More

    ಉತ್ತಮ ಶಿಕ್ಷಣ ಪಡೆಯುವುದು ಅಗತ್ಯ

    ಪಾಂಡವಪುರ: ಆಧುನಿಕ ಜಗತ್ತಿಗೆ ಹೊಂದಿಕೊಂಡು ಬದಕಬೇಕಾದರೆ ಮಕ್ಕಳು ಉತ್ತಮ ಶಿಕ್ಷಣ ಪಡೆಯಬೇಕು. ಶಿಕ್ಷಣದಿಂದ ಮಕ್ಕಳ ಭವಿಷ್ಯ ಉಜ್ವಲವಾಗುತ್ತದೆ ಎಂದು ಶಾಸಕ ಸಿ.ಎಸ್.ಪುಟ್ಟರಾಜು ಹೇಳಿದರು.


    ತಾಲೂಕಿನ ಸುಂಕತೊಣ್ಣೂರು ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ 55 ಲಕ್ಷ ರೂ.ವೆಚ್ಚದಲ್ಲಿ ನಿರ್ಮಾಣ ಮಾಡಿರುವ ಹೆಚ್ಚುವರಿ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದರು.


    ವಿದ್ಯಾರ್ಥಿ ಜೀವನ ಬಹಳ ಪ್ರಮುಖ ಘಟ್ಟ. ಹಾಗಾಗಿ ವಿದ್ಯಾಭ್ಯಾಸಕ್ಕೆ ಹೆಚ್ಚು ಒತ್ತು ನೀಡಿ ಶಿಕ್ಷಣ ಪಡೆದುಕೊಂಡರೆ ಇಡೀ ವಿಶ್ವದ ಯಾವುದೇ ಮೂಲೆಯಲ್ಲಾದರೂ ಬದುಕಬಹುದು. ಗುರು ಹಿರಿಯರು, ಶಿಕ್ಷಕರು, ಪಾಲಕರಿಗೆ ಗೌರವ ನೀಡುವುದನ್ನು ರೂಢಿಸಿಕೊಂಡರೆ ಸಾರ್ಥಕತೆಯಿಂದ ಬದುಕಬಹುದು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.


    ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಮೇಲುಕೋಟೆ, ಪಾಂಡವಪುರ, ಕ್ಯಾತನಹಳ್ಳಿ, ಅರಳಕುಪ್ಪೆ, ಬನ್ನಂಗಾಡಿ ಗ್ರಾಮಗಳಿಗೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, 12 ಪ್ರೌಢಶಾಲೆಗಳನ್ನು ಅಂದು ಮುಖ್ಯಮಂತ್ರಿಯಾಗಿದ್ದ ಎಚ್.ಡಿ.ಕುಮಾರಸ್ವಾಮಿ ಮಂಜೂರು ಮಾಡಿದರು. ಕ್ಷೇತ್ರದಲ್ಲಿ ವಿದ್ಯುತ್ ಸಮಸ್ಯೆ ಎದುರಾಗದಂತೆ ಹೋಬಳಿ ಕೇಂದ್ರಕ್ಕೆ ಎರಡರಂತೆ ವಿದ್ಯುತ್ ಉಪಕೇಂದ್ರ ಸ್ಥಾಪಿಸಲಾಗಿದೆ ಎಂದು ತಿಳಿಸಿದರು.


    ಏತ ನೀರಾವರಿ ಯೋಜನೆ ಮೂಲಕ ಸುಂಕತೊಣ್ಣೂರು ಸುತ್ತಮುತ್ತಲಿನ ಎಲ್ಲ ಕೆರೆಗಳನ್ನು ತುಂಬಿಸಿ ಮರುಜೀವ ನೀಡಲಾಗಿದೆ. ಹಳೇಬಿಡು ಗ್ರಾ.ಪಂ.ವ್ಯಾಪ್ತಿಯ ಕೆರೆಗಳಿಗೆ ವರ್ಷಪೂರ್ತಿ ನೀರು ತುಂಬಿಸಲು ಅಗತ್ಯವಿರುವ ಹೆಚ್ಚುವರಿ ಅನುದಾನ ಬಿಡುಗಡೆ ಮಾಡುವುದಾಗಿ ಸಚಿವ ಮಾಧುಸ್ವಾಮಿ ಭರವಸೆ ನೀಡಿದ್ದು, ಶೀಘ್ರ ಕಾಮಗಾರಿಗೆ ಚಾಲನೆ ನೀಡಲಾಗುವುದು ಎಂದರು.


    ಸುಂಕತೊಣ್ಣೂರು ಗ್ರಾಪಂ ಅಧ್ಯಕ್ಷ ನಲ್ಲಹಳ್ಳಿ ಮಹೇಶ್, ಮಾಜಿ ಅಧ್ಯಕ್ಷ ಕೆ.ದೇವೇಗೌಡ, ಸದಸ್ಯೆ ರಾಧಾಮಣಿ, ಎಪಿಎಂಸಿ ಮಾಜಿ ಅಧ್ಯಕ್ಷ ದೇವೇಗೌಡ, ಮಮತಾ ತಿಮ್ಮೇಗೌಡ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts