜಿಲ್ಲೆಗಳಷ್ಟೇ ಅಲ್ಲದೆ, ಮಹಾರಾಷ್ಟ್ರ, ಗೋವಾ, ಆಂಧ್ರಪ್ರದೇಶ ಸೇರಿ ವಿವಿಧೆಡೆಯಿಂದ ಭಕ್ತರು ಆಗಮಿಸಿದ್ದರು. ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಜನಸಾಗರ ರಥೋತ್ಸವ ಕಣ್ತುಂಬಿಕೊಂಡಿತು. ಜಾತಿ, ಧರ್ಮ ಭೇದಭಾವವಿಲ್ಲದೇ ಎಲ್ಲೆಡೆ ಭಕ್ತರ ದಂಡು ಕಂಡು ಬಂತು.

    ಸಿದ್ಧಾರೂಢ ಮಠ ಸುತ್ತಮುತ್ತಲಿನ ಎರಡು ಕಿಲೋಮೀಟರ್ ವ್ಯಾಪ್ತಿಯಲ್ಲಿ ಬರೀ ಭಕ್ತರೇ ತುಂಬಿದ್ದರು. ಪಾದಯಾತ್ರೆ ಮೂಲಕವೂ ಸಾವಿರಾರು ಜನರು ಬಂದು ಸಿದ್ಧಾರೂಢರು ಹಾಗೂ ಗುರುನಾಥರೂಢರ ನಾಮಸ್ಮರಣೆ ಮಾಡುತ್ತ ಮಠದಲ್ಲಿ ಸೇವೆ ಸಲ್ಲಿಸಿದರು. ಕಳೆದೊಂದು ವಾರದಿಂದ ಸಿದ್ಧಾರೂಢ ಮಠ ಶಿವರಾತ್ರಿ ನಿಮಿತ್ತ ದೀಪಾಲಂಕಾರದಿಂದ ಕಂಗೊಳಿಸುತ್ತಿದೆ.

    ವಾರದಿಂದ ಜಾತ್ರೋತ್ಸವ

    ಹುಬ್ಬಳ್ಳಿಯ ಸಿದ್ಧಾರೂಢ ಸ್ವಾಮಿ ಮಠ ಟ್ರಸ್ಟ್ ಕಮಿಟಿ ಆಶ್ರಯದಲ್ಲಿ ಮಹಾಶಿವರಾತ್ರಿ ಮಹೋತ್ಸವದ ಅಂಗವಾಗಿ ಕಳೆದೊಂದು ವಾರದಿಂದ ಜಾತ್ರಾ ಉತ್ಸವ ನಡೆಯುತ್ತಿದೆ. ಫೆ. 16ರಂದು ಶಿವನಾಮ ಸಪ್ತಾಹದೊಂದಿಗೆ ಜಾತ್ರೋತ್ಸವ ಪ್ರಾರಂಭವಾಯಿತು. ನಿತ್ಯ ಪುರಾಣ, ಉಪನ್ಯಾಸ ನಡೆಯುತ್ತಿವೆ. ಫೆ. 21ರಂದು ಶಿವರಾತ್ರಿ ಜಾಗರಣೋತ್ಸವದಲ್ಲಿ ಸಾವಿರಾರು ಭಕ್ತರು ಸೇರಿದ್ದರು. ಫೆ. 22ರಂದು ಪಲ್ಲಕ್ಕಿ ಉತ್ಸವ ನಂತರ ಸಂಜೆ ರಥೋತ್ಸವ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts