More

    ಈ ದಿನ ಮತದಾರನೇ ಮಹಾಶೂರ

    ಚಾಮರಾಜನಗರ: ರಂಗೇರಿರುವ ವಿಧಾನಸಭಾ ಚುನಾವಣೆಯ ಮತದಾನ ಮೇ 10ರಂದು ನಡೆಯಲಿದ್ದು, ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಹಕ್ಕು ಪಡೆದಿರುವ ಮತದಾರನೇ ಈ ದಿನ ಮಹಾಶೂರ.

    ಜಿಲ್ಲಾಡಳಿತದಿಂದ ಶಾಂತಿಯುತ ಮತ್ತು ವ್ಯವಸ್ಥಿತ ಮತದಾನಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರಜೆಗಳು ಪ್ರಭುಗಳ ಸ್ಥಾನ ಪಡೆಯುವುದು ಚುನಾವಣೆ ಸಮೀಪಿಸಿದಾಗ ಮಾತ್ರ. ಬುಧವಾರ ಹಕ್ಕು ಚಲಾವಣೆಯ ದಿನವಾಗಿದ್ದು, ಪ್ರಬುದ್ಧರನ್ನು ಆಯ್ಕೆ ಮಾಡಲು ಮತದಾರರು ಮತಗಟ್ಟೆಗಳ ಕಡೆಗೆ ತೆರಳಲಿದ್ದಾರೆ. ಚಾ.ನಗರ ಕ್ಷೇತ್ರದಲ್ಲಿ 239, ಹನೂರಿನಲ್ಲಿ 253, ಕೊಳ್ಳೇಗಾಲದಲ್ಲಿ(ಮೀಸಲು) 241 ಹಾಗೂ ಗುಂಡ್ಲುಪೇಟೆಯಲ್ಲಿ 249 ಸೇರಿ ಒಟ್ಟು 982 ಮತಕೇಂದ್ರಗಳನ್ನು ತೆರೆಯಲಾಗಿದೆ. ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗುತ್ತಿದೆ. 1483 ಬ್ಯಾಲೆಟ್ ಯೂನಿಟ್, 1177 ಕಂಟ್ರೋಲ್ ಯೂನಿಟ್, 1274 ವಿವಿ ಪ್ಯಾಟ್ ಹಂಚಿಕೆ ಮಾಡಲಾಗಿದೆ. ಜಿಲ್ಲೆಯ ಮತಗಟ್ಟೆಗಳಲ್ಲಿ 4763 ಅಧಿಕಾರಿಗಳನ್ನು ನಿಯೋಜನೆ ಮಾಡಲಾಗಿದೆ. ಸುಮಾರು 2 ಸಾವಿರ ಪೊಲೀಸರನ್ನು ಕರ್ತವ್ಯಕ್ಕೆ ನಿಯೋಜಿಸಲಾಗಿದೆ.

    ಮಹಿಳಾ ಮತದಾರರೇ ನಿರ್ಣಾಯಕ: ಜಿಲ್ಲೆಯ ವಿಧಾನಸಭಾ ಕ್ಷೇತ್ರಗಳಲ್ಲಿ ಒಟ್ಟು ಮತದಾರರಲ್ಲಿ ಪುರುಷರಿಗಿಂತ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕೊಳ್ಳೇಗಾಲ(ಮೀಸಲು) 2,16,602 ಒಟ್ಟು ಮತದಾರರಲ್ಲಿ 1,06,979 ಪುರುಷರು ಇದ್ದರೆ, 1,09,604 ಮಹಿಳೆಯರಿದ್ದಾರೆ. ಚಾಮರಾಜನಗರದಲ್ಲಿ 2,09,494 ಒಟ್ಟು ಮತದಾರರಲ್ಲಿ 1,02,588 ಪುರುಷರು, 1,06,891 ಮಹಿಳೆಯರಿದ್ದಾರೆ. ಗುಂಡ್ಲುಪೇಟೆಯಲ್ಲಿ 2,13,836 ಒಟ್ಟು ಮತದಾರರಲ್ಲಿ 1,05,020 ಪುರುಷರಲ್ಲಿ 1,08,797 ಮಹಿಳೆಯರು ಇದ್ದಾರೆ. ಈ ಮೂರು ಕ್ಷೇತ್ರಗಳಲ್ಲಿ ಮಹಿಳಾ ಮತದಾರರ ಸಂಖ್ಯೆ ಹೆಚ್ಚಾಗಿದೆ. ಆದರೆ ಹನೂರಿನಲ್ಲಿ ಒಟ್ಟು 2,21,557 ಮತದಾರರಲ್ಲಿ 1,11,960 ಪುರುಷರು ಇದ್ದರೆ, 1,09,581 ಮಹಿಳಾ ಮಣಿಯರು ಹಕ್ಕು ಚಲಾಯಿಸಲಿದ್ದಾರೆ. ಮಹಿಳಾ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿರುವ 12 ಮತಗಟ್ಟೆಗಳನ್ನು ಪಿಂಕ್ ಪೋಲಿಂಗ್ ಸ್ಟೇಷನ್ ಎಂದು ಗುರುತಿಸಲಾಗಿದೆ. ಚಾಮರಾಜನಗರದ ಉಪ್ಪಾರ ಬೀದಿಯ 68 ಮತ್ತು 70, ಮಾದರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಪರಿವಾರ ಬೀದಿಯ ಸ.ಹಿ.ಪ್ರಾ.ಶಾಲೆ-73 ಮತಗಟ್ಟೆ, ಹನೂರು ಕ್ಷೇತ್ರದ ಕೊಂಗರಹಳ್ಳಿ ಗ್ರಾಮದ ಸ.ಹಿ.ಪ್ರಾ.ಕ ಶಾಲೆ-20, ಕಾಮಗೆರೆ ಗ್ರಾಮದ ಏಡೆಡ್ ಹಿ.ಪ್ರಾ.ಶಾಲೆ-55, ಹಿರಿಯಂಬಲ ಗ್ರಾಮದ ಸರ್ಕಾರಿ ಬುಡಕಟ್ಟು ಆಶ್ರಮ ಶಾಲೆ-221, ಕೊಳ್ಳೇಗಾಲ ಮೀಸಲು ಕ್ಷೇತ್ರದ ನಡಕಲುಮೋಳೆ-29, ಹರಿಜನಬೀದಿ-124, ಬಿಳಿಗಿರಿರಂಗನಬೆಟ್ಟದ ಯರಕನಗದ್ದೆ -195 ಸ.ಹಿ.ಪ್ರಾ. ಶಾಲೆ ಮತಗಟ್ಟೆಗಳು ಹಾಗೂ ಗುಂಡ್ಲುಪೇಟೆ ಕ್ಷೇತ್ರದ ತೆರಕಣಾಂಬಿ ಸರ್ಕಾರಿ ಪದವಿ ಪೂರ್ವ ಕಾಲೇಜು -109, ಚಿಕ್ಕತೊಪ್ಪೂರು ಸರ್ಕಾರಿ ಸಂಯುಕ್ತ ಪ್ರೌಢಶಾಲೆ-230, ಬನ್ನಿತಾಲಪುರ ಗ್ರಾಪಂ ಕಚೇರಿ-237 ಮತಗಟ್ಟೆಗಳನ್ನು ಪಿಂಕ್ ಮತಗಟ್ಟೆಗಳು ಎಂದು ಗುರುತಿಸಲಾಗಿದೆ.

    ಅಧಿಕ ಮತದಾನವಾಗುವ ಸಾಧ್ಯತೆ: ಈ ಸಲದ ಚುನಾವಣೆಯಲ್ಲಿ ಅಧಿಕ ಮತದಾನವಾಗುವ ನಿರೀಕ್ಷೆ ಇದೆ. ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳ ಕಣವೂ ರಂಗೇರಿದೆ. ಘಟಾನುಘಟಿ ನಾಯಕರು ಸ್ಪರ್ಧೆ ಮಾಡಿದ್ದಾರೆ. ಹೀಗಾಗಿ, ಮತದಾನದ ಶೇಕಡವಾರು ಪ್ರಮಾಣವೂ ಹೆಚ್ಚಾಗಬಹುದೆಂದು ಅಂದಾಜಿಸಲಾಗುತ್ತಿದೆ.

    ಮಾದರಿ ಮತಗಟ್ಟೆಗಳು: ಚಾಮರಾಜನಗರದ ಕೊತ್ತಲವಾಡಿ, ಕೊಳ್ಳೇಗಾಲದ ಮುಳ್ಳೂರು, ಅಗರ, ಕುರಟ್ಟಿಹೊಸೂರು, ಗುಂಡ್ಲುಪೇಟೆಯ ಕೊಡಸೋಗೆ ಗ್ರಾಮಗಳ ಸ.ಹಿ.ಪ್ರಾ. ಶಾಲೆಯ ಮತಗಟ್ಟೆಗಳನ್ನು ಮಾದರಿ ಮತಗಟ್ಟೆಗಳಾಗಿದೆ.

    ಹನೂರು ಕ್ಷೇತ್ರದ ಕ್ರಿಸ್ತರಾಜ ಶಿಕ್ಷಣ ಸಂಸ್ಥೆ, ಕೊಳ್ಳೇಗಾಲದ ಶ್ರೀಮಹದೇಶ್ವರ ಪ್ರಥಮ ದರ್ಜೆ ಕಾಲೇಜು, ಚಾ.ನಗರದ ಅಂಬೇಡ್ಕರ್ ಭವನದ ಬಳಿ ಇರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಗುಂಡ್ಲುಪೇಟೆಯ ಸೆಂಟ್ ಜಾನ್ ಆಂಗ್ಲ ಮಾಧ್ಯಮ ಶಾಲೆಯನ್ನು ಮಸ್ಟರಿಂಗ್ ಮತ್ತು ಡೀ ಮಸ್ಟರಿಂಗ್ ಸ್ಥಳಗಳೆಂದು ಗುರುತಿಸಲಾಗಿದೆ.

    ಮೊದಲ ಮತದಾನದ ಸಂಭ್ರಮ: ಜಿಲ್ಲೆಯಲ್ಲಿ ನಾಲ್ಕು ವಿಧಾನಸಭಾ ಕ್ಷೇತ್ರಗಳ ಚುನಾವಣೆಯಲ್ಲಿ ಮೊದಲ ಬಾರಿಗೆ ಮತದಾನ ಮಾಡುವ ಸಂಭ್ರಮದಲ್ಲಿ ಯುವ ಮತದಾರರಿದ್ದಾರೆ.

    ಒಟ್ಟು 15,690 ಯುವ ಮತದಾರರಿದ್ದು, ಹನೂರು ತಾಲೂಕಿನಲ್ಲೇ ಹೆಚ್ಚು ಯುವ ಮತದಾರರು ಇದ್ದಾರೆ. ಹನೂರು-4600, ಕೊಳ್ಳೇಗಾಲ-3579, ಚಾಮರಾಜನಗರ-3512, ಗುಂಡ್ಲುಪೇಟೆ-3999 ಮತದಾರರು ಇದ್ದಾರೆ. ಇವರನ್ನು ಆಕರ್ಷಿಸುವ ಸಲುವಾಗಿ ಹನೂರು ಪಟ್ಟಣದ ಮುಖ್ಯರಸ್ತೆಯಲ್ಲಿರುವ ಸ.ಹಿ.ಪ್ರಾ.ಶಾಲೆ, ಕೊಳ್ಳೇಗಾಲ ಪೂರ್ವಭಾಗದ ಎಂಸಿಕೆಸಿ ಪ್ರೌಢ ಶಾಲೆ, ಚಾ.ನಗರದ ಸರ್ಕಾರಿ ತಮಿಳು ಹಿರಿಯ ಪ್ರಾಥಮಿಕ ಶಾಲೆ ಹಾಗೂ ಗುಂಡ್ಲುಪೇಟೆ ಪೂರ್ವ ಭಾಗದ ಉನ್ನತೀಕರಿಸಿದ ಹಿ.ಪ್ರಾ.ಶಾಲೆ ಮತಗಟ್ಟೆಗಳನ್ನು ಯುವ ಉದ್ಯೋಗಿ ಮತದಾನಾಧಿಕಾರಿಗಳ ಮತಗಟ್ಟೆ ಎಂದು ಗುರುತಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts