More

    ಈಶ್ವರಮ್ಮ ಪ್ರೌಢಶಾಲೆಯಲ್ಲಿ ಮಂತ್ರಿಮಂಡಲ ರಚನೆ -ಅನುಭವಮಂಟಪ ಪ್ರಜಾಪ್ರಭುತ್ವಕ್ಕೆ ಮಾದರಿ 

    ದಾವಣಗೆರೆ: ವಿಶ್ವಕ್ಕೆ ಮೊಟ್ಟಮೊದಲ ಬಾರಿಗೆ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪರಿಚಯಿಸಿದ ನಾಡು ಕರ್ನಾಟಕ ಎಂದು ಕನ್ನಡ ಸಾಹಿತ್ಯ ಪರಿಷತ್‌ನ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಹೇಳಿದರು.
    ನಗರದ ಈಶ್ವರಮ್ಮ ಪ್ರೌಢಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಶಾಲಾ ಮಂತ್ರಿಮಂಡಲದ ಪ್ರತಿಜ್ಞಾ ಸ್ವೀಕಾರ ಮತ್ತು ವಿದ್ಯಾರ್ಥಿ ಸಂಘದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.
    ಜಗತ್ತಿನ ಮೊದಲ ಸಂಸತ್ ಆಗಿರುವ ಹನ್ನೆರಡನೇ ಶತಮಾನದ ಅನುಭವ ಮಂಟಪ ವಿಶ್ವದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾದರಿ ಎಂದು ಹೆಮ್ಮೆ ವ್ಯಕ್ತಪಡಿಸಿದರು.
    ದೇಶದಲ್ಲಿ ಪ್ರಜೆಗಳ ಪ್ರತಿನಿಧಿಗಳಾಗಿ ಆಡಳಿತ ನಡೆಸಲು ಪ್ರಜಾಪ್ರಭುತ್ವ ವ್ಯವಸ್ಥೆ ಜಾರಿಯಲ್ಲಿದ್ದು, ಸರ್ಕಾರ ಶಾಲಾ ವಿದ್ಯಾರ್ಥಿಗಳಿಗೆ ಕಲ್ಪಿತ ಸಂಸತ್ತು ಸ್ಪರ್ಧೆ ಮೂಲಕ ಪ್ರಜಾಪ್ರಭುತ್ವದ ಅರಿವಿನ ಜತೆಗೆ ನಾಯಕತ್ವ ಗುಣಗಳನ್ನು ಬೆಳೆಸುತ್ತಿದೆ. ಇದು ವಿದ್ಯಾರ್ಥಿಗಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿ ಆಗಲಿ ಎಂದು ತಿಳಿಸಿದರು.
    ಪ್ರತಿಯೊಬ್ಬ ವಿದ್ಯಾರ್ಥಿಗಳು ಬುದ್ಧ್ದಿಶಕ್ತಿಯಲ್ಲಿ ಸಮಾನರು. ಹಲವರು ಇದನ್ನು ಚೆನ್ನಾಗಿ ಬಳಸಿಕೊಂಡು ಕಲಿಕೆಯಲ್ಲಿ ಪ್ರಗತಿ ಸಾಧಿಸಿದರೆ, ಕೆಲವರು ವಿನಿಯೋಗಿಸದೆ ಹಿಂದುಳಿಯುತ್ತಾರೆ. ಶಾಲೆಗಳಲ್ಲಿ ನಡೆಯುವ ಪಾಠವನ್ನು ನಿತ್ಯ ಅಧ್ಯಯನ ಮಾಡಿದರೆ ಯಶಸ್ಸು ಗಳಿಸಬಹುದು ಎಂದರು.
    ಈಶ್ವರಮ್ಮ ಶಾಲಾಡಳಿತ ಮಂಡಳಿ ಅಧ್ಯಕ್ಷೆ ಕೆ.ಆರ್. ಸುಜಾತ ಕೃಷ್ಣ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ದೇಶದ ಭವಿಷ್ಯದ ನಾಯಕರಾಗಿದ್ದು, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಆಡಳಿತ ನಿರ್ವಹಣೆ ತಿಳಿದುಕೊಳ್ಳಲು ಶಾಲಾ ಮಂತ್ರಿಮಂಡಲ ಒಂದು ಪ್ರಮುಖ ಹೆಜ್ಜೆಯಾಗಿದೆ. ಇದರ ಜತೆಗೆ ಅಧ್ಯಯನದಲ್ಲೂ ಉನ್ನತ ಸಾಧನೆ ಕೈಗೊಳ್ಳಬೇಕು ಎಂದು ತಿಳಿಸಿದರು.
    ಮುಖ್ಯಮಂತ್ರಿಯಾಗಿ ವಿದ್ಯಾರ್ಥಿನಿ ಎಚ್.ಎಂ.ಶ್ರೀದೇವಿ, ವಿರೋಧ ಪಕ್ಷದ ನಾಯಕನಾಗಿ ಆರ್.ಎಲ್.ಸುಭಾಷ್, ಉಪಮುಖ್ಯಮಂತ್ರಿಯಾಗಿ ಭೂಮಿಕಾ ಎ. ಪಾಲಂಕರ್ ಹಾಗೂ ಇತರ ವಿದ್ಯಾರ್ಥಿಗಳು ವಿವಿಧ ಖಾತೆಗಳ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಶಾಲೆ ಮುಖ್ಯಶಿಕ್ಷಕ ಕೆ.ಎಸ್.ಪ್ರಭುಕುಮಾರ್ ಪ್ರಮಾಣ ವಚನ ಬೋಧಿಸಿದರು. ಉಪ ಪ್ರಾಚಾರ್ಯೆ ಜಿ.ಎಸ್.ಶಶಿರೇಖಾ ಸ್ವಾಗತಿಸಿದರು. ಶ್ರೀದೇವಿ ನಿರೂಪಿಸಿದರು. ಈಶ್ವರಮ್ಮ ಟ್ರಸ್ಟ್ ಕಾರ್ಯದರ್ಶಿ ಜಿ.ಆರ್.ವಿಜಯಾನಂದ್, ಸಹಶಿಕ್ಷಕಿ ಹೇಮಲತಾ ಇತರರಿದ್ದರು.
    ಇದೇ ವೇಳೆ ನಾ.ಕಸ್ತೂರಿ ಸಾಹಿತ್ಯ ಮತ್ತು ಪ್ರತಿಭಾ ವಿಕಸನ ವೇದಿಕೆ, ಸಿ.ವಿ.ರಾಮನ್ ವಿಜ್ಞಾನ ಸಂಘ, ಅಬ್ದುಲ್ ಕಲಾಂ ತಂತ್ರಜ್ಞಾನ ವೇದಿಕೆ ಹಾಗೂ ಧ್ಯಾನ್‌ಚಂದ್ ಕ್ರೀಡಾ ವೇದಿಕೆಗಳನ್ನು ಉದ್ಘಾಟಿಸಲಾಯಿತು.
    —–

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts