More

    ಉದ್ಘಾಟನೆಗೆ ಕಾಯುತ್ತಿದೆ ಶೈತ್ಯಾಗಾರ

    ಶ್ರೀಧರ ಅಡಿ ಗೋಕರ್ಣ

    ಇಲ್ಲಿನ ತದಡಿ ಮೀನುಗಾರಿಕೆ ಬಂದರಿನಲ್ಲಿ ನಿರ್ವಣಗೊಂಡಿರುವ ರಾಜ್ಯದ ಅತಿ ದೊಡ್ಡ ಮೀನು ಸಂಸ್ಕರಣೆ ಮತ್ತು ಶೈತ್ಯಾಗಾರ ಉದ್ಘಾಟನೆಗೆ ಕಾಯುತ್ತಿದೆ.

    ಈ ಬೃಹತ್ ಫ್ರೀಜಿಂಗ್ ಘಟಕವು ಹಲವು ವಿಶೇಷತೆಗಳನ್ನು ಒಳಗೊಂಡಿದೆ. 780 ಮೆ. ಟನ್ ಸಾಗರೋತ್ಪನ್ನಗಳ ಸಂಗ್ರಹ ಸಾಮರ್ಥ್ಯ ಹೊಂದಿದ ರಾಜ್ಯದ ಮೊದಲ ಶೈತ್ಯಾಗಾರವಾಗಿದೆ. ಈ ಘಟಕ ಸಂಪೂರ್ಣವಾಗಿ ಅಂತಾರಾಷ್ಟ್ರೀಯ ಗುಣಮಟ್ಟದಲ್ಲಿ ನಿರ್ವಿುಸಲ್ಪಟ್ಟಿದೆ. ಸಂಪೂರ್ಣವಾಗಿ ಹವಾನಿಯಂತ್ರಿತ ವ್ಯವಸ್ಥೆ ಹೊಂದಿದೆ. ಮೀನು ಸಂಗ್ರಹ ಕೊಠಡಿ ಮೈನಸ್ 20 ಡಿಗ್ರಿ ತಾಪಮಾನದಲ್ಲಿ ಕೆಲಸ ಮಾಡಲಿದೆ. ಇಲ್ಲಿ ಮೀನು ಸಂಗ್ರಹ ಮಾತ್ರವಲ್ಲದೆ ಅದರ ಸಂಸ್ಕರಣೆ ಮತ್ತು ಪ್ರಯೋಗಾಲಯದ ವ್ಯವಸ್ಥೆ ಮಾಡಲಾಗಿದೆ.

    ರಿನೆಕ್ ಇಂಡಿಯಾ ಕಂಪನಿ ಬೆಂಗಳೂರು ಶಾಖೆಯು 13.34 ಕೋಟಿ ರೂ. ವೆಚ್ಚದಲ್ಲಿ ಇದರ ನಿರ್ಮಾಣ ಕಾರ್ಯ ಕೈಗೊಂಡಿದೆ. ಈ ಘಟಕ ಕೇಂದ್ರ ಸಾಗರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರ (ಎಂಪಿಡಾ) ಕಳೆದ ಐದು ವರ್ಷದಲ್ಲಿ ಪೂರ್ಣ ಪ್ರಮಾಣದ ತಾಂತ್ರಿಕತೆಯೊಂದಿಗೆ ಮಂಜೂರು ಮಾಡಿದೆ. ಇದರ ನಿರ್ವಣದ ಹಿಂದೆ ಯುರೋಪಿಯನ್ ರಾಷ್ಟ್ರಗಳ ರಫ್ತ್ತು ವೃದ್ಧಿಸುವ ಗುರಿ ಹೊಂದಲಾಗಿದೆ. ಇದಕ್ಕೆ ಕೇಂದ್ರ ಸರ್ಕಾರ 5 ಕೋಟಿ ರೂ, ರಾಜ್ಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಿಂದ 5 ಕೋಟಿ ರೂ. ಮತ್ತು ರಾಜ್ಯ ಮೀನುಗಾರಿಕೆ ಅಭಿವೃದ್ಧಿ ನಿಗಮ (ಕೆಎಫ್​ಡಿಸಿ) 3.34 ಕೋಟಿ ರೂ. ವ್ಯಯಿಸಿದೆ. ಮೂಲ ಯೋಜನೆಯ ಪ್ರಕಾರ ಈ ಘಟಕ 2020ರ ಮಾರ್ಚ್​ನಲ್ಲಿ ಪೂರ್ಣಗೊಂಡು ಅದೇ ವರ್ಷ ಆಗಸ್ಟ್ ನಲ್ಲಿ ಕಾರ್ಯಾರಂಭ ಮಾಡಬೇಕಿತ್ತು. ಆದರೆ, ಕಟ್ಟಡ ಮತ್ತು ಇತರ ವ್ಯವಸ್ಥೆಗಳು ಯೋಜಿತ ಅವಧಿಯಲ್ಲೇ ಸಿದ್ಧವಾಗಿದ್ದರೂ ಚುನಾವಣೆ ಮತ್ತು ಕೋವಿಡ್ ಕಾರಣದಿಂದ ಕಾರ್ಯಾರಂಭ ಒಂದು ವರ್ಷ ಮುಂದಕ್ಕೆ ಹೋಗುವಂತಾಯಿತು. ಇದರ ನಿರ್ವಹಣೆಗೆ ಖಾಸಗಿ ಉದ್ಯಮಿಗಳಿಂದ ಟೆಂಡರ್ ಪಡೆಯಲಾಗುತ್ತಿದ್ದು, ಬರುವ ಆಗಸ್ಟ್​ನೊಳಗೆ ಟೆಂಡರ್ ಪ್ರಕ್ರಿಯೆ ಮುಗಿಯಲಿದೆ.

    ತದಡಿಯಲ್ಲಿ ನಿರ್ವಿುಸಲಾದ ಬೃಹತ್ ಶೈತ್ಯಾಗಾರ ಜಿಲ್ಲೆಯ ಕಾರವಾರದಿಂದ ಭಟ್ಕಳವರೆಗಿನ ಮೀನುಗಾರರಿಗೆ ವರದಾನವಾಗಲಿದೆ. ಸ್ಥಳೀಯರಿಗೆ ಉದ್ಯೋಗ, ಮೀನಿಗೆ ಗರಿಷ್ಠ ಬೆಲೆ ಮತ್ತು ದೇಶಕ್ಕೆ ಹೆಚ್ಚಿನ ರಫ್ತನ್ನು ಈ ಘಟಕ ನೀಡಲಿದೆ. ಈ ಶೈತ್ಯಾಗಾರದಿಂದ ಯು.ಕೆ, ಫ್ರಾನ್ಸ್, ಜರ್ಮನ್ ಮುಂತಾದ ಯುರೋಪಿಯನ್ ದೇಶಗಳಲ್ಲಿ ಹೊಸ ರಫ್ತು ವಹಿವಾಟು ನಡೆಸಲಾಗುವುದು.
    | ಎಂ.ಎಲ್. ದೊಡ್ಡಮನಿ
    ವ್ಯವಸ್ಥಾಪಕ ನಿರ್ದೇಶಕ ಕರ್ನಾಟಕ ಮೀನು ಅಭಿವೃದ್ಧಿ ನಿಗಮ ಮಂಗಳೂರು

    ತದಡಿಯಲ್ಲಿ ನಿರ್ವಿುಸಲಾದ ಶೈತ್ಯಾಗಾರ ಜಿಲ್ಲೆಗೆ ಹೊರೆಯಾಗಬಾರದು. ಇದನ್ನು ನಿರ್ವಿುಸುವ ಮೊದಲು ಇದರ ಸಾಧಕ ಬಾಧಕದ ಬಗ್ಗೆ ಜನಪ್ರತಿನಿಧಿಗಳ ಮತ್ತು ಸಾರ್ವಜನಿಕರ ಅಭಿಪ್ರಾಯ ತೆಗೆದುಕೊಳ್ಳಬೇಕಿತ್ತು. ತದಡಿ ಬಂದರಿಗೆ ತ್ವರಿತವಾಗಿ ಆಗಬೇಕಾದ ಅನೇಕ ಮೂಲ ವ್ಯವಸ್ಥೆಗಳಿವೆ. ಅದಕ್ಕೆ ದೃಷ್ಟಿ ಹರಿಸುವಂತಾಗಲಿ. ಶೈತ್ಯಾಗಾರದಿಂದ ಮೀನುಗಾರರಿಗೆ ವ್ಯಾಪಾರಿಗಳಿಗೆ ಅನುಕೂಲವಾಗುವಂತಾಗಬೇಕು. ಟೆಂಡರ್ ಸೇರಿ ಶೈತ್ಯಾಗಾರಕ್ಕೆ ಸಂಬಂಧಿಸಿದ ಎಲ್ಲ ಪ್ರಕ್ರಿಯೆಗಳನ್ನು ಅಧಿಕಾರಿಗಳು ಸಾರ್ವಜನಿಕಗೊಳಿಸಬೇಕು.
    | ದಿನಕರ ಶೆಟ್ಟಿ
    ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts