More

    ಉತ್ತರಕನ್ನಡ ಜಿಲ್ಲೆಗೆ ಎದುರಾದ ಪ್ರವಾಹ ಭೀತಿ

    ಕಾರವಾರ: ಜಿಲ್ಲೆಯಲ್ಲಿ ವ್ಯಾಪಕವಾಗಿ ಮಳೆಯಾಗುತ್ತಿದ್ದು, ಪ್ರವಾಹದ ಭೀತಿ ಎದುರಾಗಿದೆ. ಇನ್ನೂ ಎರಡು ದಿನ ಉತ್ತಮ ಮಳೆಯ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಅರಬ್ಬಿ ಸಮುದ್ರದ ಕಡೆಯಿಂದ ಭಾರಿ ಗಾಳಿ ಬೀಸುತ್ತಿದ್ದು, ವಿವಿಧೆಡೆ ಅನಾಹುತ ಸಂಭವಿಸಿದೆ. ಮುಖ್ಯವಾಗಿ ಮೀನುಗಾರಿಕೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ.

    ದಡವೇರಿದ ಬೋಟ್: ಅರಬ್ಬಿ ಸಮುದ್ರದಲ್ಲಿನ ಅಬ್ಬರದ ಗಾಳಿಗೆ ಬೆದರಿ ಆಳ ಸಮುದ್ರದಲ್ಲಿ 300ಕ್ಕೂ ಅಧಿಕ ಮೀನುಗಾರಿಕೆ ಬೋಟ್​ಗಳು ಕಾರವಾರ ತೀರಕ್ಕೆ ಬಂದು ಆಶ್ರಯ ಪಡೆದಿವೆ. ಉಡುಪಿ ಜಿಲ್ಲೆಯ ಮಲ್ಪೆ, ಮಂಗಳೂರು, ಗೋವಾ ಸೇರಿ ವಿವಿಧೆಡೆಯ ಬೋಟ್​ಗಳನ್ನು ಟ್ಯಾಗೋರ್ ತೀರದಿಂದ ಸುಮಾರು 1 ನಾಟಿಕಲ್ ಮೈಲ್ ವ್ಯಾಪ್ತಿಯಲ್ಲಿ ಬೈತಖೋಲ್ ಬಂದರು ಪ್ರದೇಶದಲ್ಲಿ ಲಂಗರು ಹಾಕಲಾಗಿದೆ. ಭಾನುವಾರ ರಾತ್ರಿ ರಕ್ಷಣೆಗಾಗಿ ಆಗಮಿಸಿದ್ದ ಮಲ್ಪೆಯ ಪ್ರೊವಿಡೆನ್ಸಿ ಹಾಗೂ ಇನ್ನೊಂದು ಬೋಟ್ ಗಾಳಿಯ ವೇಗದಿಂದ ತೀರಕ್ಕೆ ಬಂದು ಅಪ್ಪಳಿಸಿವೆ. ಮರಳಲ್ಲಿ ಹೂತುಕೊಂಡ ಬೋಟ್​ಗಳನ್ನು ಮರಳಿ ನೀರಿಗೆ ಕೊಂಡೊಯ್ಯಲು ಮೀನುಗಾರರು ಹರಸಾಹಸ ಪಟ್ಟರು. ಇನ್ನು ತೀರದಲ್ಲಿ ಇಟ್ಟಿದ್ದ ಹಲವು ನಾಡದೋಣಿಗಳಿಗೆ ಹಾನಿಯಾಗಿದೆ. ಮಾಜಾಳಿ, ಕಾರವಾರ, ಅಂಕೋಲಾದ ಮಂಜಗುಣಿ ಸೇರಿ ವಿವಿಧೆಡೆ ಕಡಲ ಕೊರೆತ ವಿಪರೀತವಾಗಿದೆ.

    ಕೃತಕ ನೆರೆ: ಸೀಬರ್ಡ್ ನೌಕಾ ಯೋಜನೆ ಹಾಗೂ ಚತುಷ್ಪಥ ಕಾಮಗಾರಿಯ ಕಾರಣ ಇಲ್ಲಿನ ಮುದಗಾದಲ್ಲಿ ಭಾನುವಾರ ಹಾಗೂ ಸೋಮವಾರ ಕೃತಕ ನೆರೆ ಉಂಟಾಯಿತು. ಮುದಗಾ ಮೇಲಿನ ಕೇರಿ, ಗೌಡಾ ಕೇರಿ ಭಾಗದಲ್ಲಿ 10ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತು. ಕೆಲವು ಅಂಗಡಿಗಳಿಗೆ ನೀರು ನುಗ್ಗಿ ಹಾನಿಯಾಗಿದೆ. ಅಮದಳ್ಳಿಯಲ್ಲಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನೀರು ನಿಂತು ಸಂಚಾರಕ್ಕೆ ವ್ಯತ್ಯಯ ಉಂಟಾಯಿತು. ರೈಲ್ವೆ ಮೇಲ್ಸೇತುವೆ ಸಮೀಪ ನೀರು ತುಂಬಿ ಮುದಗಾ ಬಂದರು ಹಾಗೂ ಇತರೆಡೆ ತೆರಳಲು ವ್ಯತ್ಯಯ ಉಂಟಾಯಿತು.

    ಅಂಕೋಲಾದಲ್ಲಿ ದಾಖಲೆ ಮಳೆ
    ಭಾನುವಾರ ರಾತ್ರಿಯಿಂದ ಸೋಮವಾರ ಬೆಳಗಿನವರೆಗೆ ಅಂಕೋಲಾದಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದೆ. 220 ಮಿಮೀ ಮಳೆ ಬಿದ್ದಿದೆ. ಇದರಿಂದ ಅಂಕೋಲಾದ ಅವರ್ಸಾ, ಹಾರವಾಡ, ಕೇಣಿ ಭಾಗದಲ್ಲಿ ಕೆಲವು ಮನೆಗಳಿಗೆ ಭಾನುವಾರ ನೀರು ಬಂದಿತ್ತು. ಸೋಮವಾರ ನೀರು ಕಡಿಮೆಯಾಗಿದೆ. ಭಟ್ಕಳದಲ್ಲಿ 156, ಹಳಿಯಾಳದಲ್ಲಿ 48.2, ಹೊನ್ನಾವರದಲ್ಲಿ 119.7, ಕಾರವಾರದಲ್ಲಿ 59.9, ಕುಮಟಾದಲ್ಲಿ 89.2, ಮುಂಡಗೋಡಿನಲ್ಲಿ 24.4, ಸಿದ್ದಾಪುರದಲ್ಲಿ 72.2, ಶಿರಸಿಯಲ್ಲಿ 40.5, ಜೊಯಿಡಾದಲ್ಲಿ 160.4, ಯಲ್ಲಾಪುರದಲ್ಲಿ 77.4 ಮಿಮೀ ಮಳೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts