More

    ಉಡುಪಿಯಲ್ಲೂ ಮಾರ್ಷಲ್‌ಗಳ ನೇಮಕ

    ಉಡುಪಿ: ಜಿಲ್ಲೆಯಲ್ಲಿ ಇತ್ತೀಚೆಗೆ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವ ಬಗ್ಗೆ ಜಿಲ್ಲಾ ಆರೋಗ್ಯ ಪರಿಣಿತ ಸಲಹಾ ಸಮಿತಿ ಕಳವಳ ವ್ಯಕ್ತಪಡಿಸಿದ್ದು, ಸಭೆ, ಸಮಾರಂಭಗಳಲ್ಲಿ ಪರಸ್ಪರ ಅಂತರ ಪಾಲಿಸದಿರುವುದು ಮತ್ತು ಮಾಸ್ಕ್ ಧರಿಸದವರ ವಿರುದ್ಧ ಕ್ರಮ ಕೈಗೊಳ್ಳಲು ಮಾರ್ಷಲ್‌ಗಳನ್ನು ನೇಮಿಸಲಾಗುವುದು ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

    ಮಂಗಳವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಪರಿಣಿತ ಸಲಹಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮಾರ್ಷಲ್‌ಗಳು ಸಭೆ ನಡೆಯುವ ಸ್ಥಳಗಳಿಗೆ ಆಗಮಿಸಿ ದಂಡ ಸೇರಿದಂತೆ, ಕಟ್ಟಡದ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಿದ್ದಾರೆ. ಜಿಲ್ಲಾ ಪರಿಣಿತ ಸಲಹಾ ಸಮಿತಿ ಅಭಿಪ್ರಾಯದಂತೆ, ಸಾರ್ವಜನಿಕರು ಕೋವಿಡ್ ಸುರಕ್ಷತಾ ನಿಯಮಗಳಾದ ಮಾಸ್ಕ್, ಸ್ಯಾನಿಟೈಸರ್ ಬಳಕೆ ಮತ್ತು ಅಂತರ ಕಾಯ್ದುಕೊಳ್ಳುವ ಕ್ರಮಗಳನ್ನು ತಪ್ಪದೆ ಪಾಲಿಸಬೇಕು ಎಂದರು.

    ಆರ್‌ಟಿ- ಪಿಸಿಆರ್ ಕಡ್ಡಾಯ:
    ಶಿಕ್ಷಕರು ಮತ್ತು ವಿದ್ಯಾರ್ಥಿಗಳಲ್ಲಿ ಕೋವಿಡ್ ಸುರಕ್ಷತಾ ನಿಯಮಗಳ ಪಾಲನೆ ಕಂಡುಬರುತ್ತಿಲ್ಲ, ನಿಯಮ ಉಲ್ಲಂಘಿಸುವ ಶಿಕ್ಷಕರು ಹಾಗೂ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
    ಮಹಾರಾಷ್ಟ್ರದಿಂದ ಆಗಮಿಸುವರು ಕಡ್ಡಾಯವಾಗಿ ಆರ್‌ಟಿ ಪಿಸಿಆರ್ ಪರೀಕ್ಷೆ ಮಾಡಿಸಿಕೊಂಡು ನೆಗೆಟಿವ್ ವರದಿ ನೀಡಬೇಕು. ಆರ್‌ಟಿ ಪಿಸಿಆರ್ ಪರೀಕ್ಷೆ ವರದಿ ಇಲ್ಲದೆ ಆಗಮಿಸುವವರ ವಿರುದ್ಧ ಎಪಿಡಮಿಕ್ ಕಾಯ್ದೆ ಪ್ರಕಾರ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದರು.

    ಆರೋಗ್ಯ ಇಲಾಖೆ ಪ್ರಸ್ತುತ ನಡೆಸುತ್ತಿರುವ ಪರೀಕ್ಷೆ ಸಂಖ್ಯೆಯಲ್ಲಿ ಹೆಚ್ಚು ಮಾಡಬೇಕು. ಪ್ರಾಥಮಿಕ ಸಂಪರ್ಕಿತರ ಕುರಿತು ಹೆಚ್ಚು ನಿಗಾ ವಹಿಸಿ ಎಂದು ಜಿಪಂ ಸಿಇಒ ಡಾ.ನವೀನ್ ಭಟ್ ಹೇಳಿದರು. ಡಿಎಚ್‌ಒ ಡಾ.ಸುದೀರ್ ಚಂದ್ರ ಸೂಡ, ಜಿಲ್ಲಾ ಸರ್ಜನ್ ಡಾ. ಮಧುಸೂದನ್ ನಾಯಕ್, ಕೋವಿಡ್ ವಿಶೇಷಾಧಿಕಾರಿ ಡಾ. ಪ್ರೇಮಾನಂದ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts